ಅವು ಎಲ್ಲಿ ಹೋಗಬೇಕು?
ರೂಪಾ ಹಾಸನ
ನಾವು ಮನೆ ಕಟ್ಟಲು ಕೊಂಡ ಸೈಟಿನಲ್ಲಿ ಮೊದಲಿಗೆ ಗಿಡ-ಮರ, ಬಳ್ಳಿ-ಪೊದೆಗಳು ತುಂಬಿತ್ತು. ಅದರಲ್ಲಿ ಅದೆಷ್ಟು ಜಾತಿಯ ಹಕ್ಕಿ-ಕೀಟ, ಹುಳು-ಹುಪ್ಪಟೆಗಳು ವಾಸವಾಗಿದ್ದವೋ! ಆ ಹಸಿರು ರಾಶಿಯನ್ನು ಕಡಿದು ಸಪಾಟಾಗಿಸಿ ನಾವು ಮನೆ ಕಟ್ಟಿಕೊಂಡು ವಾಸಕ್ಕೆ ಬಂದಾಗಲೇ ಅವುಗಳ ಜಾಗವನ್ನು ನಾವು ಆಕ್ರಮಿಸಿಕೊಂಡಿರುವ ಅರಿವಾಗಿದ್ದು. ಮೊದ ಮೊದಲು ಸೊಳ್ಳೆಗಳಂತೂ ಯುದ್ಧಕ್ಕೆ ನಿಂತ ಸೈನಿಕರಂತೆ ದಾಳಿ ಇಡುತ್ತಿದ್ದವು. ಇದರೊಂದಿಗೆ ಇರುವೆ, ಗೊದ್ದ, ನೆಂಟರಹುಳ, ಮಿಡತೆ, ನೊಣ, ಕಣಜ, ಕುದುರೆಹುಳ..... ನಾನು ನೋಡಿಯೇ ಇರದ, ಹೆಸರೂ ಗೊತ್ತಿರದ ಪುಟ್ಟಪುಟ್ಟ ಕೀಟ, ಹುಳು, ಹುಪ್ಪಟೆಗಳು ಕಿಟಕಿಯೊಳಗಿಂದ ನಮ್ಮ ಮನೆಯನ್ನು ಪ್ರವೇಶಿಸಿ, ಮತ್ತೆ ಹೊರಹೋಗಲು ತಿಳಿಯದೇ ನಮ್ಮನ್ನು ಗೋಳುಗುಟ್ಟಿಸಿ, ನಾವು ರಾತ್ರಿ ಕಿಟಕಿ ಬಾಗಿಲು ಹಾಕಿದ ನಂತರ ಅದರ ಗಾಜಿಗೆ ಬಡಿದು ಬಡಿದು ಬೆಳಗಾಗುವಷ್ಟರಲ್ಲಿ ಸತ್ತು ಬಿದ್ದಿರುತ್ತಿದ್ದವು. ಪ್ರತಿ ಕಿಟಕಿಯ ಗೋಡೆಯ ಚೌಕಟ್ಟಿನಲ್ಲಿ ಬಿದ್ದ ಈ ಹೆಣಗಳ ರಾಶಿಯನ್ನು ದಿನ ಬೆಳಗ್ಗೆ ಗೊಣಗುತ್ತಾ ಗುಡಿಸಿ ತೆಗೆಯುವುದೇ ಒಂದು ಕೆಲಸ.
ಚೆಂದ ಚೆಂದದ ಚಿಟ್ಟೆ, ಪತಂಗ, ಏರೋಪ್ಲೇನ್ ಚಿಟ್ಟೆ, ಬಣ್ಣಬಣ್ಣದ ಪುಟ್ಟ ಹಕ್ಕಿಗಳೂ ದಿಕ್ಕು ತಪ್ಪಿ ನಮ್ಮ ಮನೆಗೆ ಬರುತ್ತಲೇ ಇದ್ದವು. ಎಷ್ಟೋ ಬಾರಿ ಹೊರಗೆ ಹೋಗಲು ತಿಳಿಯದೇ ಮನೆಯಲ್ಲೇ ಸುತ್ತಿ ಸುತ್ತಿ ಸತ್ತು ಬೀಳುತ್ತಿದ್ದುದೂ ಉಂಟು. ಪ್ರತಿ ಬಾರಿ ಈ ಜಾಗದ ಮರದಲ್ಲೆಲ್ಲೋ ತನ್ನ ಗೂಡು ಕಟ್ಟಿ ರೂಢಿಯಾಗಿದ್ದ ಗೀಜಗಗಳು, ನಮ್ಮ ಮನೆಯೊಳಗೆ ಹುಲ್ಲಿನ ಎಸಳು, ಎಲೆ, ನಾರು, ಹತ್ತಿಯನ್ನೆಲ್ಲಾ ತಂದು ಹಾಕಿ ಹೋಗುವುದು, ಮತ್ತೆ ಬಂದಾಗ ಅದನ್ನೆಲ್ಲಾ ಹುಡುಕುವುದು, ಜೋಡಿಸಿಡುವುದು ಮಾಡುತ್ತಿದ್ದವು.
ಒಮ್ಮೊಮ್ಮೆ ಮನೆಯೊಳಗೆ ಬಂದ ಗೀಜಗಗಳಿಗೆ ಹೊರಗೆ ಹೋಗುವುದು ತಿಳಿಯದೇ 'ಎಲ್ಲೋ ಬಂದು ಸೇರಿಕೊಂಡುಬಿಟ್ಟಿದ್ದೀನಿ' ಅಂತ ಗಲಿಬಿಲಿಯಾಗಿ, ದಿಗಿಲಿನಿಂದ ಕೂಗಾಡುತ್ತ ಫ್ಯಾನು, ಅಟ್ಟ, ಪುಸ್ತಕಗಳ ಮಧ್ಯೆ ಸೇರಿಕೊಂಡು ಆತಂಕಪಡ್ತಿತ್ತು. ಅದರ ಗಾಬರಿ ನೋಡಿ ನಮಗೂ, ಪಾಪ! ಅವುಗಳನ್ನ ಹೊರಗೆ ಕಳಿಸಿದ್ರೆ ಸಾಕಪ್ಪ ಅನ್ನಿಸಿಬಿಡುತ್ತಿತ್ತು. ಅದನ್ನು ಹುಷಾರಾಗಿ ಹೊರಗೆ ಕಳಿಸುವ, ಜೊತೆಗೆ ಅವು ಹಾರಾಡುವ ರಭಸದಲ್ಲಿ ನಮಗೆಲ್ಲಿ ಬಡಿದುಬಿಡುತ್ತವೋ ಎಂಬ ಕಳವಳ ನಮ್ಮದು. ನಮ್ಮನ್ನು ನೋಡಿ ಮತ್ತಷ್ಟು ದಿಗಿಲಾಗಿ ಗೋಡೆಯಿಂದ ಗೋಡೆಗೆ ಬಡಿದುಕೊಂಡು ಹೊರಗೆ ಹೋಗಲಾಗದ ಆತಂಕ ಗೀಜಗಗಳದು.
ಇಂತಹ ಘರ್ಷಣೆಗಳು ಹಲವು ಬಾರಿ ಆಯ್ತು. ಆಮೇಲಾಮೇಲೆ 'ಇದು ಮನುಷ್ಯರ ಮನೆ, ತನ್ನ ಗೂಡು ಕಟ್ಟೋದಿಕ್ಕೆ ಸುರಕ್ಷಿತ ಜಾಗ ಅಲ್ಲ' ಅಂತ ಅವಕ್ಕೆ ಗೊತ್ತಾಗಿ ಹೋಗಿರ್ಬೇಕು, ಮತ್ತೆ ಬರೋದನ್ನೇ ನಿಲ್ಲಿಸಿಬಿಟ್ಟವು! ಹೀಗೆ ಅದೆಷ್ಟು ಹಕ್ಕಿಗಳ ವಾಸ ಸ್ಥಾನವನ್ನು ನಮ್ಮ ಮನೆ ಕಬಳಿಸಿತ್ತೋ ಗೊತ್ತಿಲ್ಲ.
ಮನೆಗೆ ಬಂದ ಹೊಸದರಲ್ಲಿ ನಮ್ಮ ಮನೆಯ ಕಾಂಪೌಂಡ್ ಗೇಟಿಗೆ ಒಂದು ಪೋಸ್ಟ್ ಬಾಕ್ಸ್ ಸಿಕ್ಕಿಸಿದ್ದೆವು. ಅದರಲ್ಲಿ ಪತ್ರಗಳನ್ನ ಹಾಕುವುದಕ್ಕೆ ಆಗುವುದಿಲ್ಲ ಎಂದು ಪೋಸ್ಟ್ಮನ್ ಅದನ್ನು ಉಪಯೋಗಿಸುತ್ತಲೇ ಇರಲಿಲ್ಲ. ಮನೆಯೊಳಗೇ ಹಾಕಿ ಹೋಗ್ತಿದ್ದ. ಹಲವು ದಿನ ಬಿಟ್ಟು ಅದರಲ್ಲಿ ಕೆಲವು ಪತ್ರಗಳಿರೋದನ್ನ ಅದರ ಗಾಜಿನಿಂದ ನೋಡಿದ ನಾನು ದಿಢೀರನೆ ಅದರೊಳಗೆ ಕೈ ಹಾಕಿದೆ. ಆ ಡಬ್ಬಿಯೊಳಗೆ ಕಣಜಗಳು ಗೂಡು ಕಟ್ಟಿದ್ದು ನನಗೆ ತಿಳಿದಿರಲಿಲ್ಲ. ನೆಮ್ಮದಿಯಾಗಿ ಇದ್ದ ಅವುಗಳ ವಾಸಸ್ಥಾನಕ್ಕೆ ನನ್ನ 'ಕೈ'ನ ಅತಿಕ್ರಮಣ ಪ್ರವೇಶವಾದ ಕೂಡಲೇ ಕಣಜಗಳು ನನ್ನ ಕೈ ಮೇಲೆ ಆಕ್ರಮಣ ಮಾಡಿ ಕಚ್ಚಿ ಹಾಕಿದವು! ಕಷ್ಟಪಟ್ಟು ಉಜ್ಜಿ ಅವುಗಳಿಂದ ಬಿಡಿಸಿಕೊಂಡಿದ್ದೆ. ನಾನು ಉಜ್ಜಿದ ರಭಸಕ್ಕೆ ಎಷ್ಟು ಕಣಜಗಳು ಸತ್ತು ಬಿದ್ದವೋ ಗೊತ್ತಿಲ್ಲ. ಆದರೆ ನನ್ನ ಕೈ ಬೆಲೂನಿನಂತೆ ಊದಿಕೊಂಡು, ತೀವ್ರ ನೋವಿನಿಂದ ಹಲವು ರಾತ್ರಿಗಳನ್ನು ನಿದ್ದೆಯಿಲ್ಲದೇ ಕಳೆದೆ.
ಆದರೆ ಆಗಲೇ ನನಗೆ ಇನ್ನೊಂದು ಮಗ್ಗುಲಿನಿಂದ ಯೊಚಿಸಲು ಸಾಧ್ಯವಾಗಿದ್ದು. ನಾವು ಮನುಷ್ಯರು ಮಾತ್ರ ಇಂತಹ ಹಲವು ಪುಟ್ಟ ಜೀವಿಗಳ ಬದುಕುವ ಹಕ್ಕನ್ನು ನಾಶ ಮಾಡಿ ಈ ಪ್ರಪಂಚವೆಲ್ಲಾ ನಮಗಾಗಿಯೇ ಸೃಷ್ಟಿಯಾಗಿದೆ ಎಂದು ಮೆರೆಯುತ್ತಿರುವುದಿರಬೇಕು. ನಮ್ಮಂತೆಯೇ ಪ್ರತಿಯೊಂದು ಜೀವಿಗೂ ಈ ಭೂಮಿ ಮೇಲೆ ನೆಮ್ಮದಿಯಾಗಿ ಬದುಕುವ ಹಕ್ಕಿದೆ ಎಂಬುದು ನಮ್ಮ ಗಮನಕ್ಕೇ ಬಂದಿರುವುದಿಲ್ಲ. ಅದು ನಮಗೆ ಮುಖ್ಯವೂ ಅಲ್ಲ.
'ನಮ್ಮ ಜಾಗದೊಳಗೆ ಈ ಕ್ರಿಮಿ-ಕೀಟಗಳು ಅತಿಕ್ರಮಣ ಪ್ರವೇಶ ಮಾಡಿಬಿಟ್ಟಿವೆ. ನಮಗೆ ನೆಮ್ಮದಿಯಾಗಿ ಬದುಕಲು ಬಿಡುತ್ತಿಲ್ಲ' ಎಂಬುದು ನಮ್ಮ ಆರೋಪ. ಆದರೆ ನಿಜವಾಗಿ ಅವುಗಳ ನೆಮ್ಮದಿಗೆ ನಾವು ಭಂಗ ತಂದಿದ್ದೇವೆ. ಗಿಡ-ಮರ-ಪೊದೆಗಳಲ್ಲಿ ಗೂಡು ಕಟ್ಟಿಕೊಂಡು ಆರಾಮವಾಗಿದ್ದ ಅವುಗಳ ನೆಲೆಗಳನ್ನು ನಾವು ನಾಶ ಮಾಡಿ, ನಮ್ಮ ಊರು, ಮನೆ, ಕಟ್ಟಡ..... ಕಟ್ಟಿಕೊಂಡು, ಅವುಗಳ ಊರು, ಮನೆ, ಕಟ್ಟಡಗಳನ್ನು ನಾವು ಆಕ್ರಮಿಸಿಕೊಂಡಿದ್ದೇವೆ! ಈಗ ಅವುಗಳು ಎಲ್ಲಿಗೆ ಹೋಗಬೇಕು?
ನಿಜ. ಅವುಗಳ ವಾಸಸ್ಥಾನವನ್ನು ನಾಶಗೊಳಿಸಿ, ನಾವು ಆಕ್ರಮಿಸಿಕೊಂಡಿದ್ದಕ್ಕೆ ಅವು ನಮ್ಮ ವಿರುದ್ಧ ನ್ಯಾಯಾಲಯಕ್ಕೆ ಹೋಗಲಾರವು, ನ್ಯಾಯ ಕೇಳಲಾರವು. ಆದರೆ ನಮ್ಮ ಒಂದು ಮನೆ ಕಟ್ಟಲು ಅದೆಷ್ಟು ಪುಟ್ಟ ಜೀವಿಗಳು ತಮ್ಮ ನೆಲೆ ಕಳೆದುಕೊಂಡವೋ, ಬಲಿಯಾದವೋ, ಜೀವ ಕಳೆದುಕೊಂಡವೋ ಲೆಕ್ಕವಿಟ್ಟವರ್ಯಾರು? ಇಲ್ಲಿ ಬಲಾಢ್ಯನಿಗೇ ಚಕ್ರಾಧಿಪತ್ಯ ತಾನೆ? ಆದರೆ ಆ ಪುಟ್ಟ ಜೀವಿಗಳ ಅಸಹಾಯಕತೆ ಮತ್ತೆ ಮತ್ತೆ ಕಾಡುವ ಚಿತ್ರಗಳಾಗಿ ಕಣ್ಮುಂದೆ ಬರುತ್ತಲೇ ಇರುತ್ತದೆ. ನಮ್ಮಿಂದ ಸಾವು-ನೋವಿಗೀಡಾದ ಆ ಮುಗ್ಧ ಜೀವಗಳು, ಅವುಗಳ ಬಂಧುಗಳು ಎಂದಾದರೂ ನಮ್ಮನ್ನು ಕ್ಷಮಿಸುವವೇ? ಪ್ರಶ್ನೆ ಹಾಗೇ ಉಳಿದಿದೆ.
|