ಸ್ವಾತಂತ್ಯ ಭಾರತದಲ್ಲಿ ನಾವು ಹಲವಾರು ಭ್ರಷ್ಟಾಚಾರ ಪ್ರಕರಣಗಳನ್ನ ನೋಡಿದ್ದೇವೆ. ರಾಜಕಾರಣಿಗಳು, ಅಧಿಕಾರಿಗಳು ತಿನ್ನುವ ಹಣ ನೋಡಿದರೆ ಹಣಕ್ಕೂ ಕೊರತೆಯಿಲ್ಲ ಎನಿಸುತ್ತದೆ. ಆದರೆ ಕೊರತೆಯಾಗುವುದು ಜನಸಾಮಾನ್ಯರಿಗೆ ಮಾತ್ರ. ಭ್ರಷ್ಟಾಚಾರ ಎನ್ನೋದು ನಿತ್ಯ ಜೀವನದ ಅವಿಭಾಜ್ಯ ಅಂಗ ಎಂಬಂತಹ ಪರಿಸ್ತಿತಿ ಈಗ. ಕಳೆದ ನಾಲ್ಕು ದಶಕಗಳಿಂದಲೂ ಭ್ರಷ್ಟಾಚಾರ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕಾಯ್ದೆ ತರಲು ನಮ್ಮ ಚುನಾಯಿತ ಪ್ರತಿನಿದಿಗಳು ಮನಸ್ಸು ಮಾಡಿಲ್ಲ. ಹಾಗಾಗಿ ಲೋಕಪಾಲ್ ಎಂಬ ಮಸೂದೆ ೧೯೬೯ರಲ್ಲಿ ಲೋಕಸಭೆಯ ಬಾಗಿಲಲ್ಲಿ ಬಿದ್ದು ಅಲ್ಲೇ ಇನ್ನೂ ಕೊಳೆಯಲು ಕಾರಣವಾಗಿದೆ. ಅನುಮಾನ ಬರುವುದೇ ನಮ್ಮ ಚುನಾಯಿತ ಪ್ರತಿನಿಧಿಗಳ ಬಗ್ಗೆ. ಅವರಾರಿಗೂ ಭ್ರಷ್ಟಾಚಾರ ನಿರ್ಮೂಲನೆಗೆ ಆಸಕ್ತಿಯೇ ಇದ್ದಂತಿಲ್ಲ. ನಾಲ್ಕು ದಶಕಗಳ ಹಿಂದೆಯೇ ಲೋಕಪಾಲ್ ಮಸೂದೆ ಮಂಡನೆ ಆಗಿ, ಅಸ್ತಿತ್ವಕ್ಕೆ ಬಂದಿದ್ದರೆ ದೇಶ ಮತ್ತಷ್ಟು ಸದೃಢವಾಗಿ ಬೆಳೆಯುತ್ತಿತ್ತು ಎನ್ನುವುದರಲ್ಲಿ ಅನುಮಾನವಿಲ್ಲ. ಸ್ವಾತಂತ್ರ್ಯಾ ನಂತರದ ಭಾರತದ ಕೆಲವು ಐತಿಹಾಸಿಕ ಭ್ರಷ್ಟಾಚಾರ ಹಗರಣಗಳನ್ನು ಹಿಂದಿರುಗಿ ನೋಡಿದಾಗ ನಾವು ಇವತ್ತಿರುವ ಸ್ಥಿತಿಗೆ ಬರಲು ಕಾರಣ ಏನಿರಬಹುದು ಎಂದು ಸ್ಪಷ್ಟವಾಗುತ್ತದೆ. ನೆನಪು ಮಾಡಿಕೊಳ್ಳಿ.
೧೯೫೭ ರಲ್ಲಿ ನೆಹರು ಪ್ರಧಾನಿಯಾಗಿದ್ದಾಗ ಮುಂದ್ರಾ ಹಗರಣ ನಡೆದಿತ್ತು. ಎಲ್.ಐ.ಸಿ ಕಂಪನಿಗೆ ೧.೨೫ ಕೋಟಿ ಬೆಲೆಯ ಶೇರು ಮಾರಾಟ ಮಾಡಿದ ಆಗಿನ ಆರ್ಥಿಕ ಸಚಿವ ಕೃಷ್ಣಮಾಚಾರಿಯ ರಾಜೀನಾಮೆ ಪಡೆಯಲಾಗಿತ್ತು. ಈ ಹಗರಣದಲ್ಲಿ ಇಂದಿರಾಗಾಂಧಿಯ ಪತಿ ಫಿರೋಜ್ ಗಾಂಧಿಯವರ ಹೆಸರು ಕೇಳಿಬಂದಾಗ ಜಸ್ಟಿಸ್ ಎಂ.ಸಿ.ಜಾಗ್ಲ ಅವರ ನೇತೃತ್ವದ ಏಕಪೀಠ ಸದಸ್ಯ ಆಯೋಗವನ್ನ ಸ್ವತಃ ಪ್ರಧಾನಿ ನೆಹರು ನೇಮಕ ಮಾಡಿದ್ದರು. ತನಿಖೆ ನಡೆದಾಗ ಮೇಲ್ನೋಟಕ್ಕೆ ಆರೋಪ ಸಾಬಿತಾಗಿ ವ್ಯಾಪಾರಸ್ತ ಹರಿದಾಸ್ ಮುಂದ್ರ ಜೈಲಿನ ಪಾಲಾಗಿದ್ದ.
೧೯೮೭ ರಲ್ಲಿ ನಡೆದ ಬೋಫೋರ್ಸ್ ಹಗರಣ ೪೦ ಕೋಟಿ ರುಪಾಯಿಯದ್ದು. ಆಗ ಅದು ಬಹು ದೊಡ್ಡ ಮೊತ್ತ. ಇದರಲ್ಲಿ ಆಗಿನ ಪ್ರಧಾನಿ ರಾಜೀವ್ ಗಾಂಧಿ ಸೇರಿದಂತೆ ಅವರ ಆಪ್ತರು ೪೦ ಕೋಟಿ ಕಿಕ್ ಬ್ಯಾಕ್ ಪಡೆದ ಆರೋಪ ಎದುರಿಸಿದ್ದರು. ಈ ಪ್ರಕರಣದ ಸಿಬಿಐ ತನಿಖೆ ನಡೆದರೂ ’ಸಾಕ್ಷಾಧಾರಗಳ ಕೊರತೆಯಿಂದ’ ೨೦೦೫ ರ ವೇಳೆಗೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಕ್ವಟ್ರೋಚಿ ಸೇರಿದಂತೆ ಎಲ್ಲರೂ ಆರೋಪ ಮುಕ್ತರಾಗುವ ಮೂಲಕ ಪ್ರಕರಣ ಅಂತ್ಯ ಕಂಡಿತ್ತು.
ಬಿಹಾರದಲ್ಲಿ ನಡೆದ ೯೫೦ ಕೋಟಿಯ ಮೇವು ಹಗರಣ. ಆಗಿನ ಬಿಹಾರ್ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಈ ಪ್ರಕರಣದ ಮುಖ್ಯ ಆರೋಪಿ. ಆತ ತಪ್ಪಿತಸ್ತನಾಗಿ ಪಟ್ಟ ಬಿಟ್ಟಾಗ ಅವರ ಹೆಂಡತಿ ಮುಖ್ಯಮಂತ್ರಿಯಾದರು, ಪ್ರಕರಣ ತಣ್ಣಗಾಯಿತು.
೧೯೯೮ರಲ್ಲಿ ಆದ ಶೇರು ಕಂಪನಿಗಳ ಹಗರಣ ೩೩೦.೭೮ ಕೋಟಿ ಆಗಿದ್ದು ಸುಮಾರು ೮೦ ಕಂಪನಿಗಳು ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಅವುಗಳ ದಾಖಲಾತಿಯೇ ಇಲ್ಲದೆ ಗುಳುಂ ಮಾಡಿಬಿಟ್ಟಿದ್ದರು. ಸಿಬಿಐ ತನಿಖೆ ಮೂಲಕ ಪ್ರಕರಣ ಬೆಳಕಿಗೆ ಬಂದಿತ್ತಾದರೂ ಈಗಲೂ ತನಿಖೆ ಮುಂದುವರೆದಿದೆ!
೨೦೦೧ ರಲ್ಲಿ ಬಹಿರಂಗವಾದ ಶೇರು ಮಾರುಕಟ್ಟೆಯ ಬ್ರೋಕರ್ ಕೇತನ್ ಪಾರೆಕ್ ನಡೆಸಿದ ಶೇರು ಬೆಲೆಯ ಅವ್ಯವಹಾರ ೧,೧೫, ೦೦೦ ಕೋಟಿ! ಇದರಿಂದ ಸರ್ಕಾರ ಕೂಡ ಆರ್ಥಿಕ ಹಿಂಜರಿಕೆ ಎದುರಿಸಬೇಕಾಗಿ ಬಂದಿತ್ತು. ಹಾಗೆ ಹರ್ಷದ್ ಮೆಹೆತಾ ಎಂಬ ಹವಾಲಾ ದಲ್ಲಾಳಿಯೊಬ್ಬನ ಅತ್ಯಂತ ದುಬಾರಿ ಮೋಸವೂ ಕೂಡ ರಾಷ್ಟ್ರದ ಆರ್ಥಿಕ ಪರಿಸ್ಥಿತಿ ಮೇಲೆ ಭಾರಿ ಹೊಡೆತ ಕೊಟ್ಟು ಇಡೀ ಆರ್ಥಿಕ ವ್ಯವಸ್ಥೆ ತಲ್ಲಣಗೊಂಡಿತ್ತು.
೨೦೦೩ ರ ಛಾಪಾ ಕಾಗದ ಹಗರಣ ದೇಶದ ಆಸ್ತಿ ನೋಂದಾವಣೆಯ ವ್ಯವಸ್ತೆಯನ್ನೇ ಬುಡಮೇಲು ಮಾಡಿಬಿಟ್ಟಿತ್ತು. ೨೦ ಸಾವಿರ ಕೋಟಿ ಬೆಲೆಯ ನಕಲಿ ಛಾಪಾ ಕಾಗದಗಳನ್ನು ಮಾರಾಟ ಮಾಡುವ ಮೂಲಕ ಅಬ್ದುಲ್ ಕರಿಂ ತೆಲಗಿ ಸಿಕ್ಕು ಬಿದ್ದಿದ್ದ. ಈತನ ಜೊತೆಗೆ ಹಲವಾರು ರಾಜಕೀಯ ಘಟಾನುಘಟಿಗಳು ಹೆಸರು ಬಹಿರಂಗಗೊಂಡಿತ್ತು.
೨೦೦೫ ರಲ್ಲಿ ನಡೆದ ಸಬ್ಮರೀನ್ ಖರೀದಿ ಹಗರಣದಲ್ಲಿ ೫೦೦ ಕೋಟಿ ಅವ್ಯವಹಾರದ ಆರೋಪ ಬೆಳಕಿಗೆ ಬಂದಿತ್ತು. ೨೦೦೭ ರ ಶೇರು ಮಾರುಕಟ್ಟೆಗೆ ಸಂಬಂಧಪಟ್ಟ ಸತ್ಯಂ ಕಂಪ್ಯೂಟರ್ ಹಗರಣ ೭೦೦೦ ಸಾವಿರ ಕೋಟಿ ಗುಳುಂ ಮಾಡಿತ್ತು.
ಜಾರ್ಖಂಡದ ಮಾಜಿ ಮುಖ್ಯಮಂತ್ರಿ ಮದುಕೊಡ ಗಣಿ ಅವ್ಯವಹಾರದಲ್ಲಿ ಸುಮಾರು ೪೦೦೦ ಕೋಟಿ ರುಪಾಯಿ ಆಸ್ತಿ ಮಾಡಿ, ಅವ್ಯವಹಾರಕ್ಕೆ ಸಂಬಂಧಿಸಿದಂತೆ ಬಂಧಿತರಾಗಿ ಇನ್ನು ಸೆರೆವಾಸದಲ್ಲಿದ್ದಾರೆ. ೨೦೧೦ ರಲ್ಲಿ ನಡೆದ ಕಾಮನ್ ವೆಲ್ತ್ ಕ್ರೀಡಾಕೂಟದ ಸಂದರ್ಭದಲ್ಲಿ ೭೦೦೦೦ ಕೋಟಿ ಅವ್ಯವಹಾರ ನಡೆಸಿದ ಆರೋಪದಲ್ಲಿ ಸುರೇಶ ಕಲ್ಮಾಡಿ ಜೈಲು ಸೇರಿ ರೆಸ್ಟ್ ನಲ್ಲಿದ್ದಾರೆ. ೨ಜಿ ಹಗರಣದಲ್ಲಿ ರಾಜಾ ಮತ್ತು ಕನ್ನಿಮೋಳಿಯವರೂ ಕಂಬಿ ಎಣಿಸುತ್ತಿದ್ದಾರೆ.
ಇವು ಈ ದೇಶ ಕಂಡ, ಸುದ್ದಿಯಾದ, ಪ್ರಮುಖ ಭ್ರಷ್ಟಾಚಾರ ಪ್ರಕರಣಗಳು. ಇವುಗಳ ಜಾಡು ಹಿಡಿದು ಹೊರಟರೆ ಆಳ-ಅಗಲ ಹುಡುಕುವುದು ಸುಲಭವೇನಲ್ಲ. ಈ ರೀತಿಯ ಹಗರಣಗಳಲ್ಲಿ ಹೆಸರು ಕಾಣಬರುವುದು ಒಂದಿಬ್ಬರದ್ದಾದರೆ ಅದರಲ್ಲಿ ಪಾಲುದಾರರಾಗಿರುವುದು ನೂರಾರು ಪ್ರಭಾವೀ ಜನ. ಅದರಲ್ಲೂ ನಮ್ಮ ದೇಶದ ಆಡಳಿತದ ಚುಕ್ಕಾಣಿ ಹಿಡಿದಿರುವ ರಾಜಕಾರಣಿಗಳು, ಅವರ ಮಕ್ಕಳು, ಅಧಿಕಾರಿಗಳು ಮತ್ತು ಭಾರತದ ಅತ್ಯಂತ ಸಿರಿವಂತರು. ಬೆಳಕಿಗೆ ಬಂದದ್ದು ಈ ಕೆಲವಾದರೂ ಲೆಕ್ಕವಿಲ್ಲದಷ್ಟು ಭ್ರಷ್ಟಾಚಾರ ಹಗರಣಗಳು, ಕೆಲವು ಸುದ್ದಿಗೆ ಬಂದರೂ ಹಾಗೇ ಮುಚ್ಚಿ ಹೋಗಿವೆ. ಬಯಲು ಮಾಡಲು ಹೋಗಿ ಜೀವ ತೆತ್ತವರಿದ್ದಾರೆ. ರಾಜಕೀಯ, ಅಧಿಕಾರಶಾಹಿ ಹಾಗೂ ನ್ಯಾಯಾಂಗ ಸೇರಿದಂತೆ ಪತ್ರಿಕಾರಂಗ ಕೂಡಾ ಭ್ರಷ್ಟಾಚಾರದ ಸುಳಿಗೆ ಧುಮುಕಿ ತನ್ನ ಅಸ್ತ್ರಗಳನ್ನು ಕೊಳಕು ಮಾಡಿಕೊಂಡು ಕುಳಿತಿದೆ. ಅವರಲ್ಲಿರಬೇಕಾದ ಜನಪರ ಜವಾಬ್ದಾರಿ ಕಾಣೆಯಾಗಿದೆ. ಜನರಿಗೂ ಪತ್ರಿಕಾರಂಗದ ಮೇಲೆ ನಂಬಿಕೆ ಇಲ್ಲ. ಹಣ-ಅಂತಸ್ತು, ಅಧಿಕಾರ ಈಗ ಅನಿವಾರ್ಯವಾಗಿಬಿಟ್ಟಿದೆ. ಜನಸಾಮಾನ್ಯರು ಪರಿಸ್ಥಿತಿಯನ್ನು ಎದುರಿಸಲಾಗದೆ ಅನಿವಾರ್ಯವಾಗಿ ಈ ವ್ಯವಸ್ತೆಯಲ್ಲಿ ಪಾಲುದಾರರಾಗುತ್ತಿದ್ದಾರೆ. ಇಡೀ ಭಾರತ ತನ್ನ ಆಧುನಿಕತೆ, ಆರ್ಥಿಕ ಉದಾರೀಕರಣದ ಭರದಲ್ಲಿ ಅಭಿವೃದ್ದಿ ಹೊಂದುತ್ತಲೇ ಆರೋಗ್ಯಕರ ರಾಜಕಾರಣ, ಕ್ಲೀನ್ ಅಧಿಕಾರದ ಭದ್ರ ಬುನಾದಿಯ ನಿರ್ಮಾಣಕ್ಕೆ ಪೂರಕವಾಗಿ ಸ್ಪಂದಿಸದೆ ಸುಮ್ಮನೆ ಯಥಾಸ್ಥಿತಿ ಮುನ್ನುಗುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಭಾರತಕ್ಕೆ ಯಾವತ್ತಿನಂತೆ ಈಗಲೂ ಭ್ರಷ್ಟಾಚಾರದ ನಿರ್ಮೂಲನೆಗೆ ಸರಿಯಾದ ಕಡಿವಾಣ ಕಂಡುಹಿಡಿದುಕೊಳ್ಳುವ ಅಗತ್ಯವಿದೆ. ಪರಿಹಾರ ಕಂಡುಕೊಂಡಾಗ ಮಾತ್ರ ಭಾರತ ಎಲ್ಲರೀತಿಯಲ್ಲೂ ಭದ್ರವಾಗಿರಲು ಸಾಧ್ಯ. ಸ್ವಿಸ್ ಬ್ಯಾಂಕ್ ಗಳಲ್ಲಿ ತುಂಬಿ ತುಳುಕುತ್ತಿರುವ ಜನರ ಹಣವನ್ನು ಭಾರತಕ್ಕೀಗ ವಾಪಸ್ ತರಬೇಕಿದೆ. ಇಲ್ಲಿನ ಬಡತನ ,ಶಿಕ್ಷಣ, ಆರೋಗ್ಯ ಸಾಕಷ್ಟು ಅಭಿವೃದ್ದಿ ಕಾಣಬೇಕಿದೆ, ಎಲ್ಲರಿಗೂ ತಲುಪುವಂತಾಗಬೇಕಿದೆ. ಈಗ ಬದಲಾವಣೆ ಭಾರತಕ್ಕೆ ಅನಿವಾರ್ಯ ಎನ್ನುವ ಮಾತು ಎಲ್ಲೆಡೆ ಕೇಳಿಬರುತ್ತಿರುವುದರಿಂದ ಭ್ರಷ್ಟಾಚಾರ ನಿರ್ಮೂಲನೆಗೆ ರಾಮಬಾಣ ಸೃಷ್ಟಿಸಲು ಈಗ ಸಮಯ ಹೊಂದುತ್ತಿರುವಂತಿದೆ. ಹಾಗಾಗಿಯೇ...
ಈಗ ಇಂಡಿಯಾ ತುಂಬೆಲ್ಲಾ ಅಣ್ಣ ಹಜಾರೆ ಅವರದ್ದೇ ರಾಮನಾಮ ಆಗಿಹೋಗಿದೆ. ಜನ-ಲೋಕಪಾಲ್ ಹಾಗೂ ಲೋಕಪಾಲ್ ನಡುವಿನ ಚರ್ಚೆ, ಸಮರ ಈಗ ಪರಾಕಾಷ್ಟೆ ತಲುಪಿದೆ. ಅಣ್ಣಾ ಹಜಾರೆ ಎಂಬ ವ್ಯಕ್ತಿಯೊಬ್ಬರ ಹೋರಾಟದಿಂದ ರಾಷ್ಟದೆಲ್ಲೆಡೆ ಒಂದು ರೀತಿ ಮಿಂಚಿನ ಸಂಚಾರ ಆಗಿದೆ. ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು ಎಂಬಂತೆ ಅಣ್ಣಾ ಹಜಾರೆ ಅವರ ಹೋರಾಟಕ್ಕೆ ಯುವ ಸಮೂಹ ಬೆನ್ನೆಲುಬಾಗಿದೆ. ಭ್ರಷ್ಟಾಚಾರದ ವಿರುದ್ದದ ದ್ವನಿ ಎಲ್ಲೆಡೆ ಕೇಳಿಬರತೊಡಗಿದೆ. ಭ್ರಷ್ಟಾಚಾರ ಈಗ ಯಾವ ಪ್ರಮಾಣದಲ್ಲಿದೆ ಎಂದರೆ ಯಾವೊಬ್ಬ ವ್ಯಕ್ತಿಯೂ ಅದರಿಂದ ಮುಕ್ತನಾಗಿದ್ದಾನೆಂದು ಹೇಳಲಿಕ್ಕೆ ಸಾಧ್ಯವಿಲ್ಲ. ಆದರೆ ರಾಜಕೀಯಕ್ಕಿಳಿಯದ ಅಣ್ಣಾ ಹಜಾರೆ ಇಂದು ಎಲ್ಲರಿಗು ಮಾಡೆಲ್ ಆಗಿದ್ದಾರೆ. ಸ್ವಾತಂತ್ರ್ಯದ ನಂತರ ಕಳೆದ ೬೪ ವರ್ಷಗಳಲ್ಲಿ ಭಾರತದಲ್ಲಿ ಕಾಣುತ್ತಿರುವ ಅತಿವ್ಯಾಪಕ ಚಳವಳಿ ಅಣ್ಣಾ ಹಜಾರೆ ಹುಟ್ಟಿಸಿದ್ದು!
ಇಡೀ ದೇಶದಲ್ಲಿ ಈ ಬಗ್ಗೆ ಈಗ ಗಹನವಾದ ಚರ್ಚೆ ಸಾಗಿರುವಾಗಲೇ ಅಣ್ಣಾ ಹೋರಾಟದ ಸುತ್ತವೇ ಅನುಮಾನದ ಹುತ್ತ ಕೂಡಾ ಬೆಳೆದುಕೊಂಡಿದೆ. ಭ್ರಷ್ಟಾಚಾರದ ವಿರುದ್ದದ ಹೋರಾಟದ ಅಣ್ಣ ಹಜಾರೆಯವರ ಉದ್ದೇಶವನ್ನ ಯಾರೂ ಅಲ್ಲಗೆಳೆಯುತ್ತಿಲ್ಲ. ಆದರೆ ಅವರ ಸುತ್ತ ಇರುವಂತಹ ಜನರ ಉದ್ದೇಶ, ಹಿನ್ನೆಲೆ, ಬಗ್ಗೆ ಅನುಮಾನ ಶುರುವಾಗಿದೆ. ಅಣ್ಣಾ ಹಜಾರೆ ಹೋರಾಟಕ್ಕೆ ಈಗ ಬಹು ನಿರೀಕ್ಷಿತ ಜಾತಿ, ಜನಿವಾರದ ಬಣ್ಣ ಸುತ್ತಿಕೊಂಡಿದೆ. ಅಣ್ಣಾ ಹಜಾರೆಯವರ ಜೊತೆ ಇರುವ ನಾಗರಿಕ ಸಮಿತಿ ಸದಸ್ಯರ ಬಗ್ಗೆ ಅಪಸ್ವರ ಕೇಳಿ ಬರತೊಡಗಿದೆ. ಅಣ್ಣಾ ಹಜಾರೆ ಹಿಂದುಳಿದವರ, ಅಲ್ಪ ಸಂಖ್ಯಾತರನ್ನು ವಿರೋಧಿಸುವ ಪ್ರತಿನಿಧಿಯೇ ಎಂಬ ಪ್ರಶ್ನೆ ಹುಟ್ಟಿದೆ. ಅಣ್ಣಾ ಹಜಾರೆ ತಾನು ಕಟ್ಟಿದ ಗಾಂಧೀ ಗ್ರಾಮದಲ್ಲಿ ದಲಿತರಿಗೆ ಸಸ್ಯಾಹಾರಿಯಾಗಲು ಒತ್ತಾಯಿಸಿದ್ದರು, ಮುಸ್ಲಿಂ ಗಂಡಸರಿಗೆ ಕುಟುಂಬ ಯೋಜನೆಗೆ ಅನುವಾಗಲು ಬಲವಂತ ಮಾಡಿದ್ದರು ಎನ್ನುವ ವಿಷಯಗಳು ಇವೆಲ್ಲವೂ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಚರ್ಚೆಗೆ ಗ್ರಾಸ ಆಗುವಂತಹ ವಿಚಾರ ಎಂದು ಬಿಟ್ಟುಬಿಡಬಹುದು. ಹಾಗೇ ಅಂಕಣಗಾರ್ತಿ ಅರುಂಧತಿ ರಾಯ್ ಅಣ್ಣಾ ಹೋರಾಟಕ್ಕೆ ಸಿಕ್ಕ ಬೆಂಬಲ ಬೇರೆ ಸಂದರ್ಭದಲ್ಲಿ ಬೇರೆ ಹೋರಾಟಗಳಿಗೆ ಯಾಕೆ ಸಿಕ್ಕಿಲ್ಲ ಎಂದು ಕೇಳಿರುವ ಪ್ರಶ್ನೆಗಳು ಇಲ್ಲಿ ತೀರಾ ಹಸಿ ಅನ್ನಿಸದೆ ಇರದು. ಇದು ಅಣೆಕಟ್ಟೆಯೊಂದರ ವಿಷಯವಲ್ಲ. ಇಡೀ ರಾಷ್ಟ್ರದಲ್ಲಿ ಬೇಜಾವಾಬ್ದಾರಿಯುತ ಆಡಳಿತಕ್ಕೆ ಕಾರಣರಾಗಿರುವ ರಾಜಕಾರಣಿಗಳನ್ನು ನಿಯಂತ್ರಿಸುವ ವ್ಯವಸ್ತೆಯೊಂದಕ್ಕಾಗಿ ನಡೆಯುತ್ತಿರುವ ಹೋರಾಟ. ಇಲ್ಲಿ ಅರುಂಧತಿ ಅವರ ಪ್ರಶ್ನೆ ಅಪ್ರಸ್ತುತ ಎಂದು ನನ್ನ ಭಾವನೆ. ಒಂದು ಹೋರಾಟಕ್ಕೆ ಏನೆಲ್ಲಾ ಗಂಡಾಂತರಗಳು ಎದುರಾಗುತ್ತವೆ ನೋಡಿ. ಸೋ-ಕಾಲ್ಡ್ ಬುದ್ದಿಜೀವಿಗಳು, ರಾಜಕಾರಣಿಗಳು ಹಾಗೂ ಧರ್ಮವನ್ನೆ ತಮ್ಮ ಅಸ್ತ್ರವನ್ನಾಗಿ ಮಾಡಿಕೊಳ್ಳುವ ಧರ್ಮಾಂಧ ಜನರಿಗೆ ಯಾವ ಸಂದರ್ಭಗಳೂ ಇಸ್ಪೀಟು ಆಟವೇ ಆಗಿ ಹೋಗುತ್ತವೆ. ಇದಕ್ಕೆ ಅವರುಗಳು ಬಿಡುವ ಕಾರ್ಡುಗಳೇ ಸಾಕ್ಷಿ!
ಅಣ್ಣಾ ಹಜಾರೆ ಹೋರಾಟದಂತೆಯೇ ಹಿಂದೊಮ್ಮೆ ಜಯಪ್ರಕಾಶ್ ನಾರಾಯಣ್ ರ ಚಳವಳಿ ಹುಟ್ಟಿಕೊಂಡದ್ದು. ೧೯೭೩-೭೪ ರ ಸುಮಾರಿಗೆ ಗುಜರಾತ್ ನಲ್ಲಿ ಚಿಮನ್ ಬಾಯಿ ಪಟೇಲ್ ಸರ್ಕಾರದ ಮಿತಿ ಮೀರಿದ ಭ್ರಷ್ಟಾಚಾರ ಹಾಗೂ ಬಿಹಾರದಲ್ಲಿನ ಬೆಲೆ ಏರಿಕೆ ವಿರುದ್ದ ದನಿ ಎತ್ತುವ ಮೂಲಕ ಜೆಪಿ ಚಳವಳಿ ಚಾಲನೆ ಪಡೆದಿತ್ತು. ಇಲ್ಲಿಯವರೆಗೂ ಮತ್ತೆ ಆ ರೀತಿಯ ಚಳುವಳಿಯೊಂದು ಹುಟ್ಟಲು ಸಾಧ್ಯವಾಗಿರಲಿಲ್ಲ. ಜೆಪಿ ಚಳವಳಿ ಮುಂದುವರಿದು ತನ್ನದೇ ರಾಜಕೀಯ ರೂಪ ಪಡೆದಿತ್ತು. ಆಗ ಜೆಪಿ ಚಳುವಳಿಯಲ್ಲಿದ್ದ ಮುಖಂಡರು ಈಗ ಯಾವ ರೀತಿಯ ರಾಜಕಾರಣಿಗಳಾಗಿದ್ದಾರೆ ಎನ್ನುವ ಉದಾಹರಣೆಯೂ ನಮ್ಮ ಮುಂದೆ ಇದೆ.
ಅಣ್ಣಾ ಹಜಾರೆ ಹೋರಾಟಕ್ಕೆ ಕೇಂದ್ರ ಸರ್ಕಾರದ ಧೋರಣೆಯೇ ಈಗ ಹೋರಾಟದ ತೀವ್ರತೆಗೆ ಎಡೆಮಾಡಿಕೊಟ್ಟಿದೆ. ದೇಶದ ರಾಜಕಾರಣಿಗಳಿಗೆ ಜನ-ಲೋಕಪಾಲ್ ಒಂದು ಚಾಟಿ ಆಗುವುದರಿಂದ ಅದಕ್ಕೆ ಸರ್ವಸ್ವಾತಂತ್ರ್ಯ ಕೊಡಲು ಎಲ್ಲರಿಗೂ ಹಿಂಜರಿಕೆ ಇದೆ. ಇವರಿಗೆ ಭಾರತದ ಭವಿಷ್ಯದ ಬಗ್ಗೆ ಚಿಂತಿಸುವುದು ಬೇಕಾಗಿಲ್ಲ. ಸಂಸತ್ತು ಎಲ್ಲ ವಿಷಯದಲ್ಲೂ ಸುಪ್ರೀಂ ಆದರೂ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಗೂ ಅಷ್ಟೇ ಮಾನ್ಯತೆ ಇದೆ ಎನ್ನುವುದನ್ನು ರಾಜಕಾರಣಿಗಳು ಮರೆತಿದ್ದಾರೆ. ಓಟು ಕೇಳುವ ಸಮಯ ಬಂದಾಗ ಮಾತ್ರ ಅದು ಅವರಿಗೆ ನೆನಪಾಗುತ್ತದೆ. ನಮ್ಮ ಚುನಾಯಿತ ಜನಪ್ರತಿನಿಧಿಗಳಿಗೆ ಜನರ ಉತ್ತರಕೊಡುವ ಕಟ್ಟುನಿಟ್ಟಿನ ಪರಿಸ್ಥಿತಿ, ಹೊಣೆಗಾರಿಕೆ ಬೇಕಿಲ್ಲ. ಪ್ರಜಾಪ್ರಭುತ್ವಕ್ಕೆ ಬೆಲೆ ಸಲ್ಲಬೇಕಾದರೆ ಮೊದಲು ಈ ಕೆಳಹಂತದಲ್ಲಿನ ಭ್ರಷ್ಟಾಚಾರವನ್ನು ಹತೋಟಿಗೆ ತರಬೇಕು, ಇಲ್ಲದಿದ್ದಲ್ಲಿ ಜನಸಾಮಾನ್ಯನ ಬದುಕಿಗೆ ನೆಮ್ಮದಿ ಇಲ್ಲ.
ಭಿನ್ನಾಬಿಪ್ರಾಯ ಏನೇ ಇರಲಿ ರಾಷ್ಟ್ರದ ಎಲ್ಲಾ ಪ್ರಜ್ಞಾವಂತರು ಈಗ ಹಜಾರೆ ಹೋರಾಟಕ್ಕೆ ಬೆಂಬಲ ನೀಡಬೇಕಿದೆ. ಆರ್.ಎಸ್.ಎಸ್, ಬಿಜೆಪಿ, ಸಂಘ ಪರಿವಾರದವರು ಅಣ್ಣಾ ಹೋರಾಟವನ್ನ ಹೈಜಾಕ್ ಮಾಡಿದ್ದಾರೆ ಎಂದು ಈಗ ಇತರೆ ಪಕ್ಷಗಳು ಹಿಂದಕ್ಕೆ ಸರಿದರೆ ಮತ್ತಷ್ಟು ಭ್ರಷ್ಟಾಚಾರ ಸಂಬಂಧಿ ಅವಘಡ ಕಟ್ಟಿಟ್ಟ ಬುತ್ತಿ. ಹಜಾರೆ ಹೋರಾಟ ಹಾಗೂ ಅವರ ಬೆಂಬಲಿಗರ ಬಗ್ಗೆ ಆರೋಪ ಮಾಡುತ್ತಾ ಕುಳಿತರೆ ಭ್ರಷ್ಟಾಚಾರದ ಭೂತವನ್ನು ಸುಡಲು ಸಾಧ್ಯವಿಲ್ಲ. ಕಾಂಗ್ರೆಸ್ಸ್ ಸರ್ಕಾರ ಜನ-ಲೋಕಪಾಲ್ ಮಸೂದೆಯನ್ನು ಸಂಸತ್ನಲ್ಲಿ ಚರ್ಚೆಗೆ ಮಂಡಿಸಲು ಹಿಂದೆ ಮುಂದೆ ನೋಡಿದ್ದು ’ಮಿಸ್ಟರ್ ಕ್ಲೀನ್’ ಮನಮೋಹನ್ ಸಿಂಗ್ ಅವರ ಬಗ್ಗೆಯೂ ಅನುಮಾನ ಮೂಡಿಸುತ್ತದೆ. ಒಂದು ಪಕ್ಷ ಸಂಸತ್ತಿನ ಚರ್ಚೆಯಲ್ಲಿ ಜನ-ಲೋಕಪಾಲ್ ಗೆ ಒಪ್ಪಿಗೆ ಸಿಗದಿದ್ದರೆ ಆಗ ಬೇರೆ ವಿಷಯ. ಚರ್ಚೆ ಆದಾಗ ಯಾವ ಪಕ್ಷ ಯಾವ ನಿಲುವು ತಾಳಲಿದೆ ಎನ್ನುವುದು ಮತದಾರರಿಗೆ ಗೊತ್ತಾಗುತ್ತದೆ. ಸಧ್ಯದ ಪರಿಸ್ಥಿತಿಯಲ್ಲಿ ಯಾವ ಪಕ್ಷದವರಿಗೂ ಅವರ ಬಂಡವಾಳ ಬಹಿರಂಗ ಆಗುವುದು ಬೇಕಾಗಿಲ್ಲ. ಹಣದ ಮೂಲಕವೇ ಚುನಾವಣೆ ಎದುರಿಸುವ ಬಹುಪಾಲು ರಾಜಕಾರಣಿಗಳಿಗೆ ಭ್ರಷ್ಟಾಚಾರ ಇಲ್ಲದೆ ಬಂಡವಾಳ ಸಂಗ್ರಹ ಸಾಧ್ಯವಿಲ್ಲ. ಆದರಿಂದಲೇ ನಮ್ಮ ನಾಯಕರಿಗೆ ಅವರನ್ನು ಹದ್ದುಬಸ್ತಿನಲ್ಲಿಡುವ ಯಾವುದೇ ಕಾನೂನು ಬೇಕಾಗಿಲ್ಲ. ಆದರೀಗ ಜನ ಇಂಥ ರಾಜಕಾರಣಿಗಳನ್ನು ಸಹಿಸುವ ಸ್ಥಿತಿಯಲ್ಲಿ ಇಲ್ಲ. ಲೋಕಪಾಲ್, ಜನ-ಲೋಕಪಾಲ್ ಅಥವಾ ಮತ್ತೊಂದೋ. ಒಟ್ಟಿನಲ್ಲಿ ಭ್ರಷ್ಟಾಚಾರ ತಡೆಗೆ ಸಮರ್ಥವಾದ ಕಾಯ್ದೆ ರೂಪುಗೊಳ್ಳದಿದ್ದರೆ ಇಡೀ ರಾಷ್ಟ್ರವನ್ನು ದಿನೇದಿನೇ ಭ್ರಷ್ಟಾಚಾರದ ಭೂತ ನುಂಗಿ ಹಾಕುವುದು ಸುಳ್ಳಲ್ಲ.
ಅಣ್ಣಾ ಅವರ ೧೩ ದಿನಗಳ ಉಪವಾಸ ಹುಡುಗಾಟದ ಮಾತಲ್ಲ. ೭೪ ರ ಹರೆಯದ ಅಣ್ಣಾ ಹಜಾರೆ ಈಗ ಒಂದು ಶಕ್ತಿ! ಅವರ ಹಿಂದೆ ಇರುವ ಅರವಿಂದ್ ಕೆಜರಿವಾಲ, ಕಿರಣ್ ಬೇಡಿ, ಶಾಂತಿ ಭೂಶನ್, ಪ್ರಶಾಂತಿ ಭೂಶನ್ ಹಾಗೂ ಸಂತೋಷ್ ಹೆಗ್ಡೆ ಅಂತಹ ಜನರಿದ್ದಾರೆ. ಇವರೆಲ್ಲರ ಹಿನ್ನೆಲೆ ನಮ್ಮ ಎಷ್ಟೋ ರಾಜಕಾರಣಿಗಳಿಗಿಂತ ಉತ್ತಮವಾಗಿದೆ. ಭ್ರಷ್ಟಾಚಾರ ನಿರ್ಮೂಲನೆಯಂತಹ ಹೋರಾಟಕ್ಕೆ ಕಂಕಣಬದ್ದರಾಗಿ ನಿಲ್ಲಲು ಭ್ರಷ್ಟಾಚಾರವನ್ನು ಮೈಗಂಟಿಸಿಕೊಂಡವರಿಂದ ಸಾಧ್ಯವಾಗದು. ಹಾಗಾಗಿಯೇ ರಾಜಕೀಯೇತರವಾಗಿ ಹೋರಾಟಕ್ಕೆ ಇಳಿದ ಅಣ್ಣಾ ಟೀಂಗೆ ರಾಜಕೀಯ ಪಕ್ಷಗಳು ಆದಷ್ಟು ಡ್ಯಾಮೇಜ್ ಮಾಡಲು ಮುಂದಾಗಿದ್ದು ಈಗ ಫಲಕಾರಿಯಾಗಿಲ್ಲ. ಜನ ಹೋರಾಟಕ್ಕೆ ನಮ್ಮ ಸಂಸತ್ತು ಮನ್ನಣೆ ನೀಡಲು ಮುಂದಾಗಿದೆ. ಇಲ್ಲದಿದ್ದಲ್ಲಿ ಯೋಗಗುರು ಬಾಬಾರಾಮ್ ದೇವ್ ನ ಜೊತೆ ನಡೆಸಿಕೊಂಡಂತೆ ಇಲ್ಲೂ ರಾಜಕೀಯ ತನ್ನ ಚಾಲಾಕಿತನದ ಚಾಟಿ ಬೀಸುವ ಸಾದ್ಯತೆ ಇತ್ತು.
ಹಾಗೇ ಅಣ್ಣಾ ಹಜಾರೆ ಅವರನ್ನ ಗಾಂಧಿ ಅವರಿಗೆ ಹೋಲಿಸುವ ಅಗತ್ಯವೇ ಇಲ್ಲ. ಈ ಹೋರಾಟದ ಕಾಲಮಾನ ಸ್ಥಿತಿಗತಿಗಳೇ ಬೇರೆ. ಇಲ್ಲಿ ನಡೆಯುತ್ತಿರುವ ಹೋರಾಟ ಆಯಾ ಸಂದರ್ಭದ ಇಶ್ಯೂಗಳನ್ನಷ್ಟೇ ಆಧರಿಸಿದೆ ಎಂಬುದನ್ನ ಮನಗಾಣ ಬೇಕಿದೆ. ಸುಖಾ ಸುಮ್ಮನೆ ಜಾತಿ, ಧರ್ಮದ ಲೇಪ ಹಚ್ಚಲು ಹೋದರೆ ಉದ್ದೇಶ ಸೊರಗುತ್ತದೆ. ಎಲ್ಲಕಿಂತ ಮುಖ್ಯವಾಗಿ ಭಾರತದ ರಾಜಕೀಯ ಪಕ್ಷಗಳಲ್ಲಿ ಮಹತ್ತರವಾದ ವಿಶೇಷಗಳನ್ನ ನೋಡಲು ಸಾದ್ಯವೇ ಇರುವುದಿಲ್ಲ. ಈಗ ಪಕ್ಷಗಳು ಬೇರೆ ಬೇರೆಯಾದರೂ ಭ್ರಷ್ಟಾಚಾರ ಎಲ್ಲ ಪಕ್ಷಗಳನ್ನೂ ನಾಯಕರನ್ನೂ ಆವರಿಸಿಕೊಂಡಿದೆ. ಯಾವ ಪಕ್ಷ ತನ್ನನ್ನು ತಾನು ಸ್ವಚ್ಚವಾಗಿಟ್ಟುಕೊಳ್ಳುತ್ತದೆ ಎಂಬುದು ಮುಂದೆ ಗೊತ್ತಾಗಲಿದೆ. ಬಿಜೆಪಿ ಅಣ್ಣಾ ಹೋರಾಟಕ್ಕೆ ಬೆಂಬಲ ನೀಡುತ್ತಿದೆ ಎಂದ ಮಾತ್ರಕ್ಕೆ ಬಿಜೆಪಿಯಲ್ಲಿ ಎಲ್ಲರೂ ಸತ್ಯಸಂಧರಿದ್ದಾರೆ ಎನ್ನಲು ಸಾಧ್ಯವೇ! ಅಥವಾ ಕಾಂಗ್ರೆಸ್ಸ್ ನವರೆಲ್ಲ ಭ್ರಷ್ಟರು ಎಂದು ಅರ್ಥವೇ? ಖಂಡಿತ ಇಲ್ಲ. ಎಲ್ಲಾ ಪಕ್ಷಗಳಲ್ಲೂ ಭ್ರಷ್ಟರಿದ್ದಾರೆ ಹಾಗೇ ಸಭ್ಯರೂ ಇದ್ದಾರೆ. ಹಾಗಾಗಿ ಭ್ರಷ್ಟಾಚಾರವನ್ನು ಹತ್ತಿಕಲು ಯೋಗ್ಯರೆಲ್ಲ ಚಿಂತಿಸಬೇಕಷ್ಟೇ.
ಮನಮೋಹನ್ ಸಿಂಗ್ ನೇತ್ರತ್ವದ ಕೇಂದ್ರ ಸರ್ಕಾರ ಯಾವ ಪುರುಷಾರ್ಥಕ್ಕೆ ಅಣ್ಣಾ ಹಜಾರೆ ಹೋರಾಟವನ್ನು ಪ್ರತಿಷ್ಠೆ ಆಗಿ ಪರಿಗಣಿಸಿತು ಎನ್ನುವುದು ಇನ್ನೂ ನಿಗೂಢ. ಇದರಿಂದ ಕಾಂಗ್ರೆಸ್ಸ್ ನಡವಳಿಕೆಗಳ ಬಗ್ಗೆಯೇ ಅನುಮಾನ ಹುಟ್ಟಿಕೊಂಡಿದ್ದು ನಿಜ. ಈಗ ಕಾಂಗ್ರೆಸ್ಸ್ ಎಡವಿನ ಪರಿಣಾಮವೇ ಬಿಜೆಪಿ ಪಾಲಿಗೆ ವರವಾಗಿದೆ. ಎಬಿವಿಪಿ ಸೇರಿದಂತೆ ಬಿಜೆಪಿ ಬೆಂಬಲಿತ ಸಂಘ ಪರಿವಾರದ ಜನ ಅಣ್ಣಾ ಬೇಡವೆಂದರೂ ಬಿಡದೆ, ಬೀದಿಗಿಳಿಯುವ ಮೂಲಕ ಕಂಡವರ ಮನೆ ಬೆಂಕಿಯಲ್ಲಿ ಮೈ ಕಾಯಿಸಿಕೊಂಡು ಪರಿಸ್ಥಿತಿಯ ಬೇಜಾನ್ ಉಪಯೋಗ ಪಡೆದುಕೊಂಡಿದ್ದು ನಿಜ. ಹಾಗೆಂದ ಮಾತ್ರಕ್ಕೆ ಅಣ್ಣಾ ಹಜಾರೆ ಹೋರಾಟದ ಗೆಲುವು ಬಿಜೆಪಿಯ ಪಾಲಾಗಲು ಸಾಧ್ಯವಿಲ್ಲ. ಜನ ಹಾಗಾಗಲು ಬಿಡಬಾರದು. ಅದೇನಿದ್ದರು ಜನರ ಗೆಲುವು ಮತ್ತು ಸಂವಿಧಾನ ಬಧ್ಧವಾಗಿ ಭಾರತದ ಸಂಸತ್ತು ಕೈಗೊಂಡ ನಿಲುವು. ರಾಜಕೀಯ ಮುತ್ಸದ್ದಿತನದ ಅನಾವರಣಕ್ಕೆ ಅಣ್ಣಾ ಹೋರಾಟ ನಾಂದಿ ಹಾಡಿದ್ದು ಒಂದು ಇಲ್ಲಿನ ವಿಶೇಷ.
ಮುಂದಿನ ಚುನಾವಣೆ ಜನ ಲೋಕಪಾಲ್ ಮಸೂದೆಯ ಮೇಲೆಯೇ ಕೇಂದ್ರಿಕೃತ ಆಗುವ ಸಾಧ್ಯತೆ ಇದೆ. ಇದನ್ನು ಯಾವುದೋ ಪಕ್ಷದ ಚುನಾವಣಾ ವಿಚಾರ ಮಾಡದೆ ರಾಷ್ಟ್ರದ ಅಭಿವೃದ್ದಿಯ ದೃಷ್ಟಿಯಲ್ಲಿ ರಾಜಕೀಯ ಪಕ್ಷಗಳು ವಿಮರ್ಶಿಸಬೇಕಾಗಿದೆ. ಆದ್ದರಿಂದಲೇ ಲೋಕಪಾಲ್ ಬಗ್ಗೆ ಇಡೀ ಸಂಸತ್ತು ಒಕ್ಕೊರಲಿನ ನಿರ್ಧಾರ ಕೈಗೊಳ್ಳುವ ಮೂಲಕ ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಾನಭಿಪ್ರಾಯಕ್ಕೆ ಮನ್ನಣೆ ನೀಡಿದೆ.
ಅಣ್ಣಾ ತಾತ್ಕಾಲಿಕವಾಗಿ ಹೋರಾಟ ನಿಲ್ಲಿಸಿದ್ದಾರೆ. ತಮ್ಮ ಉಪವಾಸ ಸತ್ಯಾಗ್ರಹ ಮುಗಿಸುವಾಗ ದಲಿತ ಹಾಗೂ ಮುಸ್ಲಿಂ ಸಮುದಾಯಕ್ಕೆ ಸೇರಿದ ಇಬ್ಬರು ಪುಟ್ಟ ಬಾಲಕಿಯರ ಕೈಲಿ ಎಳನೀರು ಸ್ವೀಕರಿಸಿ ಗುಟಕರಿಸುವ ಮೂಲಕ ತಾವು ಈ ಮಣ್ಣಿನ ನೊಂದವರ, ದಿನದಲಿತರ ಪರ ಹೋರಾಟಕ್ಕೆ ಬದ್ದ, ನಾನು ಯಾರ ಕೈಗೊಂಬೆಯು ಅಲ್ಲ ಎನ್ನುವುದನ್ನು ತಮ್ಮ ವಿರುದ್ದ ಆರೋಪ ಮಾಡುತ್ತಿದ್ದವರಿಗೆ ಸೂಚ್ಯವಾಗಿ ಹೇಳಿದ್ದಾರೆ. ಈತ ಮುಂದೆ ಸರ್ವಾಧಿಕಾರಿಯಂತೆ ವರ್ತಿಸದೆ, ಕೆಟ್ಟ ರಾಜಕಾರಣಿಗಳನ್ನು ತನ್ನ ಹತ್ತಿರ ಸೇರಿಸದೆ, ದಲಿತರ ಬಡವರ ಪರವಾಗಿ ಕಾಳಜಿಯುತವಾಗಿ ನಡೆದುಕೊಂಡು ಭಾರತೀಯನಾಗಿ ತಮ್ಮ ಜವಾಬ್ದಾರಿಯನ್ನು ತೋರಿಸಿದರೆ ಎಲ್ಲ ಜನ ಸುಮ್ಮನಾಗಬಹುದು. ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮಾತ್ರ ಈ ರೀತಿಯ ವಿದ್ಯಾಮಾನಗಳನ್ನು ನೋಡಲು ಸಾಧ್ಯ. ಈ ಬರಹ ಮುಗಿಸುವ ಮುನ್ನ ಆಸ್ಟ್ರೇಲಿಯ ದ ಒಂದು ಘಟನೆ ನೀವೇ ಓದಿ...
ಇತ್ತೀಚಿಗೆ ಆಸ್ಟ್ರೇಲಿಯಾದಲ್ಲಿರುವ ಗೆಳೆಯರೊಬ್ಬರು ಹೇಳಿದ ಘಟನೆ ನೆನಪಿಗೆ ಬರುತ್ತೆ. ಭಾರತದಿಂದ ಬಂದಿದ್ದ ಸ್ನೇಹಿತರನ್ನು ಸಿಡ್ನಿ ನಗರದರ್ಶಕ್ಕೆ ಕರೆದುಕೊಂಡು ಹೋಗುವಾಗ ಒಂದು ಐಸ್ ಕ್ರೀಂ ಅಂಗಡಿ ಮುಂದೆ ನಿಲ್ಲಿಸಿ ಅಲ್ಲೇ ಐಸ್ ಕ್ರೀಂ ಮಾರುತ್ತಿದ್ದ ವ್ಯಕ್ತಿಯೊಬ್ಬನನ್ನು ತೋರಿಸಿ ಈತ ಆಸ್ಟ್ರೇಲಿಯಾದ ಮಾಜಿ ಸಚಿವ ಎಂದು ತೋರಿಸಿದಾಗ ಎಲ್ಲರಿಗೂ ಅಚ್ಚರಿ! ಸಚಿವನೊಬ್ಬ ಐಸ್ ಕ್ರೀಂ ಮಾರುವುದಾ?! ಭಾರತದವರ ಪಾಲಿಗೆ ಇದು ನಂಬಲಸಾಧ್ಯ! ಅದಕ್ಕೆ ಕಾರಣ ಕೇಳಿ...ಆ ಮಾಜಿ ಸಚಿವ, ತಾನು ಸಚಿವ ಆಗಿದ್ದಾಗ ವಿಮಾನ ಪ್ರಯಾಣ ಮಾಡುವಾಗ ತನ್ನ ಪತ್ನಿ ಹಾಗೂ ಮಕ್ಕಳನ್ನ ಅದೇ ವಿಮಾನದಲ್ಲಿ ಕರೆದುಕೊಂಡು ಓಡಾಡಿದ್ದರು. ಅದಕ್ಕೆ ಸರ್ಕಾರದ ದುಡ್ಡು ತುಂಬಲಾಗಿತ್ತು. ಈ ತಪ್ಪಿಗೆ ಅವನ ಸಚಿವ ಸ್ಥಾನ ತಪ್ಪಿತ್ತು ಮತ್ತು ಪಕ್ಷದಿಂದಲೂ ಅಮಾನತ್ತಾಗಿತ್ತು. ಇಷ್ಟಲ್ಲದೆ ಶಿಕ್ಷೆಯನ್ನೂ ವಿಧಿಸಿ ಆತನ ಪತ್ನಿ ಮಕ್ಕಳ ಪ್ರಯಾಣದ ಹಣವನ್ನ ವಸೂಲಿ ಮಾಡಲಾಗಿತ್ತು! ಅದೊಂದು ತಪ್ಪಿಗೆ ಆತ ಐಸ್ ಕ್ರೀಂ ಮಾರುವ ಬದುಕನ್ನ ಕಂಡುಕೊಳ್ಳುವ ಪರಿಸ್ಥಿತಿಗೆ ಬರಬೇಕಾಗಿತ್ತು. ಆದರೆ ನಮ್ಮ ಭಾರತದಲ್ಲಿ? ಅದಕ್ಕೇ ನಮಗೀಗ ಒಂದು ಬಲಿಷ್ಠ ವ್ಯವಸ್ಥೆ ಬೇಕಾಗಿದೆ. ಜನ ಅಪಸ್ವರ ಬಿಟ್ಟು ಯೋಚಿಸಬೇಕಿದೆ.