ಸಹಜ ಆಹಾರ = ಆರೋಗ್ಯ v/s ಜಿ.ಎಮ್.ಓ = ಸರ್ವ ಅವಾಂತರ

 
 
 ಅಮೆರಿಕನ್ ಅಕಾಡೆಮಿ ಆಫ್ ಎನ್ವೈರ್ನ್ಮೆಂಟಲ್ ಮೆಡಿಸಿನ್, ತಜ್ನ ವೈದ್ಯರುಗಳ ಒಂದು ಅಂತರರಾಷ್ಟ್ರ‍ೀಯ ಸಂಸ್ಥೆ. ಈ ಸಂಸ್ಥೆ ಜೆನೆಟಿಕಲಿ ಮಾಡಿಫೈಡ್ ಅಥವಾ ಕುಲಾಂತರಿ ತಳಿಗಳ ಆಹಾರ ಪದಾರ್ಥಗಳಿಂದ ಜೀವಿಗಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಕುರಿತು ಸಾಕಷ್ಟು ವಿಶದವಾಗಿ ವಿವರಗಳನ್ನು ಮಂಡಿಸಿದೆ. ಕುಲಾಂತರಿ ತಳಿಗಳಿಂದ ಉತ್ಪತ್ತಿಯಾದ (ಸಸ್ಯಾಹಾರ ಮತ್ತು ಮಾಂಸಾಹಾರ) ಆಹಾರಗಳನ್ನು ಸೇವಿಸುವುದರಿಂದ ಮನುಷ್ಯರಲ್ಲಿ ರೋಗನಿರೋಧಕ ಶಕ್ತಿಯ ಕುಂದುವಿಕೆ, ನಪುಂಸಕತ್ವ, ಸ್ಥೂಲಕಾಯತ್ವ, ಇನ್ಸುಲಿನ್ ಮತ್ತು ಕೊಲೆಸ್ಟ್ರಾಲ್ ಏರುಪೇರು, ತ್ವರಿತಗತಿಯಲ್ಲಿ ವಯಸ್ಸಾಗುವುದು, ಜೀರ್ಣಾಂಗಗಳಿಗೆ ಸಂಬಂಧಿಸಿದ ತೊಂದರೆಗಳು, ದೇಹಕ್ಕೆ ಅತ್ಯಗತ್ಯವಾಗಿ ಬೇಕಾಗುವ ಅಂಗಗಳ ವೈಫಲ್ಯ ಇವೆಲ್ಲವೂ ಹೆಚ್ಚಳವಾಗಿದೆ ಎಂದು ವೈಜ್ನಾನಿಕವಾಗಿ ಸಾಬೀತುಪಡಿಸುತ್ತದೆ. ಕುಲಾಂತರಿ ತಳಿಗಳಿಂದ ಪಡೆದ ಆಹಾರಗಳೇ ಅಮೆರಿಕನ್ನರ ಬಹುಪಾಲು ಆರೋಗ್ಯದ ಸಮಸ್ಯೆಗಳಿಗೆ ನೇರ ಕಾರಣ ಎಂದು ನಿಖರವಾಗಿ ಅಭಿಪ್ರಾಯ ಪಡುತ್ತದೆ.
 
ಈ ಸಂಸ್ಥೆ ೨೦೦೯ರಲ್ಲೇ ಎಚ್ಚರಿಕೆಯೊಂದನ್ನು ಪ್ರಕಟಿಸಿ ಅಮೆರಿಕಾದ ವೈದ್ಯರು ತಮ್ಮಲ್ಲಿ ಬರುವ ಎಲ್ಲಾ ರೋಗಿಗಳಿಗೆ ಕುಲಾಂತರಿಯಲ್ಲದ, ನಿಸರ್ಗದತ್ತವಾದ ಸಾವಯವ ಆಹಾರಗಳನ್ನು ರೂಡಿಸಿಕೊಳ್ಳುವಂತೆ ಕರೆನೀಡಬೇಕೆಂದು ಎಚ್ಚರಿಸಿತ್ತು. ಅಮೆರಿಕಾದಲ್ಲಿ ಕುಲಾಂತರಿ ತಳಿಗಳಿಂದ ಪಡೆದ ಆಹಾರವಸ್ತುಗಳು ಯಾವ ಪ್ರಮಾಣದಲ್ಲಿ ಹಾಸುಹೊಕ್ಕಾಗಿದೆಯೆಂದರೆ ಡಾಕ್ಟರರಿಗೂ ಅದರ ದುಷ್ಪರಿಣಾಮ ಹಾಗೆಯೇ ಗೊತ್ತಾಗಲು ಸಾಧ್ಯವಿಲ್ಲ. ಆದರೆ ಇತ್ತೀಚಿನ ವೈಜ್ನಾನಿಕ ಅಧ್ಯಯನಗಳ ಫಲವಾಗಿ ದೊರೆತಿರುವ ಫಲಿತಾಂಶಗಳು ಶೇಕಡಾ ೯೦ರಷ್ಟು ಕಾಯಿಲೆಗಳಿಗೆ ಕುಲಾಂತರಿ ತಳಿಯ ಆಹಾರಗಳತ್ತಲೇ ಬೊಟ್ಟು ಮಾಡುತ್ತಿವೆ ಎನ್ನುತ್ತದೆ.
 
 
ವಿಶ್ವದ ವಿವಿಧ ದೇಶಗಳಲ್ಲಿ ಅಧ್ಯಯನ, ಪರೀಕ್ಷೆ ನಡೆಸಿರುವ ಈ ಸಂಸ್ಥೆಯ ತಜ್ನರು ಕುಲಾಂತರಿ ತಳಿಗಳಿಂದ ದೊರೆಯುವ ಆಹಾರ ಪದಾರ್ಥಗಳು ದೇಹದ ಪ್ರತಿಯೊಂದು ಅಂಗಕ್ಕೂ, ಭಾಗಕ್ಕೂ ಪ್ರತೀಹಾರ ಮಾಡುತ್ತದೆ...ಮನುಷ್ಯನ ದೇಹದಲ್ಲಿ ವಿಷಯುಕ್ತತೆಯನ್ನು ಹೆಚ್ಚಿಸಿ ಅವರಲ್ಲಿ ಅಲರ್ಜಿಗಳನ್ನು ಹುಟ್ಟಿಸುತ್ತದೆ...ಇತ್ತೀಚಿನ ದಶಕಗಳಲ್ಲಿ ಅಮೆರಿಕಾದಲ್ಲಿ ಸೋಂಕಿನಂತೆ ವ್ಯಾಪಿಸಿರುವ ನಾನಾ ಬಗೆಯ ಅಲರ್ಜಿಗಳಿಗೂ ಕುಲಾಂತರಿ ತಳಿಗಳ ಸೇವನೆಯೇ ಕಾರಣ ಎನ್ನುತ್ತಾರೆ.
 
ಕುಲಾಂತರಿ ತಳಿಯ ಆಹಾರ ಪದಾರ್ಥಗಳನ್ನು ತಿನ್ನಿಸಿ ಆರೋಗ್ಯವಂತ ಇಲಿಗಳ ಸಂತಾನೋತ್ಪತ್ತಿಯ ಮೇಲೆ ನಡೆಸಿದ ಪ್ರಯೋಗಗಳು ಗಾಬರಿಯಾಗುವ ಫಲಿತಾಂಶಗಳನ್ನು ಕೊಟ್ಟಿವೆ. ಈ ಬಗೆಯ ಆಹಾರ ತಿಂದ ಆರೋಗ್ಯಕರ ಗಂಡು ಇಲಿಗಳ ವೃಷಣಗಳಲ್ಲಿ ವೀರ್ಯೋತ್ಪಾದನೆ ಗಣನೀಯವಾಗಿ ಕಡಿಮೆಯಾಗಿ ಹೆಣ್ಣು ಇಲಿಗಳಲ್ಲಿ ಗರ್ಭವನ್ನು ಉಳಿಸಿಕೊಳ್ಳುವ ಸಾಮರ್ಥ್ಯ ಕಳೆದುಕೊಳ್ಳುವುದರ ಜೊತೆಗೆ ಶೇಕಡಾ ೫೦ ರಷ್ಟು ಹೆಣ್ಣು ಇಲಿಗಳು ಮೃತ ಮರಿಗಳಿಗೆ ಜನ್ಮವಿತ್ತಿವೆ ಎಂದು ಸಂಸ್ಥೆ ತಿಳಿಸುತ್ತದೆ.
 
ಹಾಗಾದರೆ, ಉನ್ನತ ವೈಜ್ನಾನಿಕ ಸಂಸ್ಥೆಯೊಂದು ಹೀಗೆಲ್ಲಾ ವರದಿ ಮಾಡಿದರೂ ಇದೆಲ್ಲಾ ಜನಸಾಮಾನ್ಯರಿಗೆ ಏಕೆ ತಲುಪುವುದಿಲ್ಲ? ಮಾಧ್ಯಮಗಳಲ್ಲೇಕೆ ಪ್ರಚುರಿತವಾಗುವುದಿಲ್ಲ? ಆ ಬಗೆಯ ಆಹಾರ ಪದಾರ್ಥಗಳು ಅಮೆರಿಕಾದ ಮಾರುಕಟ್ಟೆಗಳಲ್ಲಿ ಏಕೆ ಇವೆ? ಪ್ರಶ್ನೆ ಬರುವುದು ಸಹಜ.
 
ನಾವು ಪದೇ ಪದೇ ನಮಗೆ ತಿಳಿದದ್ದನ್ನು ನಿಮ್ಮೊಂದಿಗೆ ಹೇಳುತ್ತಲೇ ಬಂದಿದ್ದೇವೆ. ಅಮೆರಿಕಾವನ್ನು ಆಳುತ್ತಿರುವುದು ಇಲ್ಲಿಯ ಸರ್ಕಾರವಲ್ಲ; ಇಲ್ಲಿಯ ಬಂಡವಾಳಶಾಹೀ ವ್ಯವಸ್ಥೆ. ಸರ್ಕಾರ
 
ಫಾರ್ಮಸೂಟಿಕಲ್, ಕೋಕಾಕೋಲ, ಮೋನ್ಸಾಂಟೋ, ಟೈಸನ್, ಲಾಕ್ ಹೀಡ್ ಮಾರ್ಟಿನ್ ನಂತಹ ಬೃಹತ್ ಉದ್ಯಮಗಳ ಸದಾ ಅಧೀನದಲ್ಲಿರುವುದರಿಂದ ಮತ್ತು ಇದೇ ಕಂಪನಿಗಳು ಅಮೆರಿಕಾದ ಶೇಕಡಾ ೯೫ರಷ್ಟು ಮಾಧ್ಯಮಗಳ ಒಡೆತನವನ್ನು ಹೊಂದಿರುವುದರಿಂದ ಇಂತಹ ಸುದ್ದಿಗಳನ್ನು ಬೆಳ್ಳಂಬೆಳಿಗ್ಗೆ ಸಿಎನ್ಎನ್ ಅಥವಾ ಫಾಕ್ಸ್ ನ್ಯೂಸಿನ ಬ್ರೇಕಿಂಗ್ ನ್ಯೂಸಿನಲ್ಲಿ ನಿರೀಕ್ಷಿಸುವುದು ನಮ್ಮ ದಡ್ಡತನದ ಪರಮಾವಧಿ.

ಯಾವುದೇ ಸಿರಿವಂತ ಕಂಪನಿಗಳ ಒಡೆತನಕ್ಕೆ ಶೇರುಗಳಿಗೆ ಸಿಗದೆ ತಮ್ಮ ಸ್ವಾಯತ್ತತೆಯನ್ನು ಉಳಿಸಿಕೊಂಡಿರುವ ಕೆಲವು ಪ್ರಶಂಸನೀಯ ದಿಟ್ಟ ಸಂಸ್ಥೆಗಳ ವೈಜ್ನಾನಿಕ ವರದಿಗಳು ಈ ಎಲ್ಲ ಕಾರಣಗಳಿಂದಾಗಿಯೇ ಜನಸಾಮಾನ್ಯರನ್ನು ತಲುಪುವುದೇ ಇಲ್ಲ. ಅವು ಪುಸ್ತಕ ರೂಪಗಳಲ್ಲೊ, ವರದಿಗಳಾಗಿಯೋ ಹೊರಬಂದು ಅಧ್ಯಯನದ ಕೋಣೆಗಳಲ್ಲೇ ಉಳಿದುಬಿಡುತ್ತವೆ. ಅಥವಾ ಸ್ವಯಂ ಆಸಕ್ತಿಯಿಂದ ತನ್ನ ದೇಹ ಮನಸ್ಸುಗಳಿಗಾಗುತ್ತಿರುವ ಅನಾರೋಗ್ಯಗಳಿಗೆ ಕಾರಣಗಳನ್ನು ಹುಡುಕಿಕೊಂಡು ಅದನ್ನು ಸರಿಪಡಿಸಿಕೊಳ್ಳಲು ಕಾರ್ಯಪ್ರವೃತ್ತರಾಗುವವರಿಗೆ ಮಾತ್ರ ತಲುಪುತ್ತವೆ. ಹೆಚ್ಚಿನ ಜನ ಆ ಬಗೆಯ ಪುಸ್ತಕ ಓದುವುದಕ್ಕಿಂತ ಒಂದಷ್ಟು ಆಲೂಗಡ್ಡೆ ಚಿಪ್ಸ್ ತಿನ್ನಲೋ, ಕೋಲಾ ಪೇಯಕ್ಕೋ ಅಥವಾ ’ಓರಿಯೋ’ ತಿನ್ನಲೋ ತಮ್ಮ ಅಮೂಲ್ಯ ಹಣ, ಸಮಯ, ಆರೋಗ್ಯವನ್ನು ವ್ಯರ್ಥ ಮಾಡಿಕೊಳ್ಳುತ್ತಾ ಪ್ರತಿನಿತ್ಯ ಇಂಚಿಂಚೇ ಹೊಸಹೊಸ ಭಯಾನಕ ರೋಗಗಳಿಗೆ ರತ್ನಗಂಬಳಿ ಹಾಸುತ್ತಾರೆ.

ಪ್ರತಿಯೊಬ್ಬ ಅಮೆರಿಕನ್ ಪ್ರಜೆಯೂ ಜಾಗೃತನಾಗಿ ಕುಲಾಂತರಿ ತಳಿಗಳನ್ನು ತಿರಸ್ಕರಿಸಿದರೆ, ಆಹಾರವನ್ನು ಪ್ರಜ್ನೆಯಿಂದ ಆಯ್ಕೆ ಮಾಡಿದರೆ ಅಮೆರಿಕಾದ ’ಆಹಾರ ಉದ್ಯಮ’ ಕುಸಿದು ಬೀಳುವುದು ಖಂಡಿತ. ಸಾಕಷ್ಟು ಡಾಕ್ಟರರು, ಆಸ್ಪತ್ರೆ ಸಿಬ್ಬಂದಿಗಳು, ಫಾರ್ಮಸೂಟಿಕಲ್ ಕಂಪನಿಗಳು, ಸಹಸ್ರ ಸಿದ್ಧಾಹಾರ ತಯಾರಿಕಾ ಕಂಪನಿಗಳು, ಪ್ರತಿನಿತ್ಯ ಹೊಸ ಕುಲಾಂತರಿ ತಳಿಗಳನ್ನು ಸೃಷ್ಟಿಸುತ್ತಿರುವ ಪ್ರಯೋಗಶಾಲೆಗಳು, ಕುಲಾಂತರಿ ಪ್ರಾಣಿ ಸಾಕಣಿಕೆ ಕೇಂದ್ರಗಳು, ಮ್ಯಾಕ್ ಡೊನಾಲ್ಡ್ ಇತರೆ ಫಾಸ್ಟ್ ಫುಡ್ ಸರಣಿಗಳು, ಸಬ್ಸಿಡಿ ಸಿಗುತ್ತಿದೆಯೆಂದು ಹೆಕ್ಟೇರುಗಟ್ಟಲೆ ಭೂಮಿಯಲ್ಲಿ ಕುಲಾಂತರಿ ತರಕಾರಿ-ಧಾನ್ಯಗಳನ್ನು ಬೆಳೆಯುತ್ತಿರುವ ರೈತರು ಕೆಲಸ ಕಳೆದುಕೊಳ್ಳಬೇಕಾಗುತ್ತದೆ. ಹಾಗಾದರೆ ಈ ಎಲ್ಲಾ ಮಂದಿ ಕೆಲಸ ಉಳಿಸಿಕೊಳ್ಳುವುದು ನಮಗೆ ಮುಖ್ಯವೋ? ಭೂಮಿ, ಪರಿಸರ, ನಮ್ಮನಮ್ಮ ಮಾನಸಿಕ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಾ ಸದಾ ಔಷಧಿಗಳ ಮೊರೆ ಹೋಗದೆ, ಸ್ವಸ್ತ ಜೀವನ ನಡೆಸುವುದು ನಮಗೆ ಮುಖ್ಯವೋ? ತಿರ್ಮಾನ ನಮ್ಮ ಕೈಯ್ಯಲ್ಲಿದೆ.
 
 

ವಾಲುತ್ತಿರುವ ವೆನಿಸ್ ನಗರ!

 
 
 
ಗ್ಲೋಬಲ್ ವಾರ್ಮಿಂಗ್ ದೆಸೆಯಿಂದಾಗಿ ವಿಶ್ವದ ಸಮುದ್ರಗಳ ನೀರಿನ ಮಟ್ಟ ಹೆಚ್ಚುತ್ತಿದ್ದು ಏಡ್ರಿಯಾಟಿಕ್ ಸಮುದ್ರದ ನೀರಿನ ಮಟ್ಟವೂ ಹೆಚ್ಚಿ, ಒಂದು ಕಾಲದಲ್ಲಿ ವಿಶ್ವದ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದ ವೆನಿಸ್ ನಗರ ನಿಧಾನವಾಗಿ ನೀರಿನಲ್ಲಿ ಮುಳುಗುತ್ತಿದೆ. ವೆನಿಸ್ ದ್ವೀಪ ಇರುವ ಭೂಭಾಗದಲ್ಲೇ ಇರುವ ಅಥೆನಾಯ್ನ್ ಪರ್ವತ ಶ್ರೇಣಿಯ ಭಾರದಿಂದಾಗ ಮುಳುಗುವಿಕೆಯ ಪ್ರಕ್ರಿಯೆ ಹೆಚ್ಚಾಗಿದ್ದು, ಈ ಪರ್ವತ ಶ್ರೇಣಿಯ ಭಾರದಿಂದ ಆ ಭೂತಳದಲ್ಲಿರುವ ಟೆಕ್ಟಾನಿಕ್ ಪ್ಲೇಟ್ಗಳು ಕೂಡಾ ಬಾಗುತ್ತಿರುವುದರಿಂದ ವೆನಿಸ್ ನಗರ ನಿಧಾನವಾಗಿ ಒಂದು ಪಕ್ಕಕ್ಕೆ ವಾಲುತ್ತಿದೆ. 
ವೆನಿಸ್ ನಗರ ಎತ್ತರದ ಗೋಪುರಗಳಿಗೆ ವಿಶೇಷ. ವೆನಿಸ್ ನ ವಾಸ್ತುಶಿಲ್ಪ, ವಾಣಿಜ್ಯ ಉತ್ತುಂಗದ ದ್ಯೋತಕವಾಗಿ ನೂರಾರು ವರ್ಷಗಳಿಂದ ನಗರದ ಬೇರೆ ಬೇರೆ ಭಾಗಗಳಲ್ಲಿ ನಿಂತಿರುವ ಈ ಗೋಪುರಗಳು ಟೆಕ್ಟಾನಿಕ್ ಪ್ಲೇಟ್ ಗಳ ವಾಲುವಿಕೆಗೆ ಮೂಕಸಾಕ್ಷಿಯಾಗಿವೆ. 
ಭೂಮಿಯ ಉಷ್ಣಾಂಶ ಹೀಗೇ ಹೆಚ್ಚಿ, ನೀರ್ಗಲ್ಲುಗಳು-ಶೈತ್ಯ ಗೋಳಗಳು ಕರಗಿ ಸಮುದ್ರದ ಮಟ್ಟ ಮತ್ತಷ್ಟು ಹೆಚ್ಚಾದಷ್ಟು ದ್ವೀಪನಗರಿಯಾಗಿರುವ ವೆನಿಸ್ ಮತ್ತಷ್ಟು ಮುಳುಗುವುದರಲ್ಲಿ ಅನುಮಾನವಿಲ್ಲ ಎಂದು ಪರಿಸರ ವಿಜ್ನಾನಿಗಳು ಅಭಿಪ್ರಾಯಪಡುತ್ತಾರೆ.  ಸಮುದ್ರ ವೆನಿಸ್ ನಗರಕ್ಕೆ ಇನ್ನೂ ೨೦ ವರ್ಷಗಳ ಜೀವದಾನ ಕೊಡಲಿದೆ ಎನ್ನುತ್ತಾರೆ
 
 
 
 
 
 
Copyright © 2011 Neemgrove Media
All Rights Reserved