ಗಾಳಿ ಅಂಗಿ ಚುಂಗು ಹಿಡಿದು
ಕಾಲಿಗಷ್ಟು ಚಕ್ರ ಕಟ್ಟಿ
ಮೆಲ್ಲ ಮೆಲ್ಲ ಸಿಲ್ಲಿ ಗಲ್ಲಿ
ಕೋಟೆ ಕೊತ್ತಲ ಊರು ಸುತ್ತಿ
ಕಣ್ಣು ಕಂಡ ಪಟಗಳನ್ನು
ಮನದ ಪದಕೆ ತಳಿಕೆ ಹಾಕಿ
ಹಿಗ್ಗು ಸುಗ್ಗಿ ಎಲ್ಲ ಸುರಿದು
ಪುಟದ ಮೇಲೆ ತಟಪಟಾ...

 
 

ಜರ್ಮನಿಯತ್ತ ಪಯಣ-ಕೆಲವೊಮ್ಮೆ ಜಾಗಕ್ಕಿಂತ ಜನರೇ ಇಂಟರೆಸ್ಟಿಂಗ್ ಮಾರಾಯ್ರೇ.

ಟೋನಿ
 
ಟೋನಿ
 
ರಾತ್ರಿ ನನ್ನ ರೂಮ್ ಮೇಟ್ ಗೊರಕೆಯ ಸದ್ದಿನಲ್ಲಿ ನಿದ್ರೆ ಬರುವ ಸೂಚನೆಯೇ ಕಾಣಲಿಲ್ಲ. ಹಿಪೊಪೊಟಾಮಸ್ ಎಂಬ ಪ್ರಾಣಿ ಜೋರಾಗಿ ಉಸಿರಾಡಿದಾಗ ಬರುತ್ತಿದ್ದ ಶಬ್ಧವನ್ನು ನ್ಯಾಷನಲ್ ಜಿಯಾಗ್ರಫಿಕ್ ಚಾನಲ್ಲಿನಲ್ಲಿ ನೋಡಿ ಕೇಳಿದ್ದ ನನಗೆ ಆ ಶಬ್ಧಕ್ಕೂ ಇವರ ಗೊರಕೆಯ ಶಬ್ಧಕ್ಕೂ ಯಾವುದೇ ವ್ಯತ್ಯಾಸ ಕಂಡುಬರಲಿಲ್ಲ. ನಿದ್ರೆ ಬಾರದೇ ಅರ್ಧರಾತ್ರಿವರೆಗೆ ಒದ್ದಾಡಿದ್ದ ನಾನು ನಿದ್ರೆ ಬರುವಷ್ಟು ಸುಸ್ತಾಗುವವರೆಗೆ ಬ್ರಸೆಲ್ಸ್ ಸಿಟಿಯಲ್ಲಿ ಅಡ್ಡಾಡಿ ಬಂದಿದ್ದೆ. ಅಂತೂ ಬೆಳಗಿನ ಜಾವದ ಹೊತ್ತಿಗೆ ನಿದ್ರಾದೇವಿ ನನ್ನನ್ನಾವರಿಸಿದ್ದಳು. ತಡವಾಗಿ ನಿದ್ರೆ ಮಾಡಿದ್ದರಿಂದ ಬೆಳಿಗ್ಗೆ ಏಳುವ ಹೊತ್ತಿಗಾಗಲೇ ಎಂಟು ಗಂಟೆಯಾಗಿತ್ತು. ಸದ್ಯ ಜ್ಯೂಜ಼ರನ ವೇಕ್ ಅಪ್ ಕಾಲ್ ಬಂದಿರಲಿಲ್ಲ. ನಿನ್ನೆ ಸಂಜೆಯೇ ಆತ ೯ ಗಂಟೆ ಹೊತ್ತಿಗೆ ರೆಡಿಯಾಗಿರಬೇಕೆಂದು ಹೇಳಿದ್ದರಿಂದ ಬೆಳಿಗ್ಗೆ ಫೋನ್ ಮಾಡಿರಲಿಲ್ಲ. ಇಂದು ಬೆಳಿಗ್ಗೆ ತಿಂಡಿ ತಿಂದು ಬ್ರುಸೇಲ್ಸ್ ನಗರ ಪ್ರದಕ್ಷಿಣೆ ಮಾಡಿ ಜರ್ಮನಿಗೆ ಹೊರಡುವುದಾಗಿ ನಿನ್ನೆ ಜ್ಯೂಜ಼ರ್ ಹೇಳಿದ್ದು ನೆನಪಾಗಿ ಲಗುಬಗೆಯಿಂದ ಎದ್ದು ರೆಡಿಯಾಗಿದ್ದೆ.
 
ವಿಶ್ವದ ಎರಡನೇ ಮಹಾಯುದ್ದಕ್ಕೆ ಕಾರಣನಾಗಿದ್ದ ನಾಜ಼ಿ ಅಡಾಲ್ಫ್ ಹಿಟ್ಲರನಾಳಿದ್ದ ಜರ್ಮನಿ, ಇಡೀ ಜಗತ್ತನ್ನೇ ನಾಶದ ಅಂಚಿನತ್ತ ಕೊಂಡೊಯ್ದಿದ್ದ ಜರ್ಮನಿ, ಆಧುನಿಕ ಜಗತ್ತಿನ ಇತಿಹಾಸದಲ್ಲಿ ಸರ್ವಾಧಿಕಾರಿಯೊಬ್ಬನ ಆಡಳಿತಕ್ಕೆ ಸಿಲುಕಿ ರಕ್ತಸಿಕ್ತ ಅಧ್ಯಾಯದ ಪುಟಗಳನ್ನು ಬರೆದಿದ್ದ ಜರ್ಮನಿ, ಐದಾರು ದಶಕದ ಹಿಂದೆ ಜಗತ್ತಿನ ಜನತೆಯ ದೃಷ್ಟಿಯಲ್ಲಿ ಮಹಾ ಖಳನಾಯಕನ ಸ್ಥಾನದಲ್ಲಿತ್ತು. ಒಡೆದು ಎರಡು ಹೋಳಾಗಿದ್ದ ಜರ್ಮನಿ ದಶಕಗಳ ನಂತರ ಮತ್ತೆ ಒಂದಾಗಿತ್ತು. ಒಟ್ಟಾರೆ ಜಗತ್ತಿನ ಇತಿಹಾಸದ ಪುಟಗಳಲ್ಲಿ ಜರ್ಮನಿ ಮೂಡಿಸಿದ್ದ ಛಾಪನ್ನು ಮರೆಯುವಂತೆಯೇ ಇಲ್ಲ. ಅಂಥಾ ವರ್ಣರಂಜಿತ ಇತಿಹಾಸ ಹೊಂದಿದ್ದ ದೇಶವನ್ನು ನೋಡಲು ಹೋಗುತ್ತಿರುವುದೇ ಖುಷಿಯ ಸಂಗತಿಯಾಗಿತ್ತು. ನನ್ನ ರೂಮ್ ಮೇಟ್ ನಾನು ಸ್ನಾನ ಮಾಡಿ ಬರುವ ಹೊತ್ತಿಗೆ ಲಗೇಜಿನ ಸಮೇತ ತಿಂಡಿ ತಿನ್ನಲು ರೆಸ್ಟೋರೆಂಟ್ ಕಡೆ ಹೊರಡಲು ರೆಡಿಯಾಗಿದ್ದವರು ನಾನು ಬಾತ್ ರೂಮಿನಿಂದ ಹೊರಬರುವುದನ್ನೇ ಕಾಯುತ್ತಿದ್ದವರಂತೆ ’ರಾತ್ರಿ ಎಲ್ಲಾದರೂ ಹೊರಗಡೆ ಹೋಗಿದ್ರಾ, ಒಂದು ಹೊತ್ತಲ್ಲಿ ಎದ್ದು ನೋಡಿದಾಗ ನೀವು ಕಾಣಲಿಲ್ಲವಲ್ಲ, ಎಲ್ಲಿಗೋಗಿದ್ರಿ? ’ ಅಂದರು. ಅವರ ಗೊರಕೆಯ ಮಹಾತ್ಮೆಯಿಂದ ನಾನು ಹೊರಗಡೆ ಹೋಗಬೇಕಾಗಿಬಂತೆಂಬುದನ್ನು ಹೇಳಲು ಕೂತರೆ ಅದು ಸದ್ಯಕ್ಕೆ ಮುಗಿಯದ ಪುರಾಣವಲ್ಲವೆಂಬುದನ್ನು ತಿಳಿದವನೇ ’ಬೇಗನೇ ಎದ್ದುಬಿಟ್ಟೆ ಕಣ್ರೀ, ವಾಕ್ ಹೋಗೋಣವೆಂದು ಹೋದರೆ ಇನ್ನೂ ಬೆಳಗ್ಗೆ ೩ ಗಂಟೆಯಾಗಿದ್ದರಿಂದ ಮತ್ತೆ ಬಂದು ಮಲಗಿದೆ, ಈ ಯೂರೋಪಿನಲ್ಲಿ ಬೆಳಿಗ್ಗೆ ನಾಲ್ಕು ಗಂಟೆಗೆಲ್ಲಾ ಬೆಳಕಾಗಿ ಬಿಡುವುದರಿಂದ ಸರಿಯಾದ ಹೊತ್ತೇ ತಿಳಿಯುವುದಿಲ್ಲ’ ಅಂದೆ. ಅದಕ್ಕವರು ’ ಹೌದು, ಹೌದು, ನನಗೂ ಸರಿಯಾಗಿ ನಿದ್ರೆಯೇ ಬರುವುದಿಲ್ಲ, ಅಗಾಗ್ಗೆ ಎಚ್ಚರವಾಗಿಬಿಡುತ್ತೆ’ ಅಂದರು. ನಿಮಗೆ ಎಚ್ಚರವಾಗುವುದು ಹವಾಮಾನದ ಬದಲಾವಣೆಯಿಂದ ಅಲ್ಲ, ನಿಮ್ಮ ಭಯಂಕರ ಗೊರಕೆಯ ಶಬ್ಧದಿಂದಲೇ ಎಂದು ಹೇಳಬೇಕೆಂದುಕೊಂಡೆನಾದರೂ ಬೆಳ್ಳಂಬೆಳಿಗ್ಗೆಯೇ ಗೊರಕೆಯ ನೆನಪಿನೊಂದಿಗೆ ದಿನದ ಆರಂಭವಾಗುವುದು ಬೇಡವೆಂದು ನಕ್ಕು ಸುಮ್ಮನಾದೆ.
 
ಲಗೇಜು ತೆಗೆದುಕೊಂಡು ಕೆಳಗಿಳಿದು ಬರುವ ಹೊತ್ತಿಗೆ ಎಲ್ಲರೂ ಆಗಲೇ ತಿಂಡಿ ತಿನ್ನತೊಡಗಿದ್ದರು. ನಾವು ಉಳಿದುಕೊಂಡಿದ್ದ ರಮಾಡ ಹೋಟೆಲ್ ತುಂಬಾ ಚೆನ್ನಾಗಿತ್ತು. ಅಲ್ಲಿ ಜೋಡಿಸಿಟ್ಟಿದ್ದ ಕಾಂಟಿನೆಂಟಲ್ ಬ್ರೇಕ್ ಫ಼ಾಸ್ಟ್ ತಿಂಡಿಗಳಲ್ಲಿ ಒಂದೊಂದರ ರುಚಿ ನೋಡಬೇಕೆಂದುಕೊಂಡು ತಿನ್ನಲು ಕೂತರೂ ಅದು ಎರಡು ದಿನದ ಊಟಕ್ಕಾಗುವಷ್ಟಾಗುತ್ತಿತ್ತು. ಹೊಸದುದನ್ನು ಏನಾದರೂ ತಿಂದು ಅದು ಹೊಟ್ಟೆಯ ಮೇಲೆ ಕೆಟ್ಟ ಪರಿಣಾಮವನ್ನು ಬೀರಿದರೆ ಕರಾರುವಾಕ್ಕಾದ ಸಮಯಕ್ಕೆ ರೆಡಿಯಾಗಿರಬೇಕಾಗಿದ್ದ ಈ ಯೂರೋಪ್ ಪ್ಯಾಕೇಜ್ ಪ್ರವಾಸದಲ್ಲಿ ಎಡವಟ್ಟಾದರೆ ಕಷ್ಟವೆಂಬ ಆತಂಕದಿಂದ ಆಗಲೇ ತಿಂದು ಅಡ್ಜಸ್ಟ್ ಆಗಿದ್ದುದನ್ನೇ ಆರಿಸಿ ತಿಂದೆ. ಅಷ್ಟರಲ್ಲಿ ನಮ್ಮ ಗೈಡ್ ಜ್ಯೂಜ಼ರ್ ತಿಂಡಿ ತಿನ್ನುತ್ತಿದ್ದವರ ಬಳಿಗೆ ಬಂದು ಯಾವುದೇ ಅವಸರ ಮಾಡದೇ ಹೋಟೆಲ್ ಹೇಗಿದೆ ಎಂದು ಕೇಳತೊಡಗಿದ್ದ. ಎಲ್ಲರೂ ತೃಪ್ತಿಯಿಂದ ಫ಼ಸ್ಟ್ ಕ್ಲಾಸ್, ಫ಼ಸ್ಟ್ ಕ್ಲಾಸ್ ಅನ್ನತೊಡಗಿದ್ದರು. ಇನ್ನು ಮುಂದಿನ ದಿನಗಳಲ್ಲಿ ನಾವು ಇನ್ನೂ ಒಳ್ಳೆಯ ಹೋಟೆಲುಗಳಲ್ಲಿ ನಮ್ಮ ಪ್ರವಾಸಿಗರನ್ನು ಉಳಿಸುತ್ತೇವೆಂದ. ಕಪ್ಪದ್ ಬಳಿ ಬಂದವರೇ ’ಹೋಟೆಲ್ ತುಂಬಾ ಚೆನ್ನಾಗಿದೆ ಅಲ್ಲೇನ್ರೀ, ನಮ್ಮ ಜ್ಯೂಜ಼ರ್ ಮುಂದೆ ಇನ್ನೂ ಒಳ್ಳೊಳ್ಳೆಯ ಹೋಟೆಲ್ಲುಗಳಲ್ಲೇ ನಮಗೆ ತಂಗಲು ವ್ಯವಸ್ಥೆ ಮಾಡ್ತಾನಂತ್ರೀ, ಏನೇ ಆದರೂ ಇಂಡಿಯಾ ಇಂಡಿಯಾನೇ, ಯೂರೋಪ್ ಯೂರೋಪೇ ಕಣ್ರೀ’ ಅಂದರು. ಹೀಗೆ ಖುಶಿ ಖುಶಿಯಾಗಿ ಯೂರೋಪಿನ ಬಗ್ಗೆ ಹೊಗಳಿ ಮಾತನಾಡಿದ ಇದೇ ಕಪ್ಪದ್ ಮುಂದೆ ಸ್ವಿಟ್ಜರ್ಲ್ಯಾಂಡಿನ ಹೋಟೆಲಿನಲ್ಲಿ ಕೇವಲ ಒಂದು ಸೋಪಿನ ಕಾರಣಕ್ಕಾಗಿ ಕೆಲಸಗಾರರಿಗೆ ಹಿಗ್ಗಾ ಮುಗ್ಗಾ ಜಾಡಿಸಿ ಭಾರತವನ್ನು ಹೊಗಳಿ ಅಟ್ಟಕ್ಕೇರಿಸಿದ್ದರು.
 
ಬಸ್ಸಿನೊಳಕ್ಕೆ ಲಗೇಜನ್ನು ಹಾಕಿ ನಮ್ಮ ಚಾಲಕ ಕಂ ಗೈಡ್ ಆಗಿದ್ದ ’ಆರ್’ ಜತೆಗೆ ಹರಟೆ ಹೊಡೆಯುತ್ತಾ ಜರ್ಮನಿಯಲ್ಲಿನ ಈಗಿನ ಪರಿಸ್ಥಿತಿ ಬಗ್ಗೆ ಕೇಳತೊಡಗಿದ್ದೆ. ಆತ ಅದರ ಬಗ್ಗೆ ಹೇಳತೊಡಗಿದಾಗ ಮತ್ತೊಂದಿಬ್ಬರು ಬಂದು ಅವನ ಮಾತನ್ನು ಕೇಳತೊಡಗಿದರು. ಅಷ್ಟರಲ್ಲಿ ಅದೆಲ್ಲಿದ್ದರೋ ನಮ್ಮೊಂದಿಗೆ ಬಂದಿದ್ದ ಮೈಸೂರಿನ ಭಟ್ಟರು ನಮ್ಮ ಬಳಿ ಬಂದವರೇ ನಮ್ಮೊಂದಿಗೆ ಮಾತನಾಡುತ್ತಿದ್ದ ’ಆರ್’ ನ ಮಾತನ್ನು ತುಂಡರಿಸಿ ’ಜರ್ಮನಿಯಲ್ಲಿ ಮಾರ್ಕೆಟಿಂಗ್ ಮಾಡ್ಸಿ ಮಾರಾಯ್ರ ಎಲ್ಲಾ ಚೀಪ್’ ಅಂದರು. ಅವರು ನಾವೆಲ್ಲಾ ಜರ್ಮನಿಯಲ್ಲಿ ಏನೇನು ಸಿಗುತ್ತದೆಂದು ’ಆರ್’ ನನ್ನು ಕೇಳುತ್ತಿದ್ದೇವೆಂದು ಭಾವಿಸಿಕೊಂಡು ಹಾಗೆ ಹೇಳಿದ್ದರು. ಭಟ್ಟರ ಬಾಯಿಂದ ’ಚೀಪ್’ ಎಂಬ ಶಬ್ದ ಕಿವಿಗೆ ಬಿದ್ದ ಕೂಡಲೇ ’ಆರ್’ ಮಾತುಗಳನ್ನು ಕೇಳುತ್ತಾ ನಿಂತಿದ್ದವರು ಅವನ ಮಾತಿಗಿಂತಲೂ ಜರ್ಮನಿಯಲ್ಲಿ ಏನು ಚೀಪಾಗಿ ಸಿಗುತ್ತದೆ ಎಂದು ತಿಳಿದುಕೊಳ್ಳುವುದೇ ಬೆಟರ್ ಎಂದು ’ಚೀಪ್’ ಎಂದಿದ್ದ ಭಟ್ಟರಿಗೆ ದುಂಬಾಲು ಬಿದ್ದು ಏನೇನು ಕಡಿಮೆ ಬೆಲೆಗೆ ಸಿಗುತ್ತವೆಂದು ಕೇಳತೊಡಗಿದರು. ಜರ್ಮನಿಯ ಇಂದಿನ ಸ್ಥಿತಿಗತಿಯ ಬಗ್ಗೆ ಸ್ವಾರಸ್ಯಕರವಾಗಿ ವಿವರಿಸುತ್ತಿದ್ದ ’ಆರ್’ ತನ್ನ ಮಾತು ಕೇಳುತ್ತಿದ್ದವರು ಇದ್ದಕ್ಕಿದ್ದಂತೆ ಭಟ್ಟರ ಕಡೆಗೆ ಹೋಗಿದ್ದಕ್ಕೆ ಸ್ವಲ್ಪ ನಿರಾಸನಾದಂತೆ ’ಓಕೆ, ಇಟ್ಸ್ ಟೈಮ್ ಟು ಗೋ’ ಎಂದವನೇ ಬಸ್ ಸ್ಟಾರ್ಟ್ ಮಾಡಲು ತೆರಳಿದ. ಜರ್ಮನಿಯ ಜನಸಾಮಾನ್ಯನೊಬ್ಬನಿಂದ ರಾಜಕೀಯ, ಆರ್ಥಿಕ ಪರಿಸ್ತಿತಿ ಇತರೆ ಆಸಕ್ತಿಕರ ಸಂಗತಿ ತಿಳಿದುಕೊಳ್ಳುತಿದ್ದ ನನಗೂ ಕೊಕ್ ಸಿಕ್ಕು ಬೇಸರಿಸಿಕೊಂಡು ಬಸ್ ಹತ್ತಿದೆ. ಪಕ್ಕ ಬಂದು ಕೂತ ರಾಜೇಗೌಡ್ರಿಗೆ ’ಅದೇನು ಗೌಡ್ರೇ, ಎಲ್ಲಾ ಹೋಗಿ ಭಟ್ಟರನ್ನು ಅಮರಿಕೊಂಡರಲ್ಲಾ, ಏನು ಕಥೆ’ ಅಂದೆ. ಅದಕ್ಕವರು ’ರೀ ಜರ್ಮನಿಯಲ್ಲಿ ಏನೇನ್ ಚೀಪಾಗಿ ಸಿಗುತ್ತದೆಂದು ಕೇಳಿದ್ದಕ್ಕೆ ಈ ಭಟ್ಟರು ’ಬಿಯರ್ ಬಾಟಲ್’ ಅಂತಾ ಹೇಳದೇನ್ರೀ...ಯಾವ್ಯಾವ ವಸ್ತುಗಳು ಚೀಪ್ ಆಗಿ ಸಿಗಬಹುದೆಂದು ಕುತೂಹಲದಿಂದ ಕೇಳುತ್ತಿದ್ದ ಹೆಂಗಸರು ಭಟ್ಟರು ಬಿಯರ್ ಬಾಟಲ್ ಅಂದಾಗ ಮುಖ ಸಿಂಡರಿಸಿಕೊಂಡು ಹೋಗಿದ್ದು ಚನ್ನಾಗಿತ್ತು ಕಣ್ರ‍ೀ’ ಎಂದರು.
 
ಬ್ರಸೆಲ್ಸ್ ನಿಂದ ಜರ್ಮನಿ ದೇಶದ ಗಡಿಗೆ ಬಸ್ನಲ್ಲಿ ಕೇವಲ ಎರಡು ಗಂಟೆಗಳ ಪ್ರಯಾಣವಷ್ಟೆ. ಮಾರ್ಗ ಮಧ್ಯೆ ನೆದರ್ ಲಾಂಡ್ ದೇಶದ ಒಳಹೊಕ್ಕೆವು. ಬೆಲ್ಜಿಯಂ ನಿಂದ ಜರ್ಮನಿಗೆ ಹೋಗಬೇಕೆಂದರೆ ನೆದರ್ಲಾಂಡನ್ನು ದಾಟಿಕೊಂಡೇ ಹೋಗಬೇಕೆಂದು ಬೆಳಿಗ್ಗೆ ’ಆರ್’ ಹೇಳಿದ್ದ. ಆತನೂ ನೆದರ್ ಲಾಂಡಿನವನೇ ಆಗಿದ್ದರಿಂದ ಅದರ ಗಡಿ ತಲುಪಿದ ಕೂಡಲೇ ಈಗ ನನ್ನ ದೇಶದಲ್ಲಿದ್ದೇವೆಂದು ಹೆಮ್ಮೆಯಿಂದ ಹೇಳಿದ್ದ. ಈ ದೇಶಪ್ರೇಮವೆನ್ನುವುದೇ ಹಾಗೆ. ಇಡೀ ಯೂರೋಪ್ ಒಕ್ಕೂಟ ಒಂದೇ ಛತ್ರಿಯ ಕೆಳಗೆ ಗುರುತಿಸಿಕೊಂಡರೂ ಅಲ್ಲಿನ ಪ್ರತೀ ದೇಶ, ಭಾಷೆಗಳ ಜನರಿಗೂ ತಮ್ಮ ಗುರುತಿನ ಬಗ್ಗೆ ಬಹಳ ಹೆಮ್ಮೆಯಿದೆ. ಇಂಗ್ಲಿಷ್ ಅನ್ನು ನಾವು ಭಾರತೀಯರು ಅತಿಯಾದ ಮೌಡ್ಯತೆಯಿಂದ ಒಪ್ಪಿಕೊಂಡ ಹಾಗೆ ಅದು ಉದಯಿಸಿದ ತವರು ಖಂಡದ ಸಾಕಷ್ಟು ದೇಶಗಳಲ್ಲೇ ಇಂಗ್ಲಿಷ್ ಭಾಷೆಯ ಸಾರ್ವಭೌಮತ್ವದ ಒಪ್ಪಿಗೆ ಇಲ್ಲ. ಯೂರೋಪಿಗೆ ಹೋಗಿರುವ ಆಫ಼್ರಿಕನ್ನರು, ಏಷ್ಯಾದವರನ್ನು ಬಿಟ್ಟರೆ ಮೂಲ ಯೂರೋಪಿನ ಜನತೆಯನ್ನು ಅವರು ಯಾವ ದೇಶದವರೆಂದು ಅವರ ದೇಹದ ಬಣ್ಣದ ಆಧಾರದ ಮೇಲೆ ಗುರುತು ಹಿಡಿಯುವುದಂತೂ ಸುಲಭವಲ್ಲವೆಂಬುದು ನನ್ನ ಅನಿಸಿಕೆ. ಅಲ್ಲಿ ಆಯಾ ದೇಶದವರು ತಮ್ಮ ಮಾತೃಭಾಷೆಗಳಿಗೇ ಪ್ರಾಧಾನ್ಯತೆ ನೀಡುವುದಂತೂ ದಿಟ. ಅದು ನನಗೆ ಹಲವಾರು ಬಾರಿ ಅನುಭವದ ಮೂಲಕ ಖಾತ್ರಿಯಾಗಿತ್ತು. ಒಂದರ್ಥದಲ್ಲಿ ಇಂಗ್ಲಿಷ್ ತಮ್ಮ ಭಾಷೆಯನ್ನು ನುಂಗಿ ಹಾಕದಂತೆ ಯೂರೋಪಿನ ಜನತೆ ಜಾಗ್ರತರಾಗಿರಬಹುದೆನಿಸಿತು. ಇಂಗ್ಲಿಷ್ ಇಂಗ್ಲೆಂಡೇತರ ದೇಶಗಳಲ್ಲಿ ಟೂರಿಸ್ಟ್ ಭಾಷೆ ಮಾತ್ರ ಎಂದು ನನಗೆ ಅನುಭವವಾಗಿತ್ತು.
 
ನೆದರ್ಲಾಂಡ್ ಗಡಿ ದಾಟಿ ಜರ್ಮನಿಯ ಹೊಕ್ಕು ಸ್ವಲ್ಪ ದೂರ ಸಾಗಿದ ನಂತರ ಜ್ಯೂಜ಼ರ್ ಎಲ್ಲರಿಗೂ ಅರ್ಧ ಗಂಟೆ ಬಿಡುವು ನೀಡುತ್ತಿರುವುದಾಗಿ ಹೇಳಿ ಬಸ್ ನಿಲ್ಲಿಸಿದ. ಬಸ್ ನಿಲ್ಲಿಸುವ ಹಂತದಲ್ಲಿರುವಾಗಲೇ ಕೆಲವು ಉತ್ತರ ಭಾರತೀಯರು ಹಾಗೂ ಮುಂಬೈನಿಂದ ಬಂದಿದ್ದವರು ಲೋಕಲ್ ಟ್ರೈನ್ ನಿಂದ ಇಳಿಯುವವರಂತೆ ಅವಸರದಿಂದ ಬಾಗಿಲಿನ ಬಳಿ ಓಡಿದರು. ಅವರು ಹಾಗೆ ಧಿಡೀರನೇ ಎದ್ದು ಇನ್ನೂ ಬಸ್ ನಿಲ್ಲಿಸದಿರುವಾಗಲೇ ಬಾಗಿಲಿನ ಬಳಿ ಬಂದುದಕ್ಕೆ ಗಾಬರಿಯಾದಂತಾದ ಚಾಲಕ ’ಆರ್’ ಮೈಕ್ ಅನ್ನು ಜ್ಯೂಜ಼ರ್ ಕೈನಿಂದ ಕಿತ್ತುಕೊಂಡು ’ಪ್ಲೀಸ್ ಸಿಟ್ , ಪ್ಲೀಸ್ ಸಿಟ್’ ಎಂದು ಕೂಗಿದ. ಅವನು ಕೂಗಿದ ಧಾಟಿಗೆ ಗಾಬರಿಯಾದ ನಿಂತವರು ಸೀಟುಗಳಲ್ಲಿ ಕೂರುವ ಬದಲಿಗೆ ತಾವು ನಿಂತಿದ್ದ ಜಾಗದಲ್ಲೇ ಕುಕ್ಕರು ಕೂತರು. ಹೇಗೋ ಅವರು ಕೂತಿದ್ದನ್ನು ಕಂಡು ’ಆರ್’ ಬಸ್ಸನ್ನು ತಿರುಗಿಸಿ ಬ್ರೇಕ್ ಹೊಡೆದ. ಹಾಗೆ ಧಿಡೀರೆಂದು ಬ್ರೇಕ್ ಹೊಡೆದ ಕೂಡಲೇ ಕುಕ್ಕರುಗಾಲಲ್ಲಿ ಕೂತಿದ್ದ ಕೆಲವರು ಮುಗ್ಗರಿಸಿದ್ದರು. ಗಂಟೆಗಟ್ಟಲೆ ಆರಾಮಾಗಿ ಕುಳಿತು ಬಂದ ಈ ಜನ ಬಸ್ಸು ನಿಲ್ಲಿಸುವಾಗ ಒಂದೆರಡು ನಿಮಿಷ ಕಾಯದೇ ಕೆಳಗಿಳಿಯಲು ಅವಸರಪಟ್ಟದ್ದನ್ನು ಕಂಡು ನನಗೆ ಆಶ್ಚರ್ಯವಾಗಿತ್ತು. ಒಂದು ವೇಳೆ ಅವರು ಮೂತ್ರ ವಿಸರ್ಜನೆಗೆ ಹೋಗಬೇಕಿದ್ದಲ್ಲಿ ಬಸ್ಸಿನಲ್ಲಿಯೇ ಪುಟ್ಟದೊಂದು ಟಾಯ್ಲೆಟ್ ಇತ್ತು. ಅನಿವಾರ್ಯ ಸಂದರ್ಭಗಳಲ್ಲಿ ಅದನ್ನು ಉಪಯೋಗಿಸಿಕೊಳ್ಳಬೇಕೆಂದು ಜ್ಯೂಜ಼ರ್ ಹೇಳಿದ್ದ. ಅದೇಕೋ ಅಭ್ಯಾಸವೆಂಬಂತೆ ಆ ಜನ ಬಸ್ ನಿಲ್ಲಿಸುವ ಸೂಚನೆ ಗೊತ್ತಾಗುತ್ತಿದಂತೆಯೇ ಗುಂಪು ಗುಂಪಾಗಿ ಎದ್ದು ನಿಲ್ಲುತ್ತಿದ್ದರು.
 
ಹಾಗೆ ಕೆಲವರು ಅವಸರದಿಂದ ಬಸ್ ನಿಂದ ಇಳಿದವರೇ ದಡದಡನೆ ಹತ್ತಿರದಲ್ಲೆಲ್ಲೋ ಇದ್ದ ಟಾಯ್ಲೆಟ್ ಗಳತ್ತ ನುಗ್ಗಿದ್ದರು. ಅವರನ್ನು ಹಿಂಬಾಲಿಸಿಹೋದ ಭಟ್ಟರು ಹೋದ ವೇಗದಲ್ಲೇ ವಾಪಸ್ ಬಂದಿದ್ದರು. ಹಾಗೆ ಬಂದವರು ಸುತ್ತ ಮುತ್ತ ಜಾಗ ಹುಡುಕುವಂತೆ ನೋಡತೊಡಗಿದ್ದು ಕಂಡು ನಾನು ಕುತೂಹಲದಿಂದ ’ಏನನ್ನು ಹುಡುಕ್ತಿದ್ದೀರಿ ಭಟ್ರೇ,’ ಎಂದಾಗ ’ಅಯ್ಯೋ, ಅಲ್ರೀ, ಇಲ್ಲಿ ಟಾಯ್ಲೆಟ್ ಬಳಸೋದಕ್ಕೆ ೫೦ ಸೆಂಟ್ಸ್ ಕೊಡಬೇಕಂತೆ ೫೦ ಸೆಂಟ್ಸ್ ಅಂದ್ರೆ ೩೩ ರುಪಾಯಿ ಕಣ್ರೀ’ ಅಂದಾಗಲೇ ಅವರು ಸುತ್ತಮುತ್ತ ಜಾಗ ಹುಡುಕುತ್ತಿರುವ ಕಾರಣ ನನಗೆ ಗೊತ್ತಾದದ್ದು. ’ಅದು ಸರಿ ಅದೇನು ಹಂಗೆ ಹುಡುಕುತಿದ್ದೀರಲ್ಲಾ’ ಎಂದು ಕಿಚಾಯಿಸಿದೆ. ’ಇಲ್ಲೇ ಎಲ್ಲಾದ್ರೂ ಹೊರಗಡೆ ಮೂತ್ರ ವಿಸರ್ಜನೆಗೆ ಜಾಗ ಸಿಗುತ್ತಾ ಅಂತಾ ನೋಡ್ತಿದ್ದೀನಿ’ ಅಂದವರೇ ಹುಡುಕಾಟ ಮುಮ್ದುವರಿಸಿದರು. ’ಅಲ್ರೀ ಭಟ್ರೇ, ನೀವು ಇಲ್ಲಿ ಎಲ್ಲಾದ್ರೂ ಹೋದ್ರೆ ಯಾರಾದರೂ ನಿಮ್ಮನ್ನು ಹಿಡಿದು ಹತ್ತೋ ಇಪ್ಪತ್ತೋ ಯೂರೋ ದಂಡ ಹಾಕಿದ್ರೆ ಏನ್ ಮಾಡ್ತೀರಿ, ಈ ದೇಶಗಳಲ್ಲಿ ಯಾವ ಥರದ ಕಾನೂನುಗಳಿವೆಯೋ ಯಾರಿಗೆ ಗೊತ್ತು’ ಅಂದೆ. ಹತ್ತಿಪ್ಪತ್ತು ಯೂರೋ ದಂಡ ಅಂದ ಕೂಡಲೇ ಅದನ್ನು ನಮ್ಮ ರುಪಾಯಿಗೆ ಪರಿವರ್ತಿಸಿಕೊಂಡ ಭಟ್ಟರು ’ಅಯ್ಯೋ, ಹೌದು ಮಾರಾಯ್ರ, ನೀವ್ ಹೇಳಿದ್ದು ಒಳ್ಳೇದಾಯ್ತು, ಸಿಕ್ಕಿ ಹಾಕೊಂಡ್ರೆ ಕಷ್ಟ’ ಅಂದರು. ಇಬ್ಬರೂ ೫೦ ಸೆಂಟ್ಸ್ ಕೊಟ್ಟು ಬಾಧೆ ತೀರಿಸಿಕೊಂಡು ಬಂದೆವು. ಅಷ್ಟರಲ್ಲಿ ಗುರುಬಸವಯ್ಯನವರು, ರಾಜೇಗೌಡ್ರು ಎಲ್ಲಿಂದಲೋ ನಡೆದುಕೊಂಡು ಬರುವುದು ಕಂಡು ’ಎಲ್ಲಿಗೆ ಹೋಗಿದ್ರೀ’ ಎಂದು ಕೇಳಿದ್ದಕ್ಕೆ ಅವರು ’ಯುರಿನಲ್ಸ್ ಗಾಗಿ ಹೋಗಿದ್ವಿ ಸಾರ್. ಅಲ್ಲಿ ಜಾಗ ಸಕ್ಕತ್ತಾಗಿದೆ’ ಅಂದರು. ನನ್ನ ಪಾಡಿಗೆ ಹೇಗೋ ಜಾಗ ಹುಡುಕಿಕೊಂಡು ಹೋಗುತ್ತಿದ್ದವನನ್ನು ತಡೆದು ಸುಮ್ಮನೇ ೩೩ ರುಪಾಯಿಗಳನ್ನು ದಂಡ ಮಾಡಿಸಿದನಲ್ಲಾ ಎಂಬ ದೃಷ್ಟಿಯಿಂದ ಭಟ್ಟರು ನನ್ನತ್ತ ಗುರಾಯಿಸಿದರು.
 
’ಅಲ್ರೀ ಅಲ್ಲಿ ಯಾರಾದ್ರೂ ಹಿಡಿದು ದಂಡ ಹಾಕಿದ್ರೆ ಏನ್ ಮಾಡ್ತಿದ್ರೀ’ ಅಂತ ಕೇಳಿದೆ. ’ಇಲ್ಲಿ ನಿಲ್ಲಿಸಿರುವ ಬಸ್ ಹಾಗೂ ಟ್ರಕ್ ಚಾಲಕರೆಲ್ಲಾ ಅಲ್ಲೇ ಹೋಗಿದ್ರು, ಅದಕ್ಕೇ ನಾವು ಹೋದದ್ದು’ ಅಂತ ತಮ್ಮ ಜಾಣತನಕ್ಕೆ ಖುಷಿಪಟ್ಟುಕೊಂಡರು. ತಕ್ಷಣ ಭಟ್ರು ’ಅಯ್ಯೋ, ನಾನೂ ಹೊರಗಡೆ ಹೋಗಲಿಕ್ಕೆ ಜಾಗ ಹುಡುಕ್ತಿದ್ದೆ ಮಾರಾಯ್ರ, ಇವರು ಬಂದು ದಂಡ ಹಾಕ್ತಾರೆ ಅಂತ ಹೆದರಿಸಿ ಕರೆದುಕೊಂಡು ಹೋದ್ರು. ಸುಮ್ಮನೆ ಹಣ ದಂಡವಾಯ್ತು’ ಅಂದರು. ಬಿಡ್ರೀ ಭಟ್ರೇ, ಇವರಿಬ್ಬರನ್ನು ಬಿಟ್ರೆ ನಮ್ಮ ಬಸ್ಸಿನಲ್ಲಿದ್ದವರೆಲ್ಲಾ ೫೦ ಸೆಂಟ್ಸ್ ಕೊಟ್ಟೇ ಹೋಗಿದ್ದಲ್ವಾ’ ಎಂದೆ. ನಮ್ಮ ಜತೆ ಇನ್ನೂ ಅನೇಕರು ಹಣ ಕೊಟ್ಟು ಟಾಯ್ಲೆಟ್ ಬಳಸಿದ್ದನ್ನು ಕೇಳಿ ಭಟ್ಟರು ಕೊಂಚ ಸಮಾಧಾನಗೊಂಡರು.  
 
(ಮುಂದುವರಿಯುವುದು)  
 


ಕೈಲಾಸ ಎಂದಾಕ್ಷಣ ನೆನಪಾಗುವುದೇ ಆತ

ಮೂಲ: ಹರೀಶ್ ಕಪಾಡಿಯಾ, ಜರ್ನಿ ಆಫ್ ಹಿಮಾಲಯನ್ ವ್ಯಾಲೀಸ್

ಭಾವಾನುವಾದ: ಶ್ಯಾಮ್ ಸುಂದರ್

ಚಿತ್ರಗಳು: ಅಂತರ್ಜಾಲ

 
ಹಿಂದೂಗಳಲ್ಲಿ ಕೈಲಾಸ ಎಂದ ತಕ್ಷಣ ಮನದಲ್ಲಿ ಮೂಡಿ ಬರುವುದು ಭಕ್ತಿ ಮತ್ತು ಪವಿತ್ರ ಭಾವನೆ. ಕೈಲಾಸದಲ್ಲಿ ಪರಮೇಶ್ವರ ಪಾರ್ವತಿಯೊಂದಿಗೆ ವಾಸಿಸುತಿದ್ದ ಎಂದು ಪುರಾಣಗಳು ಹೇಳುತ್ತವೆ. ಈಶ್ವರನ ಕೈಲಾಸ ಅದೆಷ್ಟು ದೊಡ್ಡದಿದೆಯೋ ಗೊತ್ತಿಲ್ಲ, ಆದರೆ ನಿಮಗೆ ಗೊತ್ತ, ಭಾರತಕ್ಕೆ ಸೇರುವ ಹಿಮಾಲಯ ಶ್ರೇಣಿಯಲ್ಲಿ ಹಲವಾರು ಕೈಲಾಸಗಳಿವೆ. ಉಳಿದ ಇನ್ನೊಂದು ಕೈಲಾಸ-ಮಾನಸಸರೋವರ ಟಿಬೆಟ್ ಗೆ ಹಂಚಿ ಹೋಗಿದೆ. ಹಿಮಾಚಲ ಪ್ರದೇಶದ ಕಿನ್ನೋರ್ ಜಿಲ್ಲೆಯಲ್ಲಿ "ಕಿನ್ನೋರ್ ಕೈಲಾಶ್’, ಚಂಬಾ ಜಿಲ್ಲೆಯಲ್ಲಿ ’ಮಣಿಮಹೇಶ್ ಕೈಲಾಶ್/ಚಂಬಾ ಕೈಲಾಶ್’ ಮತ್ತು ಉತ್ತರ ಖಂಡದ ’ಆದಿಕೈಲಾಶ್’ ಮತ್ತು ಯಮುನೋತ್ರಿಯ ಹತ್ತಿರವಿರುವ ’ಶ್ರೀ ಕೈಲಾಶ್’. ಈ ಪ್ರತಿಯೊಂದು ಪರ್ವತಕ್ಕೂ ಅದರದೇ ಆದ ಪೌರಾಣಿಕ ಕಥೆಗಳಿವೆ. ಎಲ್ಲ ಕೈಲಾಶದಲ್ಲೂ ಈಶ್ವರ ವಿವಿಧ ರೂಪದಲ್ಲಿ ವಾಸಿಸುತ್ತಾನೆ.

ಈ ಬಾರಿ ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿರುವ "ಮಣಿಮಹೇಶ್ ಕೈಲಾಶ್" ನೋಡುವ ಸುಯೋಗ ಒದಗಿ ಬಂತು. "ಮಣಿಮಹೇಶ್ ಕೈಲಾಶ್" ದಲ್ಲಿರುವ ಮಣಿಮಹೇಶ್ ಸರೋವರ ಒಂದು ಪ್ರಸಿದ್ಧ ಯಾತ್ರಾ ಸ್ಥಳ. ಅಲ್ಲಿ ಪ್ರತಿ ವರುಷ ಆಗಸ್ಟ್ ತಿಂಗಳಲ್ಲಿ ಜಾತ್ರೆ ನಡೆಯುತ್ತದೆ. ಸರೋವರಕ್ಕೆ ಸಾವಿರಾರು ಭಕ್ತರು ಬಂದು ಪುಣ್ಯ ಸ್ನಾನ ಮಾಡಿ ಹೋಗುತ್ತಾರೆ. ಯಾರಾದರೂ ೧೦ ದಿನಗಳ ರಜೆಯನ್ನು ಪಡೆಯುವುದಾದರೆ ಅವರು ಈ ಮಣಿಮಹೇಶನ ದರ್ಶನ ಪಡೆಯಬಹುದು. ಈ ಬಾರಿ ಆ ಸುವರ್ಣ ಅವಕಾಶ ನಮ್ಮದಾಯಿತು.
 
ನಾನು, ಧೀರಜ್, ಅಕ್ಷಯ್ ಮತ್ತು ಸುನಿಲ್ ನಿಗದಿತ ವೇಳೆಯಂತೆ ವಿಮಾನದಲ್ಲಿ ಶಿಮ್ಲಾ ತಲುಪಿ ಅಲ್ಲಿಂದ "ಚಂಬಾ" ಜಿಲ್ಲೆಯಯಲ್ಲಿ ಬಂದಿಳಿದೆವು. ಚಂಬಾದಲ್ಲಿ ಒಂದು ದಿನ ಕಳೆದ ಮೇಲೆ ನಮ್ಮ ಪ್ಲಾನ್ ನಂತೆ "ಬ್ರಹಮೋರ್" ಎಂಬ ಸ್ಥಳವನ್ನು ತಲುಪಿದಾಗ ಬೆಳಿಗ್ಗೆ ೯ ಗಂಟೆ. ನಾವು ಅಂದುಕೊಂಡಂತೆ "ಮಣಿಮಹೇಶ ಸರೋವರ" ಮತ್ತು "ಮಣಿಮಹೇಶ್ ಕೈಲಾಶ್" ಅನ್ನು ನೋಡಲು ಚಾರಣ ಮಾಡಿ ೬೦ ಕಿ.ಮೀ ಗಳನ್ನು ಪರಿಕ್ರಮಿಸಬೇಕಿತ್ತು. ಅಲ್ಲಿದ್ದ ಅಂಗಡಿಯ ಪಾನ್ವಾಲ ನಮ್ಮನ್ನು ನೋಡಿ "ಸಾಬ್ ಯಾರೂ ಮಣಿಮಹೇಶ್ ಕೈಲಾಶ್ ಪರ್ವತವನ್ನು ಹತ್ತಲಿಕ್ಕೆ ಸಾದ್ಯವಿಲ್ಲ. ಹಾಗೇನಾದರೂ ಹತ್ತಲು ಪ್ರಯತ್ನಿಸಿದರೆ ಅವರು ಶಿವನ ಅವಕೃಪೆಗೆ ಒಳಗಾಗುತ್ತಾರೆ. ನೀವು ಸರೋವರವನ್ನು ನೋಡಲಷ್ಟೇ ಸಾಧ್ಯ" ಎಂದು ಹೇಳಿದ. ಆತ ಅಲ್ಲಿ ಚಾಲ್ತಿಯಲ್ಲಿರುವ ಪೌರಾಣಿಕ ಕಥೆಯನ್ನೂ ಹೇಳಿದ. ನಾವು ಸ್ಥಳೀಯ ಗೈಡ್ ರಾಜೇಂದ್ರ ಸಿಂಗ್ ಎಂಬಾತನನ್ನು ಕರೆದುಕೊಂಡು ಸರೋವರದ ದರ್ಶನಕ್ಕೆ. ಅಷ್ಟು ದೂರದಿಂದಲೆ ನಮಗೆ "ಮಣಿಮಹೇಶ್ ಸರೋವರದ" ದರ್ಶನವಾಯಿತು. ದಾರಿಯಲ್ಲಿ ಸಿಕ್ಕ "ಬ್ರಹಮೋರ್ ಕೈಲಾಶ್" ದೇವಸ್ತಾನ ನಿರ್ಜನವಾಗಿತ್ತು. ಇಲ್ಲಿ ಆಗಸ್ಟ್ ತಿಂಗಳಿನ ಜಾತ್ರೆಯ ಸಮಯದಲ್ಲಿ ಮಾತ್ರ ಸಾವಿರಾರು ಯಾತ್ರಿಕರಿರುತ್ತಾರೆ. ಆಗ ಎಲ್ಲ ಕಡೆಯಿಂದಲೂ ಬಸ್ ಗಳ ಸೌಕರ್ಯವನ್ನು ಹಿಮಾಚಲ ಸರ್ಕಾರ ಕಲ್ಪಿಸಿಕೊಡುತ್ತದಂತೆ.
 
ಹಾಗೇ ಚಾರಣ ಮಾಡುತ್ತಾ "ಕುಗಟಿ"ಯಿಂದ ದಕ್ಷಿಣಕ್ಕೆ ತಿರುಗಿ "ಬುಜ ನಾಲಾ" ನಡುವೆ ಇರುವ "ನಿಕೋರ"ದಲ್ಲಿ ಒಂದು ದಿನ ಕ್ಯಾಂಪ್ ಮಾಡಿದೆವು. ಧೀರಜ್ ಮತ್ತು ಅಕ್ಷಯ್ ನಮ್ಮ ಮುಂದಿನ ದಾರಿಯನ್ನು ಹುಡುಕಲು ಕ್ಯಾಂಪ್ನಿಂದ ಹೊರಟರು. ನಮಗೆ ಮೊದಲೇ ತಿಳಿದಿದ್ದಂತೆ ಮಣಿಮಹೇಶ್ ಕೈಲಾಶವನ್ನು ಗುರುತಿಸಲು ಅಲ್ಲೇ ಹತ್ತಿರದಲ್ಲಿರುವ ಇನ್ನೊಂದು ಪರ್ವತವನ್ನು ಹತ್ತಬೇಕಾಗಿ ಬಂತು. ಮಣಿಮಹೇಶ್ ಪರ್ವತವನ್ನು ಗುರುತಿಸಲು ನಮ್ಮ ಹತ್ತಿರ ೧೯೬೮ರಲ್ಲಿ ಜಪಾನಿನ ಮಹಿಳೆಯರು ತೆಗೆದ ಚಿತ್ರಗಳು ಮತ್ತು ಗೂಗಲ್ ನಲ್ಲಿ ಸಿಕ್ಕ ಚಿತ್ರಗಳಿದ್ದವು. ಅವುಗಳನ್ನು ಜೋಡಿಸಿ ನೋಡಿದಾಗ ಸುತ್ತಲ ಪರ್ವತಗಳಲ್ಲಿ "ಮಣಿಮಹೇಶ್ ಕೈಲಾಶ ಪರ್ವತ’ವನ್ನು ಗುರುತಿಸಲು ಸಾಧ್ಯವಾಯಿತು. ಆ ಅಧ್ಬುತ ಕೈಲಾಶ ಪರ್ವತದವನ್ನು ನೋಡಿದಾಗ ನಮ್ಮ ಉತ್ತರ ಕನ್ನಡ ಜಿಲ್ಲೆಯಲ್ಲಿರುವ "ಯಾಣ" ದ ನೆನಪಾಯಿತು. ಈ ಮಣಿಮಹೇಶ್ ಕೈಲಾಶ ಪರ್ವತವೂ ಯಾಣದ ಬಂಡೆಗಲ್ಲಿನ ತರಹ ಮುಗಿಲು ಮುಟ್ಟಿನಿಂತಿದೆ, ಆದರೆ ಇನ್ನೂ ಎತ್ತರ. ಅದರ ಮೈ ಎಷ್ಟು ಮೋನಚಾಗಿದೆ ಎಂದರೆ ಯಾವ ಕಡೆಯಿಂದ ನೋಡಿದರೂ ಅದನ್ನು ಹತ್ತುವ ದಾರಿಯನ್ನು ನಮಗೆ ಕಂಡು ಹಿಡಿಯಲಾಗಿಲ್ಲ. ಆಗ "ಹದಸರ್" ನಲ್ಲಿ ಅಂಗಡಿಯ ಪಾನ್ವಾಲ "ಈ ಕೈಲಾಸವನ್ನು ಯಾರೂ ಹತ್ತಲು ಸಾಧ್ಯವಿಲ್ಲ ಸಾಬ್" ಎಂದದ್ದು ನೆನಪಾಯಿತು. ಅದಕ್ಕೆ ಸರಿಯಾಗಿ ನಮ್ಮ ಜೊತೆಗಿದ್ದ ಗೈಡ್ ರಾಜೇಂದ್ರ ಸಿಂಗ್ ಇನ್ನೂ ಮುಂದು ಹೋಗುವುದು ಸರಿಯಲ್ಲ ಎಂದು ಎಚ್ಚರಿಸಿದ. ಆಗ ಜೊತೆಗಿದ್ದ ಸುನೀಲ್ "ಪರ್ವತ ಎಷ್ಟು ಎತ್ತರವಾಗಿದೆ ಎಂದರೆ ನೋಡಲು ಹೋದರೆ ಕತ್ತು ನೋಯುತ್ತದೆ!!" ಎಂದು ಗೊಣಗಾಡಿದ.
 
ಕುಗಟಿ ಎಂಬಲ್ಲಿಂದ "ಚಂಬಾ ಪಾಸ್" ನಲ್ಲಿ ಒಂದು ದಿನ ಕ್ಯಾಂಪ್ ಮಾಡಿ ದಿನ ಕಳೆದೆವು. ಮೇ ತಿಂಗಳಾದ್ದರಿಂದ ಉಳಿದುಕೊಳ್ಳುವಾಗ ಪುಣ್ಯಕ್ಕೆ ಹವಾಮಾನದ ವೈಪರೀತ್ಯ ಅಡ್ಡ ಬರಲಿಲ್ಲ (ನಮ್ಮ ಪಾಲಿಗೆ ಪರಮೇಶ್ವರನಿದ್ದನಲ್ಲ!). ಮರುದಿನ ದಿನ ಬೆಳಿಗ್ಗೆ ನಾವು ಕರೆತಂದಿದ್ದ ಗೈಡ್ "ಸಾಬ್ ಇನ್ನು ಇಲ್ಲಿ ಉಳಿಯಲು ಸಾಧ್ಯವಿಲ್ಲ ಬನ್ನಿ" ಎಂದು ಹೊರಡಿಸಿದ. ಅಲ್ಲಿಂದ ದೂರದಿಂದಲೇ ಮತ್ತೊಮ್ಮೆ ಪರ್ವತದ ದರ್ಶನ ಪಡೆದು ೧೫ ಕಿ.ಮೀ ಕ್ರಮಿಸಿದ ಮೇಲೆ "ಮಣಿಮಹೇಶ್" ಸರೋವರದ ಹತ್ತಿರಕ್ಕೆ ಬಂದೆವು. ಅಲ್ಲಿ ದೇವಸ್ಥಾನಲ್ಲಿದ್ದ ಪರಮೇಶ್ವರನಿಗೆ ನಮಸ್ಕರಿಸಿ ಬೀಳ್ಕೊಂಡೆವು. ಸಂಜೆಯಾಗುವಷ್ಟರಲ್ಲಿ ಹದಸರ್ ತಲುಪಬೇಕಾಗಿತ್ತು. ಹದಸರ್ ನಲ್ಲಿ ಉಳಿದು ನಾಲ್ಕು ದಿನಗಳ ಕ್ಯಾಂಪಿಂಗ್ ಮುಗಿಸಿ ಮರುದಿನ ಬೆಳಿಗ್ಗೆ ಬೆಂಗಳೂರಿನ ಕಡೆಗೆ ಪ್ರಯಾಣ ಬೆಳೆಸಿದೆವು.
ಬೆಂಗಳೂರಿಗೆ ಬಂದು ಮಿತ್ರರ ಬಳಿ ಅನುಭವವನ್ನು ಹೇಳಿಕೊಂಡಾಗ ತಿಳಿದದ್ದು ನಾಲ್ಕು ಕೈಲಾಶ ಪರ್ವತಗಳಲ್ಲಿ "ಮಣಿ ಮಹೇಶ್" ಪರ್ವತವೇ ಹತ್ತಲು ಬಲು ಕಷ್ಟವಂತೆ!. ಇವತ್ತಿಗೂ ಅದು ಪರ್ವತಾರೋಹಿಗಳಿಗೆ ಒಂದು ಸವಾಲು. ಅದನ್ನು ಹತ್ತಲು ಹಿಮಾಚಲ ಪ್ರದೇಶ ಸರ್ಕಾರದ ಅನುಮತಿ ಕೂಡಾ ಬೇಕು. ’ಮಣಿಮಹೇಶ್’ ಅಲ್ಲಿನ ಸ್ಥಳೀಯರಿಗೆ ಪವಿತ್ರ ಸ್ಥಳವಾಗಿರುವುದರಿಂದ ಅನುಮತಿ ಸಿಗುವುದು ಕಷ್ಟದ ಕೆಲಸ.
 
 
 
 


 
 
 
 
 
Copyright © 2011 Neemgrove Media
All Rights Reserved