ಅಂಗಳ      ಹಾಡು ಹಕ್ಕಿ
Print this pageAdd to Favorite


ಹನಿಕತೆ: ಪ್ಯಾರ್ಗೇ ಆಗಿಬುಟ್ಟೈತೆ...ಮಾಮಣ್ಣಂಗೇ...

'ಪಿಳ್ಳಂಗೋವಿ'
 
ಪ್ರಹ್ಲಾದ್ ಮಾಮಣ್ಣ ಸ್ಟೇಟ್ ಬ್ಯಾಂಕ್ ಆಫ್ ಕರ್ನಾಟಕಕ್ಕೆ ತಮ್ಮ ಇಡೀ ಸರ್ವೀಸು ಕೊಟ್ಟು ಆಗಷ್ಟೇ ರಿಟೈರ್ ಆಗಿದ್ದರು. ಮಗಳನ್ನು ಅಮೆರಿಕಾದ ಹುಡುಗನಿಗೆ ಕೊಟ್ಟು ಹತ್ತು-ಹದಿನೈದು ವರ್ಷಗಳೇ ಕಳೆದಿದ್ದವು. ಮಗ ಆರೇಳು ವರ್ಷಗಳ ಹಿಂದೆ ಇನ್ಫೋಸಿಸ್ ನ ಬೆನ್ನು ಹತ್ತಿ ಅಮೆರಿಕಾಗೆ ಹಾರಿದ್ದ. ಬರುತ್ತಿದ್ದ ಪೆನ್ಷನ್ ಜೊತೆಗೆ ಮಕ್ಕಳಿಬ್ಬರೂ ತಿಂಗಳಿನ ಎಲ್ಲ ಖರ್ಚಿಗೆ ಸಾಕಾಗಿ ಉಳಿಸುವಷ್ಟು ಹಣ ಕಳಿಸುತ್ತಿದ್ದರಿಂದ, ಮಾಮಣ್ಣ ಮತ್ತು ಸುಕನ್ಯತ್ತೆ ಬೆಂಗಳೂರಿನ ತಮ್ಮ ನೆಂಟರು ಇಷ್ಟರ ಮದುವೆ, ಮುಂಜಿ, ಗೃಹಪ್ರವೇಶ, ಸತ್ಯನಾರಾಯಣ ಪೂಜೆ ಇತ್ಯಾದಿಗಳನ್ನು ಆಗಾಗ ಅಟೆಂಡ್ ಮಾಡಿಕೊಂಡು ಖುಷಿಯಾಗಿದ್ದರು. ಒಂದೆರಡು ಬಾರಿ ಅಮೆರಿಕಾಗೆ ಹೋಗಿ ಐದಾರು ತಿಂಗಳು ಇದ್ದುಬದ್ದಿದ್ದರಿಂದ ಅವರಿಗೆ ನೆಂಟರಿಷ್ಟರ ನಡುವೆ ಗೌರವ ಜಾಸ್ತಿ. ಪ್ರಪಂಚ ಕಂಡವರಲ್ಲವೇ.

ಕೆಲಸ ಮಾಡುವಷ್ಟೂ ದಿನ ಬೆಳಿಗ್ಗೆಯಿಂದ ಸಂಜೆವರೆಗೆ ಬ್ಯಾಂಕಿನ ಕೆಲಸ ಮುಗಿಸಿ ಮುಸ್ಸಂಜೆ ಮನೆ ತಲುಪಿ ಮತ್ತಷ್ಟು ಲೆಕ್ಕಾಚಾರಗಳನ್ನು ಮಾಡಿ, ಊಟ ಮುಗಿಸಿ ಮಲಗಿ ಮತ್ತೆ ಮರುದಿನ ಅದೇ ದಿನಚರಿಯನ್ನು ಚಾಚೂ ಬದಲಾವಣೆಯಿಲ್ಲದೆ ಮುಂದುವರಿಸುತ್ತಿದ್ದ ಪ್ರಹ್ಲಾದ್ ಮಾಮಣ್ಣ ಸರ್ವೀಸಿನಲ್ಲಿದ್ದಷ್ಟೂ ದಿನ ಕೆಲಸ ಬಿಟ್ಟರೆ ಮತ್ತೊಂದನ್ನು ಮಾಡಿದವರಲ್ಲ. ವರ್ಷಕ್ಕೊಂದು ಸಾರಿ ಮಂತ್ರಾಲಯಕ್ಕೆ ಹೋಗಿ ಗುರು ರಾಘವೇಂದ್ರರಾಯರನ್ನು ನೋಡಿಕೊಂಡು ಬಂದರೆ ತಂದೆತಾಯಂದಿರನ್ನು ನೋಡಿಕೊಂಡು ಬಂದಂಥ ನೆಮ್ಮದಿಯಲ್ಲಿ ಇದ್ದುಬಿಡುತ್ತಿದ್ದರು.
 
ಮಾಮಣ್ಣನಿಗೆ ತಂದೆತಾಯಂದಿರು ಚಿಕ್ಕವಯಸ್ಸಿನಲ್ಲೇ ಹೋಗಿ ಬಿಟ್ಟಿದ್ದರು. ಅವರು ಸುಕನ್ಯತ್ತೆಯ ಮನೆಯ ವಾರಾನ್ನ ತಿಂದೇ ಬೆಳೆದವರು. ಅದೇನು ಋಣವೋ ಏನೋ ಕಡೆಗೊಂದು ದಿನ ಬ್ಯಾಂಕಿನಲ್ಲಿ ಒಳ್ಳೆ ನೌಕರಿ ಹಿಡಿದು ಉಳ್ಳವರ ಮನೆಯ ಹುಡುಗಿ ಸುಕನ್ಯತ್ತೆಯ ಕೈ ಹಿಡಿದಿದ್ದರು. ಹಾಡು ಹಸೆ ಪೂಜೆ ಪುನಸ್ಕಾರಗಳನ್ನೆಲ್ಲಾ ಚನ್ನಾಗಿ ಕಲಿತು ಸೈಎನಿಸಿಕೊಂಡಿದ್ದ ಸುಕನ್ಯತ್ತೆ ಕೈಹಿಡಿದ ಪತಿಯಪಾಲಿಗೆ ನಂದಾದೀಪ. ಒಬ್ಬರು ಒಂದನ್ನು ಒಪ್ಪಿದರೆ ಇನ್ನೊಬ್ಬರು ಆ ತೀರ್ಮಾನದ ಬಗ್ಗೆ ಮರು ಮಾತಾಡುತ್ತಿರಲಿಲ್ಲ. ಹೋಗುವುದೇ ಅಪರೂಪ; ಆಗಲೂ ಒಬ್ಬರನ್ನು ಬಿಟ್ಟು ಮತ್ತೊಬ್ಬರು ಯಾವುದೇ ಸಮಾರಂಭ ಪೂಜೆಗಳಿಗೆ ಹೋಗಿಬರುತ್ತಿರಲಿಲ್ಲ. ಯಾವುದಾದರೂ ವಿಷಯದ ಕುರಿತಾಗಿ ಸುಕನ್ಯತ್ತೆಯನ್ನು ಕೇಳಿದರೆ ’ಅವರನ್ನು ಕೇಳಿ’ ಎಂದು ಮಾಮಣ್ಣನ ಕಡೆಗೆ ಕಳಿಸುತ್ತಿದ್ದರು. ಅದೇ ಮಾಮಣ್ಣ ’ನಮ್ಮ ಶ್ರೀಮತಿಯನ್ನು ಕೇಳಿಬಿಡಿ’ ಎಂದು ಮತ್ತೆ ಕಳಿಸುತ್ತಿದ್ದರು. ಅವರ ಬಗ್ಗೆ ಗೊತ್ತಿದ್ದವರ್ಯಾರೂ ಅವರಿಬ್ಬರಲ್ಲಿ ಯಾರಾದರೂ ಒಬ್ಬರೇ ಇದ್ದಾಗ ಯಾವ ವಿಷಯವನ್ನೂ ಅಥವಾ ಇಲ್ಲಿಗೆ ಬರುತ್ತೀರಾ ಅಂತಲೂ ಕೇಳುತ್ತಲೇ ಇರಲಿಲ್ಲ. ಇಬ್ಬರೂ ಲಕ್ಷ್ಮೀನಾರಾಯಣರಂತೆ ಜೊತೆಗಿದ್ದಾಗಲೇ ಮಾತಾಡಿಸಿ ಆಮಂತ್ರಿಸುತ್ತಲೋ ಅಥವಾ ಸಲಹೆ ಕೇಳುತ್ತಲೋ ಇದ್ದರು. ಅವರದು ಆ ಬಗೆಯ ಅನ್ಯೋನ್ಯತೆ, ಪರಾವಲಂಬನೆ. 
 

 

 
ಮಾಮಣ್ಣ ಬ್ಯಾಂಕಿಗೆ ಹೋಗುತ್ತಿಗಿದ್ದಾಗ ಸುಕನ್ಯತ್ತೆ ಮನೆ ಬಿಟ್ಟು ಹೊರಗೆ ಕಾಲಿಡುತ್ತಿರಲಿಲ್ಲ. ಅವರು ಉದ್ಯೋಗಸ್ತೆಯಾಗಲಿಲ್ಲವಾದರೂ ಬೆಳಗಿಂದ ಸಂಜೆಯವರೆಗೆ ಬಿಡುವಿಲ್ಲದೆ ತೊಡಗಿಸಿಕೊಂಡಿರುತ್ತಿದ್ದರು. ಅವರಿಗೆ ಕೈ ಕೆಲಸದ ಚಟ. ಒಂದು ದಿನ ಬುಟ್ಟಿ ಹೆಣೆಯಲು ಕೂತರೆ ಇನ್ನೊಂದು ದಿನ ಸ್ವೆಟರ್ ಹಾಕುವುದು. ಮತ್ತೊಂದು ದಿನ ಹಪ್ಪಳ ಮಾಡಿಡುತ್ತಿದ್ದರು. ಫಳಫಳಿಸುವ ನಾಕಾಣಿ ಎಂಟಾಣಿ ನಾಣ್ಯಗಳನ್ನು ಕೂಡಿಹಾಕಿಕೊಂಡು ಅವನ್ನು ಅಂಟಿಸಿ ದೇವರ ಮಂಟಪಗಳನ್ನು ಮಾಡುತ್ತಿದ್ದರು. ಮಾಮಣ್ಣನ ಹತ್ತಿರ ಬ್ಯಾಂಕಿನಿಂದ ಆಗಾಗ ತರಿಸಿಕೊಳ್ಳುತ್ತಿದ್ದ ಗರಿಗರಿ ಐದು ಹತ್ತು ರೂಪಾಯಿಗಳ ನೋಟುಗಳಿಂದ ದೇವರ ಚಾಮರಗಳನ್ನು ಮಾಡಿಡುತ್ತಿದ್ದರು. ಅವರ ಮನೆಗೆ ಬಂದವರು ಅವರು ಮಾಡಿದ ಏನಾದರೂ ಒಂದು ವಸ್ತುವನ್ನು ಉಡುಗೊರೆಯಾಗಿ ಪಡೆಯದೆ ಇರುತ್ತಿರಲಿಲ್ಲ. ಅವರ ಎಲ್ಲಾ ಬಂಧು ಮಿತ್ರರ ಮನೆಯಲ್ಲೂ ಸುಕನ್ಯತ್ತೆ ಮಾಡಿದ್ದ ಏನಾದರೊಂದು ಕಸೂತಿ ವಸ್ತು ಇರುತ್ತಿತ್ತು.
 
ಸುಕನ್ಯತ್ತೆ ಮಾಡುತ್ತಿದ ಎಲ್ಲವೂ ಮಾಮಣ್ಣನಿಗೆ ಅತ್ಯಂತ ಉತ್ಕೃಷ್ಟವಾದದ್ದಾಗಿತ್ತು. ಮಾಮಣ್ಣ ಮೆಚ್ಚಿದರೆ ಸುಕನ್ಯತ್ತೆಗೆ ಸಾರ್ಥಕ. ಜಾಗತೀಕರಣದ ಹರಿಬಿರಿ ಗಡಿಬಿಡಿ ನವನವೀನ ನಾಗರೀಕತೆಯ ಕಂಪನಗಳ ಮಧ್ಯದಲ್ಲೇ, ಬೆಂಗಳೂರು ಮಹಾನಗರಿಯ ಮಲ್ಲೇಶ್ವರಂ ಎಂಬ ಜನಜಾತ್ರೆಯ ನಟ್ಟ ನಡುವಿನಲ್ಲಿ ಪುಟ್ಟದೊಂದು ’ಸ್ವಂತಮನೆ’ಯಲ್ಲಿ ಸಂಸಾರ ನಡೆಸಿಕೊಂಡಿದ್ದ ಈ ದಂಪತಿಗಳ ಬದುಕಿಗೆ ಮಾತ್ರ ’ರಿಟೈರ್ಮೆಂಟ್’ ಎಂಬುದೊಂದನ್ನು ಬಿಟ್ಟರೆ ಬೇರ್ಯಾವ ಬದಲಾವಣೆಗಳೂ ಬಂದೇ ಇರಲಿಲ್ಲ. ಮಗಳು ಮಗ ಕೇಳಿಕೊಂಡು ಬೈದುಕೊಂಡು ಸಾಕಾಗಿದ್ದರೂ ಮನೆಯ ಹಾಲಿನ ಮೂಲೆಯಲ್ಲಿ ಮುದಿ ಸದಸ್ಯನಂತೆ ಕೂತಿದ್ದ ಅಪ್ಟ್ರಾನ್ ಎಂಬುದೊಂದು ಭೂತಕಾಲದ ಟಿವಿ, ಉಷಾ ಫ಼್ಯಾನು, ಅಳಿಯನ ಕಡೆಯವರಿಗೆ ತೋರಿಸಲೋ ಎಂಬಂತೆ ತೆಗೆದಿಟ್ಟು ಕಡೆಗೆ ನಿಂತಲ್ಲೇ ಶಿಲೆಯಾಗಿದ್ದ ಥರ್ಡೋ ಫ಼ೋರ್ತೋ ಹ್ಯಾಂಡು ಫಿಯಟ್ ಕಾರು ಇವಿಷ್ಟು ಬಿಟ್ಟರೆ ಅವರ ಮನೆಯಲ್ಲಿ ಬೇರಾವ ನವೀನ ನಾಗರೀಕತೆಯೂ ಇರಲಿಲ್ಲ.  
 

ಮನೆಯೆದುರೇ ಇರುವ ನಂದಿನಿ ಬೂತು, ಅದರ ಪಕ್ಕದಲ್ಲೇ ಬಂದು ಕೂತು ಬೆಳಿಗ್ಗೆ ಬೆಳಿಗ್ಗೆಯೇ ಬಿಸಿಬಿಸಿ ವ್ಯಾಪಾರ ಮುಗಿಸಿಬಿಡುವ ಸೊಪ್ಪಿನಮ್ಮ, ಪಕ್ಕದ ಬೀದಿಯಲ್ಲಿದ ಹಾಪ್ಕಾಮ್ಸ್, ದಿನಸಿ ಅಂಗಡಿ, ಎರಡು ಕ್ರಾಸು ದಾಟಿದರೆ ಸಿಗುತ್ತಿದ್ದ ಮಿಲ್ಲಿನವನು, ಅದರೆದುರೇ ಇದ್ದ ರಾಯರ ಮಠ...ಅವರ ದಿನಚರಿ ಮಲ್ಲೇಶ್ವರಂನಲ್ಲಿ ಅವರಿದ್ದ ರಸ್ತೆಯ ಅಕ್ಕಪಕ್ಕದ ಎರಡು ಮೂರು ರಸ್ತೆಗಳಿಗಷ್ಟೇ ಸೀಮಿತವಾಗಿಬಿಟ್ಟಿದ್ದವು. ಮಕ್ಕಳು ಮೊಮ್ಮಕ್ಕಳು ಬಂದಾಗ ಅವರು ಮಾಡುವ ಗಲಾಟೆ, ಸಂಭ್ರಮ, ತಿರುಗಾಟ ಬಿಟ್ಟರೆ ಗಂಡ ಹೆಂಡತಿ ಮನೆಬಿಟ್ಟು ಅಲುಗಾಡುತ್ತಿರಲಿಲ್ಲ. ಮಾಲ್-ಶಾಪಿಂಗ್ ಎನ್ನುವ ವಿಷಯಕ್ಕೆ ತಲೆಯೇ ಹಾಕಿರಲಿಲ್ಲ. ಅವರಿಬ್ಬರ ಸಾಮೀಪ್ಯ ಸಖ್ಯದಲ್ಲಿ ಆ ಮನೆಯ ಸೂರಿನ ಕೆಳಗೆ ತಮ್ಮಷ್ಟಕ್ಕೆ ತಾವು ಬದುಕು ಬೆಳಗಿಸಿಕೊಂಡಿದ್ದರು.
 

ಇತ್ತೀಚೆಗೆ ಪಕ್ಕದ ರಸ್ತೆಯಲ್ಲೇ ಇದ್ದ ಕೌಸಲ್ಯ ಚಿಕ್ಕಮ್ಮ ತಮ್ಮ ಮನೆಗೆ ಒಣಕೊಬರಿಯ ಮೇಲೆ ಅಂದವಾಗಿ ಕೆತ್ತನೆ ಮಾಡುವುದನ್ನು ಹೇಳಿಕೊಡಲು ಯಾರೋ ಮಹಿಳೆ ಬರುತ್ತಿರುವುದಾಗಿ ಸುಕನ್ಯತ್ತೆಗೆ ತಿಳಿಸಿ ಆ ಕ್ಲಾಸಿಗೆ ಬರಲೇ ಬೇಕೆಂದು ಸುಕನ್ಯತ್ತೆಯನ್ನು ಒತ್ತಾಯ ಮಾಡಿದ್ದರು. ಮನೆಯಲ್ಲೇ ಇರುತ್ತಿದ್ದ ಮನೆಯವರನ್ನು ಬಿಟ್ಟು ಹೋಗಲು ಸುಕನ್ಯತ್ತೆಗೆ ಮನಸ್ಸು ಬರುವುದಿದೆಯೋ? ಆದರೆ ಮಾಮಣ್ಣನೂ ಹೋಗಿ ಬಾ ಅಂತ ಹುರಿದುಂಬಿಸಿದ್ದರಿಂದ ಸುಕನ್ಯತ್ತೆ ಒಲ್ಲದ ಮನಸ್ಸಿಂದಲೆ ವಾರದಲ್ಲಿ ಮೂರುದಿನ ಮಧ್ಯಾನ್ಹ ಕೌಸಲ್ಯ ಚಿಕ್ಕಮ್ಮನ ಮನೆಗೆ ಹೋಗಿಬರುತ್ತಿದ್ದರು. ಆಗ ಮಾತ್ರ ಮಾಮಣ್ಣ ಒಬ್ಬರೇ ಪೇಪರ್ ಓದುತ್ತಲೋ ಸುಮ್ಮನೆ ಕೂತು ದೇವರ ಹಾಡುಗಳನ್ನು ಗುನುಗುನಿಸುತ್ತಲೋ, ಏನೋ ಧ್ಯಾನ ಮಾಡಿಕೊಳ್ಳುತ್ತಲೋ ಕಾಲಕಳೆದುಕೊಳ್ಳುತ್ತಿದ್ದರು.
 
 
ಹೀಗಿರುವಾಗ ಒಂದು ಬಿರುಬೇಸಿಗೆಯ ಮಧ್ಯಾನ್ಹ ಮನೆಯ ಗೇಟು ತೆಗೆದ ಶಬ್ದ. ಆ ಹೊತ್ತಿನಲ್ಲಿ ಆ ಮನೆಗೆ ಯಾರೂ ಬರುವುದೇ ಅತಿ ಅಪರೂಪ. ಯಾರು ಬಂದಿರಬಹುದು ಕಾಂಪೌಂಡಿನೊಳಗೆ? ಹೂ ಕೊಯ್ದುಕೊಂಡು ಹೋಗಲು ಯಾರಾದರೂ ಬಂದಿರಬಹುದಾ? ತೆಂಗಿನಕಾಯೇನಾದರೂ ಬಿದ್ದು ಅದನ್ನು ಹೆಕ್ಕಿಕೊಳ್ಳಲು ಯಾರಾದರೂ ಬಂದಿರಬಹುದಾ, ಕಾಯಿ ಬಿದ್ದದ್ದು ನನಗೆ ಕೇಳಿಸಿಯೇ ಇಲ್ಲವಲ್ಲಾ ಮಾಮಣ್ಣ ವರಾಂಡಾಗೆ ಬಂದು ಕಾಂಪೌಂಡಿನೊಳಗೆ ಕಣ್ಣಾಡಿಸಿದರು. ಅಷ್ಟರಲ್ಲಿ ದಡುಂ ಎಂದು ಮನೆಯ ಮೇಲೆ ಏನೋ ಬಿದ್ದು ಉರುಳಾಡಿದ, ಓಡಾಡಿದ ಸದ್ದು. ಬಾಗಿಲು ತೆರೆದು ಹೊರಗೆ ಹೋಗಿ ನೋಡಿದರೆ ಯಾರೊ ತಾರಸಿಯ ಮೇಲೆ ಓಡಾಡುತ್ತಿದ್ದರು. ಇವರು ಹೊರಗೆ ಬಂದದ್ದು ಮೇಲಿದ್ದ ವ್ಯಕ್ತಿಗೆ ಕಾಣಿಸಿತೋ ಏನೋ. ’ಸಾರಿ ಸಾರ್. ಕಂಪ್ಲೇಂಟ್ ಬಂದ್ ಬುಡ್ತು. ಇಡೀ ಬೀದಿಲಿ ಕನೆಕ್ಷನ್ ಸರಿಯಿಲ್ವಂತೆ...ಮೂರೇ ನಿಮ್ಷ ಸಾರ್. ಕನೆಕ್ಷನ್ನ್ ಚಕ್ ಮಾಡಿ ಗೇಟ್ ನ ಸರೀಗಾಕಂಡು ಹೋಗ್ಬುಡ್ತೀನಿ...’ ಅಂದ ಆ ಹುಡುಗ. ಆಗಲೆಂಬಂತೆ ತಲೆಯಾಡಿಸಿ ಒಳಗೆ ಹೋಗಲು ಕೆಲಸವೇನೂ ಇಲ್ಲದ್ದರಿಂದ ಮೆಟ್ಟಿಲ ಮೇಲೆ ಕುಳಿತರು.
 
 
ಹತ್ತು ಹದಿನೈದು ನಿಮಿಷ ಅಲ್ಲಿಂದಿಲ್ಲಿಗೆ ಗುಡುಗುಡೂ ಎಂದು ಓಡಾಡಿ ಆ ಹುಡುಗ ದೊಪ್ಪನೆ ಕೆಳಗೆ ಧುಮುಕಿದ. ಇಡೀ ಊರನ್ನು ಸಂಭಾಳಿಸುವ ಹರಿಬಿರಿಯಲ್ಲಿ ಧುಮುಕುವಾಗ ಕಾಂಪೌಂಡಿಗೆ ಹಿಮ್ಮಡಿ ತಾಕಿಸಿಕೊಂಡು ನೋವಿನಿಂದ ಕೂಗಿಕೊಂಡ.  ’ನೋಡಿಕೊಂಡು ಇಳೀಬಾರದೇನಪ್ಪಾ’ ಮಾಮಣ್ಣ ಅವನನ್ನು ಹಿಡಿದುಕೊಂಡು ಎರಡು ನಿಮಿಷ ಮೆಟ್ಟಿಲ ಮೇಲೆ ಕೂರಿಸಿಕೊಂಡರು. ಸಣಕಲು ಶರೀರ, ಎಣ್ಣೆಕಾಣದೆ ಬರಡಾಗಿದ್ದ ತಲೆ, ಒಣಗಿ ಸೀಳು ಬಿಟ್ಟಿದ್ದ ತುಟಿ, ಮುಖದ ತುಂಬಾ ಧಾರಾಕಾರವಾಗಿ ಇಳಿಯುತ್ತಿದ್ದ ಬೆವರು... ಆ ಹುಡುಗ ಹಿಮ್ಮಡಿ ಉಜ್ಜಿಕೊಂಡು ಕಾಲೂರಲು ನೋವು ಪಡುತ್ತಾ ’ತ್ಯಾಂಕ್ಸ್ ಸಾರ್’ ಎಂದು ಹೊರಡಲು ಎದ್ದಾಗ ’ನಿಲ್ಲಪ್ಪಾ’ ಎಂದವರು ಅಡಿಗೆಮನೆಯಲ್ಲಿ ಸುಕನ್ಯತ್ತೆ ಬೇಸಿಗೆಯಲ್ಲಿ ಪ್ರತೀ ದಿನವೂ ಮಾಡಿ ತುಂಬಿಸಿಡುತ್ತಿದ್ದ ಶುಂಟಿ ಮಜ್ಜಿಗೆಯನ್ನು ಚೊಂಬಿನ ತುಂಬಾ ತುಂಬಿಕೊಂಡು ಕೈಲಿ ಎರಡು ಏಲಕ್ಕಿ ಬಾಳೆಹಣ್ಣು ಹಿಡಿದುಕೊಂಡು ಹೊರಗೆ ಬಂದರು. ’ಇಲ್ಲಾ ಸಾರ್ ಪರ್ವಾಗಿಲ್ಲಾ...ಕೆಲ್ಸ ಐತೆ..’ಹುಡುಗ ಮುಜುಗರದಿಂದ ಹೊರಟಿದ್ದ. ಅವನನ್ನು ಭುಜ ಹಿಡಿದು ನಿಲ್ಲಿಸಿ ’ಈ ಬಿಸಿಲಲ್ಲೇ ಇನ್ನೆರೆಡು ಗಂಟೆ ಓಡಾಡಿದರೆ ತಲೆಗಿಲೆ ಸುತ್ತೀತು...ಇದನ್ನು ತಗೊಂಡು ಹೋಗಪ್ಪಾ’ ಅಂತ ಆ ಹುಡುಗನನ್ನು ಅಲ್ಲೇ ಕೂರಿಸಿ ಮಜ್ಜಿಗೆ ಕುಡಿಸಿ, ಅವನು ಸಂಕೋಚದಿಂದ ಹಣ್ಣು ತಿನ್ನುವಾಗ ಅವನ ಕೇಬಲ್ ಕಂಪನಿಯ ಕೆಲಸ ಅದೂ ಇದೂ ಕೇಳಿದ್ದರು. ಹುಡುಗ ಸುಧಾರಿಸಿಕೊಂಡು ಹೋಗಿದ್ದ. ಮಾಮಣ್ಣ ದಿನ ಮುಂದುವರಿಸಿದ್ದರು.
 
 
ಮರುದಿನ ಮಧ್ಯಾನ್ಹ ಅದೇ ಸಮಯಕ್ಕೆ ಮನೆ ಬಾಗಿಲು ತಟ್ಟಿದ ಸದ್ದು. ಮಾಮಣ್ಣ ಬಾಗಿಲು ತೆರೆದಾಗ ಆ ಹುಡುಗ ನಿಂತಿದ್ದ. ಓ ಇವನು! ಅವರು ಅವನನ್ನು ಮಾತಾಡಿಸುವ ಮೊದಲೇ ಆ ಹುಡುಗ ’ಸಾರ್ ಒಂದೇ ನಿಮ್ಷದ ಕೆಲಸ, ಮನೆ ಮೇಲೆ ಹತ್ತಬೇಕು’ ಅಂದವನೇ ಉತ್ತರಕ್ಕೂ ಕಾಯದೆ ಹತ್ತಿಬಿಟ್ಟಿದ್ದ. ’ಒಂದು ದಿನ ಸದರ ಕೊಟ್ರೆ ತಲೇ ಮೇಲೇ ಓಡಾಡುತ್ವೆ ಮುಂಡೇವು’ ಮಾಮಣ್ಣ ಮನಸ್ ಪೂರ್ತಿ ಬೈದುಕೊಳ್ಳುವಷ್ಟರಲ್ಲಿ ಕೆಳಗೆ ಧುಮುಕಿ ’ಆಯ್ತು ಸಾರ್. ಈಗ ಒಳಗಡೆ ಟ್ಯೂನ್ ಮಾಡ್ತಿನಿ...ಏನೂ ತಪ್ತಿಳ್ಕಬೇಡಿ ಸಾರ್’ ಅಂದವನೇ ಮಾಮಣ್ಣನನ್ನು ಸರಿಸಿಕೊಂಡೇ ಒಳಗೆ ಬಂದುಬಿಟ್ಟ. ಅನಾಮತ್ತಾಗಿ ಆ ಹುಡುಗ ಮನೆಯ ಒಳಗೇ ಬಂದುನಿಂತಾಗ ಮಾಮಣ್ಣ ಗಾಬರಿಯಾಗಿ ’ಏನದು? ಏನು ಮಾಡ್ತಿದ್ದೀಯಾ?!’ ಎಂದು ಇದ್ದಬದ್ದ ಧೈರ್ಯದಲ್ಲಿ ಕೇಳುವಷ್ಟರಲ್ಲಿ ಆ ಹುಡುಗ ಹಾಲಿನಲ್ಲಿದ್ದ ಟಿವಿಯ ಹತ್ತಿರ ಬಂದು ಕಿಟಕಿಯಿಂದ ಅದ್ಯಾವುದೋ ವಯರ್ ಎಳೆದುಕೊಂಡು ಟಿವಿಗೆ ಸಿಕ್ಕಿಸುತ್ತಿದ್ದ. ಮಾಮಣ್ಣ ಆತಂಕ ಇಳಿದಿರಲಿಲ್ಲ. ದಾರಿಯಲ್ಲಿ ಹೋಗುತ್ತಿದ್ದ ಮಾರಿಯನ್ನು ಮನೆಗೆ ಬಿಟ್ಟುಕೊಂಡೆನಲ್ಲಪ್ಪಾ ಕೃಷ್ಣಾ ಎಂದು ಕಕ್ಕಾಬಿಕ್ಕಿಯಾಗಿದ್ದಾಗಲೇ ’ಸಾರ್ ಮೂರ್ನೆ ಚಾನಲ್ಗೆ ಸುವರ್ಣ ನ್ಯೂಸ್, ನಾಲ್ಕ್ನೆ ಚಾನಲ್ಗೆ ಉದಯ ಟಿವಿ, ಐದನೆದಿಕ್ಕೆ ಈ ಟಿವಿ, ಆರ್ರಲ್ಲಿ ಜೀ...’ ಹೋಟೇಲಿನ ಬೇರರ್ ರವೆ ಇಡ್ಲಿ, ರವೆ ದೋಸೆ, ಮಸಾಲೆ ದೋಸೆ, ಚಪಾತಿ...ನಿರರ್ಗಳವಾಗಿ ಮೆನು ಹೇಳುವಂತೆ ಒಂದಷ್ಟು ಚಾನಲ್ ಹೆಸರು ಹೇಳಿ ’ನೀವೇ ನೋಡ್ಕಳಿ...ಒಟ್ಟು ಅದ್ನೈದದ್ನಾರು ಚಾನೆಲ್ ಬರಬೇಕು...ಬರ್ನಿಲ್ಲ ಅಂದ್ರೆ ಏಳಿ...ಮತ್ತೆ ಪಿಕ್ಸ್ ಮಾಡಿಕೊಡ್ತೀನಿ...’ ಬಂದಷ್ಟೇ ವೇಗದಲ್ಲಿ ಹೊರಗೆ ಹೊರಟಿದ್ದ. ’ಅಯ್ಯೋ ಇದೆಲ್ಲಾ ನಮಗೆ ಬೇಡಪ್ಪಾ...ನಿಲ್ಲು...’ ಮಾಮಣ್ಣ ಕರೆದರೂ ’ಪರ್ವಾಗಿಲ್ಲ ಸಾರ್...ನಿಮ್ಮನೆ ಪಕ್ದವರಿಬ್ರಿಗೂ ಕೇಬಲ್ ಐತೆ. ನಿಮ್ಗೆ ಈಸಿಯಾಗಿ ಕ್ಯಾಚಾಯ್ತದೆ...ಬೇಜಾರಾದಾಗ ನೋಡ್ಕಳಿ...ನಮ್ಕಡೆಯಿಂದ ಫ್ರೀ ಸಾರ್...ಯಾರ್ಗೂ ಏಳ್ಬೇಡಿ ಮತ್ತೆ...ಬರ್ಲಾ...’ ಒಂದು ಚೊಂಬು ತಣ್ಣಗಿನ ಮಜ್ಜಿಗೆ-ಹಣ್ಣುಗಳ ವಿಶ್ವಾಸಕ್ಕೆ ಪ್ರತಿಯಾಗಿ ತನ್ನ ಕಡೆಯಿಂದ ಕೇಬಲ್ ವಯರ್ ಸಿಕ್ಕಿಸಿ ಮಾಯವಾಗಿದ್ದ!
 
 
’ಛೆ ಇದ್ಯಾಕೆ ಹೀಗೆ ಮಾಡಿದ? ಸುಮ್ಮನೆ ದಂಡ. ಏನು ಹುಡುಗಾನೋ...’ ಮಾಮಣ್ಣ ಯೋಚಿಸಿ ಸುಮ್ಮನಾಗಿದ್ದರು. ಸುಕನ್ಯತ್ತೆ ಬಂದಾಗ ಇವತ್ತು ನೆನ್ನೆಯ ಘಟನೆಯನ್ನೆಲ್ಲಾ ಹೇಳಿದ್ದರು. ’ಹೌದಾ...ಹಾಗಾಯ್ತಾ...ನೀವು ಯಾರ್ಯಾರಿಗೋ ಬಾಗಿಲು ತೆಗೆಯೋದು ನಿಲ್ಲಿಸಿಬಿಡೀಪ್ಪಾ...ಕಾಲ ಸರಿಯಿಲ್ಲಾ...ನಾನು ನಾಳೆಗೆ ಒಂದು ಕೊಬರಿ ಮೇಲೆ ಕೃಷ್ಣನ ತೊಟ್ಟಿಲು ಕೆತ್ತಿಕೊಂಡು ಹೋಗಬೇಕು ಅಂತ ನಮಗೆ ಕಲಿಸ್ತಿರೋ ಮೇಡಂ ಹೇಳಿದ್ದಾರೆ. ಪ್ರೈಜ್ ಇದೆಯಂತೆ...’ ಸುಕನ್ಯತ್ತೆ ಮಾಮಣ್ಣನ ಸಾಹಸಮಯ ಫ್ರೀ ಕೇಬಲ್ ಅನುಭವಕ್ಕೆ ಹೆಚ್ಚಿನ ಉತ್ಸಾಹ ತೋರಿಸದೆ ತಮ್ಮ ಕಸೂತಿ ಕೆಲಸವನ್ನು ಮುಂದುವರಿಸಲು ಹೋಗಿಬಿಟ್ಟಿದ್ದರು. ಅವರ ಪ್ರತಿಕ್ರಿಯೆ ನಿರುತ್ಸಾಹದಾಯಕವಾಗಿದ್ದರಿಂದ ಮಾಮಣ್ಣನೂ ಎಂದಿನಂತೆ ಹಾಡು ಗುನುಗುನಿಸಿಕೊಳ್ಳುತ್ತಾ ಕೂತರು. ಹೊಸದೊಂದು ವೈರಿಗೆ ಕುಂಡಿಕೊಟ್ಟುಕೊಂಡಿದ್ದರೂ ತನ್ನ ಮೇಲೆ ಈ ಮನೆಯ ಜನ ತೋರುವ ದಿವ್ಯ ನಿರ್ಲಕ್ಷ್ಯಕ್ಕೆ ಆ ಟಿವಿ ಶಾಪ ಹಾಕಿಕೊಳ್ಳುತ್ತಾ ಕೂತಂತಿತ್ತು. 
 
 
ಮಾರನೆಯ ದಿನ ಸುಕನ್ಯತ್ತೆ ಕ್ಲಾಸಿಗೆ ಹೋಗಿ ಹಾಲಿನಲ್ಲಿ ಕೂತು ಹಳೇ ಪೇಪರ್ ಓದುತ್ತಿದ್ದ ಮಾಮಣ್ಣನಿಗೆ ಕಿಟಕಿ ಕಯ್ ಕಯ್ ಕಯ್ ಎಂದು ಗಾಳಿಗೆ ಅಲುಗಾಡುತ್ತಾ ಮಾಡುತ್ತಿದ್ದ ಸದ್ದು ಹಿಡಿಸಲಿಲ್ಲ. ಅವರ ದೃಷ್ಟಿ ಕಿಟಕಿಯತ್ತ ಹೋಗಿ ಹಿಂದಿನ ದಿನ ಆ ಹುಡುಗ ಟಿವಿಗೆ ಸಿಗಿಸಿಟ್ಟು ಹೋದ ವೈರು ಕಾಣಿಸಿತು. ಕಿಟಕಿಯನ್ನು ಸಂಪೂರ್ಣವಾಗಿ ಮುಚ್ಚಲಾಗದಂತೆ ವೈರು ತಡೆಯುತ್ತಿತ್ತು. ’ಏನು ಪ್ರಾರಬ್ಧಾನೋ...ಅದೇನು ಮಾಡಿದ್ದಾನೋ. ಟಿವಿಯ ಹಿಂದಿನಿಂದ ಏನನ್ನಾದರೂ ಕಿತ್ತುಕೊಂಡು ಹೋಗಿರದಿದ್ದರೆ ಸಾಕು...’ಎಂದು ಬೈದುಕೊಳ್ಳುತ್ತಾ ಮಂಡಿ ಹಿಡಿದುಕೊಂಡು ಒಮ್ಮೆ ಚೆಕ್ ಮಾಡಲು ಎದ್ದರು. ಟಿವಿಯ ಹಿಂದಿದ್ದ ಹೊಸ ವೈರನ್ನು ಬಿಟ್ಟರೆ ಎಲ್ಲವೂ ಇದ್ದಂತೆಯೇ ಕಾಣಿಸಿತು. ’ಸುಳ್ಳೇ ಹೇಳಿದ್ದಾನೆ. ಅವನ್ಯಾಕೆ ಫ್ರೀ ಟಿವಿ ಕೊಡುತ್ತಾನೆ? ಎರಡು ದಿನ ಹಾಗೆ ಮಾಡಿ ಮೂರನೇ ದಿನ ದುಡ್ಡು ವಸೂಲಿಗೆ ಬಂದೇ ಬರುತ್ತಾನೆ...ಮುಂಡೇವು ಬರೀ ಇದೇ ಕಂತ್ರಿ ಕೆಲಸ ಮಾಡುತ್ವೆ. ಅದೆಷ್ಟು ದುಡ್ಡು ಹಾಕುತ್ತಾನೋ...ತೆಗೆದುಹಾಕಿ ಬಿಡಬೇಕು...’ ಎಂದೇ ಮನಸ್ಸು ಮಾಡಿದ್ದವರು ತಡೆದರು.
 
 
 ’ನಿಜಕ್ಕೂ ಹಾಕಿದ್ದಾನಾ?!’ ಬೆಂಗಳೂರಿನ ಜನ ಅಷ್ಟು ಸುಲಭದಲ್ಲಿ ಜನರನ್ನು ನಂಬಿಬಿಟ್ಟರೆ ಆ ಊರಲ್ಲಿ ಬದುಕಲಾದೀತೇ? ವಾರಕ್ಕೊಂದೆರಡು ದಿನ ಸಂಜೆ ದೂರದರ್ಶನದ ನ್ಯೂಸಿಗಲ್ಲದಿದ್ದರೆ ಆನೇ ಆಗದಿದ್ದ ಆ ಟಿವಿಯ ಮುಂದೆ ನಿಂತು ಆ ಮಟಮಟ ಮಧ್ಯಾನ್ಹ ’ಪವರ್’ ನ ಕೆಂಪು ಬಟನ್ ಒತ್ತಿದರು. ಆಶ್ಚರ್ಯ! ಹುಡುಗ ನಿಜಕ್ಕೂ ನಿಜ ಹೇಳಿದ್ದ. ಆಯುರ್ವೇದದ ವೈದ್ಯರೊಬ್ಬರು ವಯಸ್ಸಾದವರಿಗೆ ಬರುವ ಮಂಡಿನೋವಿನ ಬಗ್ಗೆ ಮಾಹಿತಿ ಕೊಡುತ್ತಿದ್ದರು! ಮಾಮಣ್ಣನಿಗೆ ದೈವವೇ ಟಿವಿ ಹಾಕಲು ಹೇಳಿದಂತಾಯಿತು. ಮಂಡಿನೋವು ಆಗಾಗ ಬಂದು ಮಾಮಣ್ಣನನ್ನು ಸತಾಯಿಸುತ್ತಿತ್ತು. ಅವರೂ ಅದೂ ಇದೂ ತೈಲ ಉಜ್ಜಿಕೊಂಡು ಸುಮ್ಮನಾಗುತ್ತಿದ್ದರು. ಇವತ್ತು ವೈದ್ಯರೇ ಹೇಳುತ್ತಿದ್ದಾರೆ! ಯಾರ್ಯಾರೋ ಅಲ್ಲ. ಟಿವಿಯಲ್ಲಿ ಬರುವ ವೈದ್ಯರು! ಟಿವಿಯನ್ನು ಬೇಡ ಎನ್ನಲು, ಆರಿಸಲು, ತಿರಸ್ಕರಿಸಲು ಯಾವುದೇ ಕಾರಣವೂ ಬರಲೇ ಇಲ್ಲದ್ದರಿಂದ ಮಾಮಣ್ಣ ಹಾಗೇ ಹಿಂದೆ ಹೋಗಿ ಕುರ್ಚಿ ಎಳೆದುಕೊಂಡು ಕೂತರು. ವೃಧ್ದಾಪ್ಯದ ಹತ್ತು ಹಲವು ಸಂಕಟಗಳಿಗೆ ಪರಿಹಾರ ಸೂಚಿಸಿ ವೈದ್ಯರು ಸಾಂಗವಾಗಿ ಕಾರ್ಯಕ್ರಮ ಮುಗಿಸಿದರು. ಟಿವಿ ಆರಿಸಲು ಮಾಮಣ್ಣ ಏಳುವಾಗ ಎಲ್ಲಿಂದಲೋ ಬಂದು ಕಾಡಿದ ಮತ್ತದೇ ಮಂಡಿನೋವು. ಏಳಲು ಮನಸ್ಸಾಗದೇ ಹಾಗೇ ಕೂತರು. ಈಗ ಪಕ್ವಾನ್ನಗಳನ್ನು ತಯಾರಿಸುವುದನ್ನು ಹೇಳಿಕೊಡುವ ಸರದಿ.  
 

ಹೀಗೇ ಗೇಟು ತೆಗೆವ ಸದ್ದಾಗುವವರೆಗೂ ಮಾಮಣ್ಣ ಅಲುಗದೆ ಟಿವಿ ಮುಂದೆ ಕೂತರು. ಒಳಗೆ ಬಂದ ಸುಕನ್ಯತ್ತೆ ಅವತ್ತು ತಾವು ಮಾಡಿದ್ದ ಕೃಷ್ಣನ ತೊಟ್ಟಿಲನ್ನು ಎಲ್ಲರೂ ಇಷ್ಟಪಟ್ಟರೆಂಬ ಸಂತೋಷದಲ್ಲಿದ್ದರು. ಅದಲ್ಲದೆ ನಾಳೆ ಅದೇ ಥರದ ಮೂರು ತೊಟ್ಟಿಲುಗಳನ್ನು ಕೆತ್ತಿಕೊಂಡು ಹೋಗಬೇಕಾಗಿತ್ತು. ಅವರಿಗೆ ಮಾಮಣ್ಣ ಟಿವಿಯಲ್ಲಿ ಕಂಡ ವೈದ್ಯಕೀಯವನ್ನು ಕೇಳಿಸಿಕೊಳ್ಳಲೂ ಟೈಮ್ ಇರಲಿಲ್ಲ. ’ಸರಿ ಬಾ. ನಾನೂ ಏನಾದರೂ ಸಹಾಯ ಮಾಡಿಕೊಡ್ತೀನಿ...’ ಮಾಮಣ್ಣ ಸುಕನ್ಯತ್ತೆಯನ್ನು ಹಿಂಬಾಲಿಸಿದ್ದರು.  
 

ಮರುದಿನ ಅತ್ತೆ ಕ್ಲಾಸಿಲ್ಲದೆಯೂ ಕೌಸಲ್ಯ ಚಿಕ್ಕಮ್ಮನ ಮನೆಗೆ ಹೊರಟು ನಿಂತಾಗ ಮಾಮಣ್ಣ ಬಾಗಿಲು ಹಾಕಿಕೊಂಡು ಬಂದು ಮತ್ತೆ ಏನಾದರೂ ವೈದ್ಯ ಮಾಡುವುದು ಬರಬಹುದೆಂದು ಟಿವಿ ಮುಂದೆ ಕೂತರು. ಅವರು ಚಾನೆಲ್ಲು ಗೀನೆಲ್ಲು ಬದಲಿಸುವ ಅಭ್ಯಾಸವನ್ನೇ ಕಂಡರಿಯರು. ದೂರದರ್ಶನ ಒಂದೇ ಅವರ ತಲೆಗೆ. ಹಾಗೇ ಇವತ್ತೂ ಕೂತಾಗ ವೈದ್ಯಕೀಯ, ಅಡಿಗೆ ಮಾಡುವುದು ಬರದೆ ಯಾವುದೋ ಚಲನಚಿತ್ರದ ಬಗ್ಗೆ ಹುಡುಗಿಯೊಬ್ಬಳು ಮಾತಾಡುತ್ತಿದ್ದಳು. ’ಸೂಪರ್ರಾಗಿದೆ’, ’ಫಸ್ಟ್ ಕ್ಲಾಸು’, ’ಹಂಡ್ರೆಡ್ ಡೇಸು’, ’ಸ್ಟೋರಿ ಸಾಂಗ್ಸು ಫೈಟು ಎಲ್ಲಾ ಹಿಟ್ಟು ಬಿಡಿ’ ಜನ ಅಭಿಪ್ರಾಯ ಪಡುತ್ತಿದ್ದರು. ತಮ್ಮ ಕಾಲದಲ್ಲಿ ಕವಿರತ್ನ ಕಾಳಿದಾಸ, ಮಯೂರ, ಗಂಧದ ಗುಡಿ, ಭಕ್ತ ಪ್ರಹ್ಲಾದದಂತಹ ಚಿತ್ರಗಳನ್ನು, ಕರೆದುಕೊಂಡು ಹೋಗಿ ತೋರಿಸುವ ಸನ್ಮಿತ್ರರ ದೆಸೆಯಿಂದ ನೋಡಿ ಆಮೇಲೆ ಸುಕನ್ಯತ್ತೆಗೆ ಅನಂತನಾಗ್ ಇಷ್ಟವಾಗುತ್ತಾನೆಂದು ಅವರನ್ನು ಕರೆದುಕೊಂಡು ಗಣೇಶನ ಮದುವೆ, ಅಮೃತ ವರ್ಷಿಣಿ, ಬೆಳದಿಂಗಳ ಬಾಲೆ ಇವುಗಳನ್ನು ಥಿಯೇಟರಿನಲ್ಲಿಯೇ ನೋಡಿ ಈಗಿನ ಕಾಲದ್ದವುಗಳನ್ನು ಬೈದುಕೊಂಡು ಸುಮ್ಮನಾಗಿದ್ದ ಮಾಮಣ್ಣನಿಗೆ ’ಓ ಇದು ಯಾವುದೋ ಒಳ್ಳೆಯದು ಬಂದಿರುವಂತಿದೆಯಲ್ಲಾ’ ಎನಿಸಿ ಆಸಕ್ತಿ ತೋರಿಸಿದರು. ಜನರ ಅಭಿಪ್ರಾಯ ಮುಗಿದ ಕೂಡಲೇ...

'ನಾ ಬೋರ್ಡು ಇರದ ಬಸ್ಸನು ಹತ್ತಿ ಬಂದ ಛೋಕರಿ...
ದಾರೀಲಿ ಕಮಲ ಹಾಸನೂ ಸಿಗಲಿಲ್ಲ ಯಾಕೆರೀ...’ ಎಂಬ ಹಾಡೊಂದು ಬರಲು ಆರಂಭವಾಯಿತು.
 
'ಅಸಹ್ಯ! ಆ ಒಬ್ಬಳು ಹುಡುಗಿಯನ್ನಿಟ್ಟುಕೊಂಡು ಹೇಗಾಡುತ್ತಿದ್ದಾವೆ ಅವಲಕ್ಷಣದ ಮುಂಡೇವು...ಏನಂತಾ ಹಾಡು ಬರೆಯುತ್ತಾರೋ...ಎಲ್ಲಾ ಈಗಿನ ಕಾಲದವು...ಒಂದು ನಾಚಿಕೆ ಇಲ್ಲ ಮರ್ಯಾದೆ ಇಲ್ಲ...ಆಹಾ! ಪರವಾಗಿಲ್ಲ ಬಿದ್ದು ನೋಡ್ಬೇಕಂತೆ...ಒಂದು ಗಂಭೀರ ಇಲ್ಲ...’ ಮಾಮಣ್ಣ ಬೈದುಕೊಳ್ಳುತ್ತಲೇ ಹಾಡು ನೋಡಿದರು. ಸುಕನ್ಯತ್ತೆ ಬರಲು ಇನ್ನೂ ಸಮಯವಿದ್ದುದರಿಂದ ಏಳಲೂ ಆಲಸ್ಯವೆನಿಸಿತು. ಹಾಡು ಮುಗಿಯಿತು. ಕಾರ್ಯಕ್ರಮ ಮುಗಿಯಿತು. ಈಗ ಮ್ಯಾಟನಿ ಕರುಳಿನ ಕೂಗು.

ಎಲೆಕ್ಟ್ರಾನಿಕ್ ತರಂಗಗಳಿಗೆ ಏನೋ ಮೋಡಿಮಾಡುವ ಶಕ್ತಿಯಿರುತ್ತದೆ ನೋಡಿ. ಯಾರದೋ ಕರುಳಿನ ಕೂಗಾದ್ದರಿಂದ ಅಸಹ್ಯವಾದ್ದು ಏನೂ ಇರಲಾರದು ಎನಿಸಿತೋ, ಮತ್ತೆ ಮಂಡಿನೋವು ಬಂತೋ, ಆಲಸ್ಯವಾಯಿತೋ...ಮಾಮಣ್ಣ ಹಾಗೇ ಕರುಳಿನ ಕೂಗಿಗೆ ಓಗೊಟ್ಟು ನಿರ್ಲಿಪ್ತರಾಗಿ ಕೂತರು. ಬಡತನದಲ್ಲಿ ಹುಟ್ಟಿ ತಬ್ಬಲಿಯಾಗಿ, ವಾರಾನ್ನ ತಿಂದು ಬಡತನವನ್ನೇ ತಂದೆತಾಯನ್ನಾಗಿ ಮಾಡಿಕೊಂಡು ಬೆಳೆದು, ನೆಲೆನಿಂತು ಮದುವೆಯಾಗಿ ಎರಡು ಮಕ್ಕಳನ್ನು ದಾರಿಗೆ ಬಿಟ್ಟು ಬದುಕಿನ ತಿಳಿಸಂಜೆಯಲ್ಲಿ ವಿಹರಿಸುತ್ತಿದ್ದ ಮಾಮಣ್ಣನ ಅರಿಕೆಗೂ ಮೀರಿದ ಭಯಂಕರ ಬರ್ಬರ ನೋವಿನ ಕರುಳಿನ ಕೂಗು ಅದು. ಕಥೆಯಲ್ಲಿ ಯಾಕೆ ಹಾಗಾಯಿತು, ಯಾಕೆ ಅವಳು ಸತ್ತಳು? ಅವನಿಗೇನಾಯಿತು? ಆ ಮಟ್ಟಕ್ಕೆ ಗ್ರಹಗತಿಗಳು ಕೆಟ್ಟಿರಲೂ ಸಾಧ್ಯವೇ? ಎಂಬ ಯಾವ ಲಾಜಿಕ್ಕಿಗೂ ಸಿಕ್ಕದೇ ಒಂದಾದ ನಂತರ ಒಂದರಂತೆ ಕರುಳನ್ನು ಎಳೆದಾಡಿ ಹಿಂಡಾಡಿ ಕುಯ್ಯುವ ಘಟನೆಗಳೇ ನಡೆಲಾರಂಭಿಸಿದ್ದವು. ಅದನ್ನು ನಿರ್ಲಿಪ್ತವಾಗೇ ನೋಡುತ್ತಿದ್ದರೂ ತಡೆಯಲಾರದೆ ಜೋರಾಗಿ ಡವಡವ ಹೊಡೆದುಕೊಳ್ಳಲಾರಂಭಿಸಿದ ಮಾಮಣ್ಣನವರ ಶಾಂತ ಹೃದಯ ಅರ್ಧ ಚಿತ್ರಕ್ಕೇ ಹೆದರಿದಂತಿತ್ತು. ಇನ್ನು ಸಾಧ್ಯವಿಲ್ಲವೆಂಬಂತೆ ಮಾಮಣ್ಣ ಟಿವಿ ಆರಿಸಲು ಎದ್ದರು. ಆರಿಸಲು ಬಂದಾಗ ಹಾಗೇ ಸುಮ್ಮನೆ ಟೆಸ್ಟ್ ಮಾಡಲು ಪಕ್ಕದ ಗುಂಡಿ ಒತ್ತಿದರು. ನಿಜಕ್ಕೂ ಹದಿನಾರು ಚಾನೆಲ್ ಬರಬಹುದಾ ಅಥವಾ ಆ ಹುಡುಗ ಸುಳ್ಳು ಹೇಳಿರಬಹುದಾ? ’ಸದಾ ಕಣ್ಣಲೀ ಪ್ರಣಯದಾ ಕವಿತೆ ಹಾಡುವೇ..’ ಓ ಬೇರೆ ಬರುತ್ತಿದೆ. ಆಹಾ! ಕವಿರತ್ನ ಕಾಳಿದಾಸ!’ ಡಾಕ್ಟರ್ ರಾಜಕುಮಾರರನ್ನು ನೋಡಿದ ತಕ್ಷಣ ಮಾಮಣ್ಣನ ಮನಸ್ಸು ಹಿಂದಕ್ಕೋಡಿತು.
 

ಗೋಪು ನಾನು ತೋರಿಸುತ್ತೀನಿ ಬಾರೋ ಎಂದು ಒತ್ತಾಯ ಮಾಡಿ ಕರೆದುಕೊಂಡು ಹೋಗಿದ್ದ. ಪಿಚ್ಚರ್ ನೋಡಿ ಮಸಾಲೆ ದೋಸೆ ಸವಿದಿದ್ದರು. ಛೆ! ಎಷ್ಟು ಅವಸರದಲ್ಲಿ ಎಲ್ಲವನ್ನೂ ಬಿಟ್ಟು ಹೋಗಿಬಿಟ್ಟ. ಈಗ ಇದ್ದಿದ್ದರೆ ಮತ್ತೆ ಜೊತೆಯಲ್ಲಿ ಕುಳಿತು ಕವಿರತ್ನ ಕಾಳಿದಾಸ ನೋಡಬಹುದಿತ್ತು. ಮಿತ್ರನನ್ನು ನೆನೆದು ಹಾಡು ನೋಡುತ್ತಾ ಕುಳಿತರು. ಅಷ್ಟರಲ್ಲಿ ಸುಕನ್ಯತ್ತೆ ಬಂದಿದ್ದರಿಂದ ಅವರ ಧ್ಯಾನ ಅತ್ತೆ ಕಡೆಗೆ.
ತಾವು ಈಗಷ್ಟೇ ಕಲಿತು ಮಾಡುತ್ತಿದ್ದ ಕೆತ್ತನೆ ತಮಗೆ ಕಲಿಸಿಕೊಡುವಾಕೆಗೆ ಬಹಳ ಇಷ್ಟವಾಗಿ ಅವಳು ’ನಿಮಗೆ ಒಂದಷ್ಟು ಆರ್ಡರ್ ಕೊಡುತ್ತೇನೆ, ಚನ್ನಾಗಿ ಮಾಡಿಕೊಟ್ಟರೆ ಮದುವೆ ಸೀಸನ್ ನಲ್ಲಿ ವಾರಕ್ಕೆ ೧-೨ ಸಾವಿರ ಸಿಗುತ್ತೆ’ ಎಂದಿದ್ದು ಸುಕನ್ಯತ್ತೆ ಕೌಸಲ್ಯ ಚಿಕ್ಕಮ್ಮ ಇಬ್ಬರಿಗೂ ಬಹಳ ಸಂತೋಷವಾಗಿತ್ತು. ಅವರಿಗೆ ದುಡ್ಡಿನ ಅತಿ ಅಗತ್ಯ ಇರದಿದ್ದರೂ ಚಟುವಟಿಕೆ, ಮೆಚ್ಚುಗೆಯ ಅಗತ್ಯವಿತ್ತು. ಈಗ ಅದರ ಜೊತೆಗೇ ಸ್ವಲ್ಪ ಸಂಭಾವನೆ ಬೇರೆ. ದೇವರಿಗೆ ಹಾಕಲೋ, ಮೊಮ್ಮಕ್ಕಳಿಗೆ ಕೊಡಲೋ ತಮ್ಮದೇ ಶ್ರಮದ ದುಡಿಮೆ. ಅರ್ಧ ಶತಮಾನದಷ್ಟು ಜೀವನವನ್ನು ಸಂಭಾವನೆಯ ಮುಖ ನೋಡದೇ ಎಲ್ಲರನ್ನೂ ಸಾಕಿ ಸಲಹಿ ಬೆಳೆಸೇ ತೀರಿಸಿದ್ದ ಮಹಿಳೆಯರಿಗೆ ಈ ಅವಕಾಶವನ್ನು ಬೇಡ ಎನ್ನಲಾಗಿರಲಿಲ್ಲ. ಸುಕನ್ಯತ್ತೆ ಮಾಮಣ್ಣನ ಜೊತೆ ಈ ಬಗ್ಗೆ ಕೇಳಬೇಕೆಂದುಕೊಂಡು ಧಾವಂತದಲ್ಲಿ ಬಂದಿದ್ದರು.
 
 

ಇಷ್ಟು ಸಮಯವನ್ನು ಟಿವಿ ಎನ್ನುವುದರ ಮುಂದೆ ಕೂತು ಕಳೆದುಬಿಟ್ಟೆ ಎಂಬ ಹೊಸ ಅಪರಾಧೀ ಭಾವ ಕಾಡಿ, ಅದನ್ನು ಕಮ್ಮಿ ಮಾಡಿಕೊಳ್ಳಲು ಮಾಮಣ್ಣ ಅತ್ತೆಯ ಹಿಂದೆಯೇ ಅಡಿಗೆ ಮನೆಗೆ ಬಂದಿದ್ದರು. ಏನಾಯಿತು ಹೇಗಿತ್ತು ವಿಚಾರಿಸಿದ್ದರು...ಇನ್ನುಳಿದ ಸಮಯವನ್ನು ಅವಳಿಗೆ ಮಾತ್ರ ಕೊಡಬೇಕು ಎನ್ನುವ ತುಮುಲದಲ್ಲಿ. ಅತ್ತೆ ಮಾಮಣ್ಣನ ಮುಖ ನೋಡಿ ನಡೆದಿದ್ದೆಲ್ಲವನ್ನೂ ಹೇಳಿ, ’ನಾನು ಮಾಡುವುದನ್ನು ಹೊರಗಿನ ಜನ ಮೆಚ್ಚುತ್ತಿದ್ದಾರೆ...ಇದನ್ನು ಮುಂದುವರಿಸಲೇ’ ಎಂದು ಮಾಮಣ್ಣನನ್ನು ಕೇಳಿದಾಗ ಮಾಮಣ್ಣ ಕ್ಷಣಮಾತ್ರದಲ್ಲಿ ’ಅಯ್ಯೋ ಎಂಥಾ ಒಳ್ಳೆ ಸುದ್ದಿ. ಮೇಲಾಗಿ ಶುಭ ಕಾರ್ಯಕ್ಕೆ ಸಹಾಯ ಮಾಡಿಕೊಟ್ಟರೆ ಎಂಥ ಪುಣ್ಯ...ಖಂಡಿತಾ ಒಪ್ಕೋ’ ಎಂದಿದ್ದರು. ಇಂಥ ಗಂಡನನ್ನು ಪಡೆದಿದ್ದಕ್ಕೆ ಎಷ್ಟು ಪುಣ್ಯ ಮಾಡಿರಬೇಕು ಎಂದು ಮನಸ್ಸಿನಲ್ಲೇ ಆನಂದದಿಂದ ವಂದಿಸುತ್ತಾ ’ಆದರೂ ಕೆಲಸ ಮಾಡೋಕೆ ನಿತ್ಯ ಎರಡು ಮೂರು ಗಂಟೆ ಕೌಸಲ್ಯನ ಮನೆಗೆ ಹೋಗಬೇಕಾಗುತ್ತೆ...’ ಸ್ವಲ್ಪ ಅಳುಕಿನಿಂದಲೇ ನುಡಿದಿದ್ದರು. ’ಅದ್ಯಾವ ಮಹಾ! ಇಲ್ಲೇ ಪಕ್ಕದ ಬೀದಿ ತಾನೇ. ನೀನು ಬೇರೆಲ್ಲೋ ಹೋಗಬೇಕಾಗಿ ಬಂದಿದ್ದರೆ ನನಗೂ ಯೋಚನೆಯಾಗ್ತಿತ್ತು...ಈಗೇನು ಭಯ? ದೇವರ ಮೇಲೆ ಭಾರ ಹಾಕಿ ಹೂಂ ಅಂದುಬಿಡು’ ಮಾಮಣ್ಣನ ಮಾತುಗಳಿಗೆ ಸುಕನ್ಯತ್ತೆ ಕಣ್ಣು ತುಂಬಿಕೊಂಡು ಅವತ್ತು ಸಾಯಂಕಾಲ ದೇವರಿಗೆ ತುಪ್ಪದ ದೀಪ ಹತ್ತಿಸಿದ್ದರು.
 

ಆ ಸಾಯಂಕಾಲದ ಮಾತುಕತೆಯ ನಂತರ ಮಾಮಣ್ಣನ ಮಧ್ಯಾನ್ಹಗಳು ಒಂಟಿಯಾಗಿ ಹೋಗುವಂತಾಗಿತ್ತು. ಆದರೆ ಪರವಾಗಿಲ್ಲ. ಟಿವಿ ಇದೆಯಲ್ಲ. ಆಗಾಗ ವೈದ್ಯಕೀಯ, ಹಾಡು, ಅಡಿಗೆ, ನ್ಯೂಸು ನೋಡಬಹುದು ಎಂದುಕೊಂಡು ಅವರೂ ಸಮಾಧಾನ ಮಾಡಿಕೊಂಡಿದ್ದರು.
 
ಬರುಬರುತ್ತಾ ಮಾಮಣ್ಣನಿಗೆ ಯಾವ ಯಾವ ಸಮಯದಲ್ಲಿ ಯಾವ ಚಾನೆಲ್ಲಿನಲ್ಲಿ ಯಾವ ಕಾರ್ಯಕ್ರಮ ನಡೆಯುತ್ತಿದೆ ಎಂಬುದನ್ನು ಗಮನಿಸುತ್ತಾ ನೆನಪಿನಲ್ಲಿಟ್ಟುಕೊಳ್ಳುವ, ಆಯ್ಕೆ ಮಾಡಿಕೊಳ್ಳುವ ಅಭ್ಯಾಸ ಶುರುವಾಯಿತು. ಚಲನಚಿತ್ರಗಳು ಹೆಚ್ಚು ಇಷ್ಟವಾಗತೊಡಗಿದವು. ಕರುಳಿನ ಕೂಗಿನಂತಹ ಹೃದಯ ವಿದ್ರಾವಕ ಕಥೆಗಳನ್ನು ನೋಡಿ ತಮ್ಮ ವಯಸ್ಸಾದ ಹೃದಯವನ್ನು ಹಾಳು ಮಾಡಿಕೊಳ್ಳುವುದಕ್ಕಿಂತ ಹಾಸ್ಯದಿಂದ ತುಂಬಿರುವುದನ್ನು ನೋಡುವುದು ಇಷ್ಟವಾಗತೊಡಗಿತು. ವಾರದ ಹಿಂದೆ ’ತರ್ಲೆ ನನ್ಮಗ’ ಎಂಬ ಚಿತ್ರವನ್ನು ನೋಡಿದಾಗಿನಿಂದ ಜಗ್ಗೇಶ ಇಷ್ಟವಾಗಿದ್ದ. ನೋಡಲು ಅಷ್ಟಕ್ಕಷ್ಟೇ ಇದ್ದರೂ ಪರವಾಗಿಲ್ಲ, ಚನ್ನಾಗಿ ಹಾಸ್ಯ ಮಾಡುತ್ತಾನೆ ಎಂದುಕೊಂಡಿದ್ದರು. ಅವರ ಅದೃಷ್ಟಕ್ಕೋ ಏನೋ ಯಾವುದಾದರೂ ಒಂದು ಚಾನೆಲ್ಲಿನಲ್ಲಿ ವಾರಕ್ಕೊಂದಾದರೂ ಜಗ್ಗೇಶನ ಚಲನಚಿತ್ರ ಬಂದು ಮಾಮಣ್ಣನೂ ಭರಪೂರ ಮನರಂಜಿಸಿಕೊಳ್ಳಲು ಅವಕಾಶವುಂಟಾಗಿತ್ತು. ಜಗ್ಗೇಶ ಹೇಳಿದ್ದಕ್ಕೆಲ್ಲಾ 'ಥೂ ಮುಂಡೆದು' ಎನ್ನುತ್ತಲೇ ಕೇಳಿಕೊಳ್ಳುತ್ತಿದ್ದರು. ಅಂತು ಸುಕನ್ಯತ್ತೆ ಮನೆಯಲ್ಲಿ ಇರದಿರುತ್ತಿದ್ದುದು ಮಾಮಣ್ಣನ ಗಮನಕ್ಕೇ ಬರುತ್ತಿರಲಿಲ್ಲ. ಬೆಳಗಿನ ತಿಂಡಿ ಜೊತೆಯಲ್ಲೇ ಮುಗಿಸಿ ಮಧ್ಯಾನ್ಹ ರಾತ್ರಿಗೆ ಅಡಿಗೆ ಮಾಡಿಟ್ಟು ಆಕೆ ಹೊಸ ಉತ್ಸಾಹದಿಂದ ಹೊರಡುತ್ತಿದ್ದರು. ಅವರ ಸಣ್ಣ ಬಿಸಿನೆಸ್ಸು ಬರುಬರುತ್ತಾ ಹೆಚ್ಚುತ್ತಿರುವಂತಿತ್ತು.
 

ಅದೊಂದು ಶೂನ್ಯ ಮಾಸ. ಸುಕನ್ಯತ್ತೆಗೆ ಯಾವುದೇ ಆರ್ಡರುಗಳೂ ಇರಲಿಲ್ಲ. ಅವರಿಗೂ ಮನೆಯಲ್ಲೇ ಇದ್ದು ಸ್ವಲ್ಪ ಸುಧಾರಿಸಿಕೊಳ್ಳೋಣ ಎನಿಸಿತ್ತು. ಬೆಳಿಗ್ಗೆ ತಿಂಡಿ ಮುಗಿಸಿ ರಾಯರ ಮಠಕ್ಕೆ ಹೋಗಿ ಕೂತುಬರುವ ಕಾರ್ಯಕ್ರಮ ಇಟ್ಟುಕೊಂಡಿದ್ದರು. ತಿಂಡಿ ಮುಗಿಸಿದರೂ ಮಾಮಣ್ಣ ತಯಾರಾಗುವ  ಸೂಚನೆ ಕಾಣಲಿಲ್ಲ. ಸುಕನ್ಯತ್ತೆ ಎರಡು ಬಾರಿ ನೆನೆಪಿಸಿದಾಗಯಾಕೋ ಮಂಡಿನೋವು’ ಎಂದು ಮಾಮಣ್ಣ ದೂರಿದ್ದರು. ನನ್ನ ಕೆಲಸದಲ್ಲಿ ನಾನು ಮೈಮರೆತು ಇವರನ್ನು ನೋಡಿಕೊಳ್ಳಲೂ ಆಗಿಲ್ಲವೆಂಬ ಬೇಜಾರಿನಲ್ಲಿ ಸುಕನ್ಯತ್ತೆ ಶುಂಟಿ ಕಷಾಯ ಮಾಡಿ ಮಂಡಿಗೆ ತೈಲ ತಿಕ್ಕಿಕೊಟ್ಟಿದ್ದರು. ’ಯಾಕೋ ಕೋಡುಬಳೆ ತಿನ್ನಬೇಕು ಅನ್ನಿಸುತ್ತಿದೆ’ ಮಾಮಣ್ಣ ತೈಲ ತಿಕ್ಕಿಸಿಕೊಳ್ಳುತ್ತಾ ತಮಗೇ ತಾವೆಂಬಂತೆ ಹೇಳಿಕೊಂಡಾಗ ಸುಕನ್ಯತ್ತೆ ದಿಗಿಲು ಪಟ್ಟಿದ್ದರು. ಇದುವರೆವಿಗೂ ಅವರು ಯಾವ ತಿಂಡಿ, ಉಪಹಾರ, ಅಡಿಗೆ ಮಾಡಿಕೊಟ್ಟರೂ ಸಂತೋಷದಿಂದ ತಿನ್ನುತ್ತಿದ್ದ ಮಾಮಣ್ಣ ಇವತ್ತುಮಂಡಿನೋವು, ಕೋಡುಬಳೆ ತಿನ್ನಬೇಕು’ ಎಂದೆಲ್ಲಾ ಹೇಳಿದಾಗ ಏನೋ ಒಂದು ಅಳುಕು ಅವರ ಮನಸ್ಸಿನಲ್ಲಿ. ಸ್ವಲ್ಪ ವಯಸ್ಸಾದವರು ಹಾಗೇನಾದರೂ ಎಂದೂ ಇಲ್ಲದೆ ಬಯಸಿಕೊಂಡರೆ ಇವರು ಹೊರಡುವ ಯೋಚನೆ ಮಾಡುತ್ತಿದ್ದಾರೆಯೇ? ಅದಕ್ಕೆ ಮುಂಚೆ ಎಲ್ಲ ತೀರಿಸುವ ಯೋಚನೆ ಮಾಡುತ್ತಿದ್ದಾರೆಯೇ ಎಂಬ ಯೋಚನೆ ಬರುತ್ತದಲ್ಲವೇ? ಮಾಮಣ್ಣನಿಗೇನೂ ಬಗೆಯ ವಯಸ್ಸಾಗಿರಲಿಲ್ಲ. ಯಾವ ಖಾಯಿಲೆ ತೊಂದರೆ ಇದ್ದಿರಲಿಲ್ಲ. ಆದರೆ ಅಲ್ಲಿಂದ ಯಾರ ಕರೆ ಯಾವಾಗ ಬರುತ್ತದೋ..
 
 
ಸುಕನ್ಯತ್ತೆ ತನ್ನ ಕೆಟ್ಟ ಯೋಚನೆಗೆ ಶಾಪ ಹಾಕಿಕೊಳ್ಳುತ್ತಾ ದೇವರಿಗೆ ತುಪ್ಪದ ದೀಪ ಹಚ್ಚಿ ಪ್ರಾರ್ಥನೆಾಡಿ ಕೋಡುಬಳೆ ಜೊತೆಗೆ ಚಕ್ಕುಲಿ, ಕರ್ಜಿಕಾಯನ್ನೂ ಮಾಡಿಕೊಟ್ಟರು. ಮಾಮಣ್ಣ ಆನಂದ ಪಡುತ್ತಾ ಸುಕನ್ಯತ್ತೆಯ ಕೈಯನ್ನು ಹೊಗಳುತ್ತಾ ಆಸೆ ತೀರಿಸಿಕೊಂಡಿದ್ದರು. ಸುಕನ್ಯತ್ತೆ ಮನೆಯಲ್ಲಿರಲು ಆರಂಭಿಸಿದ ಮೊದಲ ಎರಡು ದಿನ ಟಿವಿ ಆನ್ ಆಗಲಿಲ್ಲವಾದರೂ ಮೂರನೇದಿನ ಮಾಮಣ್ಣನವರಿಗೆ ತಡೆಯಲಾಗಲಿಲ್ಲ. ಟಿವಿ ಹಾಕಿಕೊಂಡು ಒಂದು ಗಂಟೆ ನೋಡಿದರು. ಯಾಕೋ ಇವರ ಗಮನ ಬೇರೆಲ್ಲೋ ಇರುವುದನ್ನು ಕಂಡ ಸುಕನ್ಯತ್ತೆ ಅವರ ಪಾಡಿಗೆ ಅವರನ್ನು ಬಿಟ್ಟು ತಮ್ಮ ಕೆಲಸ ನೋಡಿಕೊಂಡರು. ’ಇವತ್ತು ಅವರೆಕಾಳು ಉಪ್ಪಿಟ್ಟು ಮಾಡ್ತೀಯಾ’ ಮಾಮಣ್ಣ ಅವತ್ತೂ ಆಸೆ ಮುಂದಿಟ್ಟರು.
 
 
ಆಸೆ ಪೂರೈಕೆಯಾಗಲು ಹೆಚ್ಚು ಶ್ರಮ ತಗುಲುತ್ತಿಲ್ಲವೆಂದು ಮನಗೊಂಡೋ ಅಥವಾ ಜಾಗೃತಗೊಂಡು ಪುಳಕದಿಂದ ಬೇಡುತ್ತಿದ್ದ ನಾಲಿಗೆಗೆ ಕಟ್ಟುಬಿದ್ದೋ ಮಾಮಣ್ಣನವರ ಬೇಡಿಕೆಗಳು ದಿನನಿತ್ಯ ಹುಟ್ಟತೊಡಗಿದ್ದವು. ಅವರು ಟಿವಿ ಮುಂದೆ ಚಲನಚಿತ್ರ ನೋಡಿಕೊಂಡು ಕೂರುವ ಸಮಯವೂ ಹೆಚ್ಚೇ ಆಗಿತ್ತು. ಟಿವಿಯಲ್ಲಿ ಬರುವ ಪಾಕದ ಕಾರ್ಯಕ್ರಮಗಳನ್ನು ನೋಡಿ ಆಸೆಪಟ್ಟುಕೊಂಡು ನನಗೂ ಮಾಡಿಕೊಡು ಎನ್ನುತಿದ್ದಾರೆ ಎನ್ನುವ ವಿಚಾರ ಸುಕನ್ಯತ್ತೆಯವರಿಗೆ ಗೊತ್ತಾಗುತ್ತಿತ್ತು. ಅದಲ್ಲದೆ ತದೇಕಚಿತ್ತದಿಂದ ಚಿತ್ರ ನೋಡುತ್ತ ತನಗೆ ಇಷ್ಟವಾಗುವ ಡೈಲಾಗಿಗೆಹೂಂ ಹೂಂ’ ಎಂದು ತಲೆಯಾಡಿಸುತ್ತಾ ತನಗಿಷ್ಟವಿಲ್ಲದ್ದು ಬಂದಾಗಛೆಛೆ ಇದ್ಯಾವ ನ್ಯಾಯ? ಎಂಥ ಅನ್ಯಾಯ! ಕೃಷ್ಣಾ!’ ಎಂದು ಉದ್ಗಾರ ಮಾಡಿಕೊಳ್ಳುತ್ತಾ ಅಲುಗಾಡದೆ ಕೂರುತ್ತಿದ್ದುದು ಇರುಸುಮುರುಸಾಗಲು ಆರಂಭಿಸಿತು. ಪಡ್ಡೆ ಹುಡುಗ ಹುಡುಗಿಯರು ಅಸಹ್ಯದ ಬಟ್ಟೆ ಹಾಕಿಕೊಂಡು ಮಾಡುವ ಕುಣಿತ ಬಂದರೂಛೆ ಛೇ’ ಎನ್ನುತ್ತಿದ್ದರೇ ಹೊರತು ಕುಳಿತಲ್ಲಿಂದ ಏಳುತ್ತಿರಲಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಎಡೆಬಿಡದೆ ಬರುವ ಹಾಡುಕುಣಿತಗಳನ್ನು ಪದೇ ಪದೇ ಎದ್ದು ಬದಲಾಯಿಸಲು ಹೋಗುವುದಕ್ಕಿಂತ ಅದು ಮುಗಿಯುವವರೆಗೆ ನೋಡಿಬಿಡುವುದೇ ಮೇಲು ಎಂದು ಮಾಮಣ್ಣ ತಾಪಸರಂತೆ ಕೂತೇ ಇರುತ್ತಿದ್ದರು. ಅವರಿಗೆ ಇತ್ತೀಚೆಗೆ ಕಿವಿ ಸ್ವಲ್ಪ ಮಂದವಾಗಿರುತ್ತಿದ್ದರಿಂದ ಜೋರು ಸದ್ದು ಬೇರೆ.
 
 
ಕೆಲದಿನಗಳಿಂದ ಮಾಮಣ್ಣ ಇನ್ನೊಂದು ಚಾಳಿ ಶುರು ಮಾಡಿದ್ದರು. ಪ್ರತಿ ದಿನ ಮಧ್ಯಾನ್ಹ ಪಕ್ಕದ ಅಂದಾನಮ್ಮನ ಮನೆಯಿಂದ ದಿನಪತ್ರಿಕೆ ತಂದು ಯಾವ ಚಾನೆಲ್ಲಿನಲ್ಲಿ ಎಷ್ಟುಗಂಟೆಗೆ ಯಾವ ಪಿಚ್ಚರ್ ಎಂದು ಗುರುತು ಮಾಡಿಕೊಳ್ಳುತ್ತಿದ್ದರು. ಇದು ಆಯ್ಕೆ ಮಾಡಿಕೊಳ್ಳಲು ಸುಲಭ. ಹಾಸ್ಯ ಇರುವುದು, ಜಗ್ಗೇಶನ ಪಿಚ್ಚರ್ ಬರುವುದೆಂದರೆ ಬೇಗ ಊಟ ಮುಗಿಸಿ ಕೂರುತ್ತಿದ್ದರು. ಯಾವ ಡೈಲಾಗೂ ಮಿಸ್ಸಾಗದಂತೆ ಟಿವಿಯ ಸದ್ದೇರಿಸುತ್ತಿದ್ದರು. ಅನಂತನಾಗ, ರಾಜಕುಮಾರ್, ಭಾರತಿ, ವಿಷ್ಣುವರ್ಧನನ ಪಿಚ್ಚರ್ ಬಂದಾಗ ಹಾಗೇ ಕಣ್ಣಾಡಿಸಿಕೊಳ್ಳುತ್ತಿದ್ದ ಸುಕನ್ಯತ್ತೆಗೆ ಜಗ್ಗೇಶ್ ಸರಿಬೀಳುತ್ತಿರಲಿಲ್ಲ. ಅವನ ಮಾತೂ ಅರ್ಥವಾಗುತ್ತಿರಲಿಲ್ಲ. ’ಇದೇನಂತ ನೋಡೂದೂ? ಬೇರೆ ಯಾವ್ದೂ ಸಿಗ್ದೇ’ ಸುಕನ್ಯತ್ತೆಯ ತಕರಾರು ಮಾಮಣ್ಣನ ಕಿವಿಯನ್ನು ತಲುಪುವಂತಿರಲಿಲ್ಲ.
 
 
ಮಾಮಣ್ಣ ಒಂದೇ ಪಿಚ್ಚರನ್ನು ಎರಡೆರಡು ಬಾರಿ ನೋಡಲೂ ಹಿಂದೆಮುಂದೆ ನೋಡದಿದ್ದಾಗ ಸುಕನ್ಯತ್ತೆ ಇವರಿಗೇನಾದರೂ ಮರುಳು ಹಿಡಿಯುತ್ತಿದೆಯೇ ಎಂದು ಗಾಬರಿಯಾಗಿದ್ದರು. ’ಜಾಡ್ಸಿ ಒದಿತಿನಿ, ಲೇ ಹೇಸರಗತ್ತೇ, ಬಾರಮ್ಮೀ...’ ದೇವರೇ ಅಕ್ಕಪಕ್ಕದ ಮನೆಯವರಿಗೆ ಕೇಳಿಸಿದರೆ?! ಎಂದೂ ಇಲ್ಲದ ಹುಚ್ಚು ಈಗ್ಯಾಕೆ? ಸುಕನ್ಯತ್ತೆಗೆ ಬಹಳ ಇರುಸುಮುರುಸಾಗಿತ್ತು. ’ಅದೇನೂಂತ ಹಾಕ್ತೀರಿ...ಬೇರೆ ಏನಾದ್ರೂ ನೋಡಬಾರ್ದೇ...ಇದು ತೀರ ಅವಾಂತರವಲ್ವೇ...’ ಸುಕನ್ಯತ್ತೆ ಒಮ್ಮೆ ಟಿವಿ ಮತ್ತು ಮಾಮಣ್ಣರ ಮಧ್ಯೆ ನಿಂತೇಬಿಟ್ಟಿದ್ದರು. ’ಇರೋದೇ ಅಲ್ವೇ ಸುಕನ್ಯಾ...ಆಚೆ ಕಡೆ ಸರಿ. ನಿನಗಿಷ್ಟ ಆಗದಿದ್ರೆ ನೋಡಬೇಡ. ಹೋಗು ನಿನ್ನ ಕಸೂತಿ ಕೆಲಸ ಮಾಡಿಕೋ ಅಥ್ವಾ ಕೌಸಲ್ಯನ ಮನೆಗೆ ಹೋಗಿಬಾ ...’ ಮಾಮಣ್ಣ ಟಿವಿಯ ಸದ್ದಿಗೆ ಸರಿಸಮವಾಗಿ ಏರಿಸಿ ಮಾತಾಡಿದ್ದರು! ಬೆಚ್ಚಿದ್ದ ಸುಕನ್ಯತ್ತೆ ಇದ್ಯಾವ ಕೆಟ್ಟಕಾಲ ಆರಂಭವಾಗಿದೆಯೋ ಎಂದು ಕಣ್ಣುತುಂಬಿಕೊಂಡು ಸುಮ್ಮನಾಗಿದ್ದರು ಸುಕನ್ಯತ್ತೆ.
 
 
ಮಾಮಣ್ಣನ ಪ್ರತಿದಿನದ ತಿಂಡಿಯ ಡಿಮ್ಯಾಂಡುಗಳನ್ನು ಪೂರೈಸುವುದು ಸುಕನ್ಯತ್ತೆಗೆ ಸ್ವಲ್ಪ ಕಷ್ಟವಾಗತೊಡಗಿತು. ಅವರಿಗೂ ವಯಸ್ಸಾಗುತ್ತಿದೆ. ಅಲ್ಲದೆ ಏನಾದರೂ ಕಸೂತಿ ಮಾಡದಿದ್ದರೆ ಅವರಿಗೆ ಸಮಾಧಾನವೆಂಬುದಿಲ್ಲ. ಆದರೀಗ ಸಮಯಕ್ಕೂ ತೊಂದರೆ. ಮನೆಯಲ್ಲಿ ಗಲಾಟೆ. ಇಲ್ಲದ ಖರ್ಚು. ತಮ್ಮ ಮನೆಯಲ್ಲಿ ಥರದ ಹಾಡುಗಳು, ಕುಣಿತಗಳು, ಚಲನಚಿತ್ರಗಳು ನಡೆಯುತ್ತಿವೆ ಎಂದು ಅಕ್ಕಪಕ್ಕದವರಿಗೆ ಗೊತ್ತಾಗಿ ವಯಸ್ಸಿನಲ್ಲಿ ಇವರಿಗೇನಾಯಿತು ಎಂದು ಆಡಿಕೊಳ್ಳುವಂತಾದರೆ? ಆಕೆ ಒಲ್ಲದ ಮನಸ್ಸಿನಿಂದಲೇ ಮಗಳು ಮಗ ಫೋನ್ ಮಾಡಿದ್ದಾಗ ಯಾಕೋ ನಿಮ್ಮಪ್ಪ ಇತ್ತೀಚೆಗೆ ಬರೀ ಟಿವಿ ಮುಂದೆ ಕೂರ್ತಿದ್ದಾರೆ ಕಣ್ರೋ...’ ಎಂದಿದ್ದರು. ತಪ್ಪೇನಮ್ಮಾ ಅಪ್ಪಂಗೂ ಫ್ರೆಂಡ್ಸ್ ಅಂತ ಯಾರಿದಾರೆ ಹೇಳು...ಇಲ್ಲಿಗೆ ಬನ್ನಿ ಅಂದ್ರೂ ನೀವು ಕಣಿ ಮಾಡ್ತೀರಿ...’ ಮಗಳು ದೂರಿದರೆ ಪಾಪ! ಇನ್ನೇನು ಮಾಡ್ತಾರೆ ಬಿಡಮ್ಮಾ...ನೀನೂ ಅವರ ಜೊತೆ ಕಂಪನಿ ಕೊಡು ಬೇಕಾದ್ರೆ’ ಮಗ ಸರಳ ಸಲಹೆ ಕೊಟ್ಟಿದ್ದ. ಮುಂದಿನ ಬಾರಿ ಬಂದಾಗ ಹೊಸತರದ ಟಿವಿ ಕೊಡಿಸುತ್ತೇನಪ್ಪಾ ಎಂದು ಮಾಮಣ್ಣನಿಗೆ ಆಶ್ವಾಸನೆ ಕೊಟ್ಟುಬಿಟ್ಟ. ಯಾಕಪ್ಪ ಇವರು ಹೀಗೆ ಎಂದು ಗಂಡನ ಬಗ್ಗೆ ಜೀವಮಾನದುದ್ದಕ್ಕೂ ಯೋಚನೆ ಮಾಡದಿದ್ದ ಸುಕನ್ಯತ್ತೆ ಇಳಿಗಾಲದಲ್ಲಿ ಯೋಚನೆಗೀಡಾಗಿದ್ದರು. ಜಗ್ಗೇಶ ಅವರಿಬ್ಬರ ನಡುವೆ ನಿಂತುಬಿಟ್ಟಿದ್ದ.
 
 
ತಿಂಗಳು ಮುಗಿಯುವುದರಲ್ಲಿ ಸುಕನ್ಯತ್ತೆ ಹಣ್ಣಾದಂತಿದ್ದರು. ಅವತ್ತು ಬೆಳಿಗ್ಗೆ ಬೇಗ ತಿಂಡಿ ಅಡಿಗೆ ಮಾಡಿಟ್ಟು ಯಾವುದೋ ನೆಪ ಮಾಡಿಕೊಂಡು ಕೌಸಲ್ಯ ಚಿಕ್ಕಮ್ಮನ ಮನೆಗೆ ಹೊರಟುಬಿಟ್ಟರು. ಮಾಮಣ್ಣ ಹಸನ್ಮುಖಿಯಾಗಿ ಕಳಿಸಿಕೊಟ್ಟಿದ್ದರು. ಎಂದಿಗಿಂತ ಹೊತ್ತು ಮಾಡಿಕೊಂಡು ಸುಕನ್ಯತ್ತೆ ಮನೆಗೆ ಬಂದಾಗಲೂ ಮಾಮಣ್ಣನಿಗೆ ಅರಿವಿಲ್ಲ. ಅವರು ಟಿವಿಯ ಸಂಗದಲ್ಲಿ ಸುಖವಾಗಿದ್ದರು. ಸುಕನ್ಯತ್ತೆ ಇಡೀ ಜೀವನದಲ್ಲೇ ಯಾವುದಕ್ಕೂ ದೂರದೆ ದೇವರು ಕೊಟ್ಟದ್ದು ಎಂದು ತೆಗೆದುಕೊಂಡಿದ್ದವರು ಈಗ ಬೇಜಾರಿನಲ್ಲಿದ್ದರು. ಆ ಕೇಬಲ್ ಹಾಕಿದವನನ್ನು ಕಾದು ಹಿಡಿಯುವ ಪ್ರಯತ್ನ ಮಾಡಿದ್ದರೂ ಆಗಿರಲಿಲ್ಲ. ಕೇಳದೆ ತೆಗೆಸಿಬಿಟ್ಟರೆ ಮಾಮಣ್ಣ ಏನು ಹೇಳಬಹುದೆನ್ನುವ ಭಯ.
 
ಮಾಮಣ್ಣನವರ ಟಿವಿ, ತಿಂಡಿ ಮುಗಿದ ತಕ್ಷಣ ಆರಂಭಗೊಂಡು ಮುಸ್ಸಂಜೆ ಮನೆಯಲ್ಲಿ ದೀಪ ಹತ್ತಿಸುವವರೆಗೂ ನಿರಂತರವಾಗಿ ನಡೆಯುವಂತಾಗಿತ್ತು. ಮಧ್ಯೆ ಶೌಚಕ್ಕೆದ್ದು ಹೋದಾಗಲೂ ಅದನ್ನೂ ಆರಿಸುತ್ತಿರಲಿಲ್ಲ. ನಾನಿಲ್ಲದಾಗ ಏನಾದರೂ ಮಾಡಿಕೊಳ್ಳಲಿ ಪರದೇಶಿ ಎಂದು ಸುಕನ್ಯತ್ತೆಯೂ ತಡವಾಗೇ ಮನೆಗೆ ಬರಲಾರಂಭಿಸಿದ್ದರು. ಟಿವಿಯಿಂದಾಗಿ ಗಂಡ ಹೆಂಡತಿ ಆಗಾಗ ರಾಯರ ಮಠಕ್ಕೆ, ಪೂಜೆ, ಸಮಾರಂಭಗಳಿಗೆ ಹೋಗುವುದು ನಿಂತೇ ಹೋಗಿತ್ತು. ಎಲ್ಲಿಗೆ ಕರೆದರೂ ’ಮಂಡಿನೋವು’ ಉತ್ತರವಾಗುತ್ತಿತ್ತು. ಇಬ್ಬರ ಮಧ್ಯೆ ಮಾತೂ ವಿರಳವಾಗಿತ್ತು. ಮಾಮಣ್ಣ ಮಾತ್ರ ಜಗ್ಗೇಶ ಕೊಡುತ್ತಿದ್ದ ಡೋಸಿನಿಂದ ಪ್ರಸನ್ನಚಿತ್ತರಾಗಿದ್ದರು. ಮೂರ್ನಾ ಲ್ಕು ಕನ್ನಡ ಚಾನೆಲ್ಗಳನ್ನು ಸಾಕಷ್ಟು ನೋಡಿ, ಮನಸ್ಸು ತುಂಬಿ ಟಿವಿ ಆರಿಸಿದ ಮೇಲೆ ಮಾಮಣ್ಣ ಅವತ್ತು ಕಂಡ ಸುದ್ದಿ, ಕಥೆಯ ಬಗ್ಗೆಯೇ ಅಲೋಚನಾಮಗ್ನರಾದಂತಿರುತ್ತಿದ್ದರು. ಮಾಮಣ್ಣನ ಹೊಸ ಹುಚ್ಚು ಬಿಡಿಸುವಂತಾಗಲು ಸ್ವಲ್ಪ ದಿನ ಮಗನ ಜೊತೆಗೆ ಇದ್ದು ಬರುವ ಯೋಚನೆ ಸುಕನ್ಯತ್ತೆಯ ಮನಸ್ಸಿಗೆ ಬಂದಿತ್ತು. ಮಾಮಣ್ಣನಲ್ಲಿ ಪ್ರಸ್ತಾಪ ಮಾಡಿದಾಗ 'ಅಲ್ಲೇನು ಮಾಡುವುದಿದೆ ಬಿಡು' ಎಂದು ತಳ್ಳಿಹಾಕಿದ್ದರು. ಏನೋ ನೀನೇ ಕಂಟಕದಿಂದ ಪಾರು ಮಾಡಪ್ಪಾ...ಆಕೆ ದೇವರ ಮೇಲೆ ಭಾರ ಹಾಕಿ ತಮ್ಮ ಕಸೂತಿಯಲ್ಲಿ ಸಂಪೂರ್ಣ ತೊಡಗಿಸಿಕೊಂಡುಬಿಟ್ಟರು.
 

ಅವತ್ತು ವೈಕುಂಠ ಏಕಾದಶಿ. ಸುಕನ್ಯತ್ತೆ ಪೂಜಾಕಾರ್ಯ ಮಾಡಿಕೊಳ್ಳಲು ಮನೆಯಲ್ಲೇ ಉಳಿದಿದ್ದರು. ಹೂವು ತಂದಿಟ್ಟು ಪೂಜೆಗೆಲ್ಲಾ ಅಣಿ ಮಾಡಿಟ್ಟಿದ್ದರು. ಮಾಮಣ್ಣ ಬೆಳಿಗ್ಗೆ ಎದ್ದು ಪ್ರಾತಃವಿಧಿಗಳನ್ನು ಮುಗಿಸಿ ಪೂಜೆಗೆ ಕೂತಿದ್ದರು. ಸುಮಾರು ಹೊತ್ತು ಪೂಜೆ ಮುಗಿಸಿ ಹೊರಬಂದ ಮಾಮಣ್ಣ ಏನನ್ನೋ ಗುನುಗುನಿಸುತ್ತಾ ಕಾಫಿ ಕುಡಿಯುತ್ತಿದ್ದರು. ಒಂದು ನಿಮಿಷ ಅಡಿಗೆಮನೆಯಲ್ಲಿದ್ದ ಸುಕನ್ಯತ್ತೆಯ ಕಿವಿ ಚುರುಕಾಯಿತು. ಕಿವಿಗೆ ಕೇಳಿಸುತ್ತಿರುವುದು ಅದೇಯೇ ಎಂದು ಆಲಿಸಿದರು. ಅಯ್ಯೋ!!! ಕೇಳಿ ಕಿವಿ, ಕೆನ್ನೆಯೆಲ್ಲಾ ಕೆಂಪಾಯಿತು. ಕೈಲಿದ್ದ ಪಾತ್ರೆ ಕುಕ್ಕಿ ಹೊರಗೆ ಬಂದರು. ಯಾವುದರ ಅರಿವೆಯೂ ಇಲ್ಲದೆ ಹಾಲಿನಲ್ಲಿ ತಮ್ಮ ಚೇರಿನಲ್ಲಿ ಕುಳಿತಿದ್ದ ಮಾಮಣ್ಣಖಾನಾ ಪೀನ ಸೇರ್ತಾಯಿಲ್ಲ ನಂದೂಕೆ...ನಂದೂಕೆ...ಪ್ಯಾರ್ಗೆ ಆಗಿ ಬುಟ್ಟೈತೆ...ಆಗಿ ಬುಟ್ಟೈತೆ’ ಭಜಿಸುತ್ತಾ ಕಾಫಿಯ ಸಂಪೂರ್ಣ ಸುಖ ಹೀರುತ್ತಿದ್ದರು.

 
 
 


 
 
 
 
 
Copyright © 2011 Neemgrove Media
All Rights Reserved