ಅಂಗಳ      ಪಂಚವಟಿ
Print this pageAdd to Favorite
 
 
 

 (ಪುಟ ೧೮)

(ಪುಟ )
(ಪುಟ ೧೦)
(ಪುಟ ೧೧)
 (ಪುಟ ೧)  
(ಪುಟ ೧೪)   
(ಪುಟ ೧೫) 
(ಪುಟ ೧೬) 
(ಪುಟ ೧) 
(ಪುಟ ೧)

ಲಾಂಗ್ ಡಿಸ್ಟೆನ್ಸ್ ರಿಲೇಷನ್ಶಿಪ್: ಇದು ನಮ್ಮೂರಿನ ಲಲಿತಮ್ಮ ಆಂಟಿಯದ್ದು.

ಬೇಲಾ ಮರವ೦ತೆ
 
 

’ನಮ್ಮದು ಲಾಂಗ್ ಡಿಸ್ಟನ್ಸ್ ರಿಲೇಷನ್ಶಿಪ್’ ನನ್ನ ಪರಿಚಯದವರು ಎಷ್ಟು ಫ್ಯಾನ್ಸಿಯಾಗಿ ಇದನ್ನು ಬಳಸುತ್ತಾರೆ ಗೊತ್ತಾ? ಅವರು ಅದನ್ನು ಹೇಳುವಾಗ ಅವರ ದನಿಯಲ್ಲಿ ಬೇಜಾರು, ನೋವು, ಅಸಹಾಯಕತೆ ಇರುತ್ತದೋ ಅಥವಾ ಸಧ್ಯ ದೇವರೇ ನನ್ನನ್ನು ಕಾಪಾಡಿದೆ ಎಂಬ ಕೃತಜ್ನತೆ ಇರುತ್ತದೋ ಎಂಬುದನ್ನು ತಿಳಿದುಕೊಳ್ಳಲು ನನಗೆ ಸಿಕ್ಕಾಪಟ್ಟೆ ಕುತೂಹಲ. ನನಗಂತೂ ’ಲಾಂಗ್ ಡಿಸ್ಟನ್ಸ್ ರಿಲೇಷನ್ಶಿಪ್’ ಎನ್ನುವುದು ಡಾಕ್ಟರೇಟ್ ರಿಸರ್ಚ್ ಮಾಡಲು ಸಾಧ್ಯತೆ ಇರುವ ವಿಷಯ ಅನ್ನಿಸುತ್ತದೆ...ಇಲ್ಲಿ ಸಂಬಂಧ ಮುಖ್ಯವೋ, ಅಂತರ ಮುಖ್ಯವೋ ಎಮ್ಭ ಅಂಶ ಬಹಳ ಜಾಳುಜಾಳು. ಅರ್ಥ ಮಾಡಿಕೊಳ್ಳಲು ಹೋದರೆ ಸಂಪೂರ್ಣ ಸಿಗದಷ್ಟು ನುಣುಪು. ಎಲ್ಲವನ್ನೂ ಬರೆಯ ಹೋದರೆ ಇಡೀ ಇತಿಹಾಸ ಜಾಲಾಡಬಹುದು. ರಾಜರುಗಳ ಲಾಂಗ್ ಡಿಸ್ಟನ್ ಸಂಬಂಧ, ಯೋಧರ ಲಾಂಗ್ ಡಿಸ್ಟನ್ಸ್ ಸಂಬಂಧ, ಕೂಲಿ ಕಾರ್ಮಿಕರ ಲಾಂಗ್ ಡಿಸ್ಟನ್ಸ್ ಸಂಬಂಧ....ಓಹ್! ಸಂಬಂಧ ಎನ್ನುವುದನ್ನು ಇಟ್ಟುಕೊಳ್ಳಲು ಅಥವಾ ಬಿಟ್ಟುಬಿಡಲು ಕೊಟ್ಟುಕೊಳ್ಳುವ ಏನೆಲ್ಲಾ ಹಣೆಪಟ್ಟಿಗಳು!

ಒಂದೆರಡು ಉದಾಹರಣೆಗಳನ್ನಿಟುಕೊಳ್ಳುತ್ತಾ ಇದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದೆ... ನಮ್ಮ ಬೀದಿಯಲ್ಲಿದ್ದ ಲಲಿತಮ್ಮ ಆಂಟಿಯವರಿಗೆ ಮೂರು ಜನ ಮಕ್ಕಳು. ಮೊದಲನೆಯ ಮಗ ಬ್ಯಾಂಕ್ನಲ್ಲಿ ಆಗ ಕೆಲಸಕ್ಕೆ ಸೇರಿದ್ದ. ಎರಡನೆಯವನು ಬೆಮೆಲ್ ಗೆ ಹೋಗುತ್ತಿದ್ದ. ಕೊನೆಯವಳು ಫಸ್ಟ್ ಪಿಯುಸಿ ಓದುತ್ತಿದ್ದಳು. ಅವರಿದ್ದ ಮನೆ ಪುಟ್ಟ ಗೂಡಿನಂತಿತ್ತು. ಸಿಕ್ಸ್ಟಿ ಫಾರ್ಟಿ ಸೈಟಿನ ಮೂಲೆಯೊಂದರಲ್ಲಿ ಒಂದೇ ರೂಮು, ಸಣ್ಣದೊಂದು ಬಚ್ಚಲು, ಒಂದು ಅಡಿಗೆ ಕೋಣೆಯಿದ್ದ ಮನೆ. ಉಳಿದ ಜಾಗದಲ್ಲಿ ಇನ್ನೊಂದು ಸಣ್ಣ ಮನೆ ಕಟ್ಟಿಸಿ ಬಾಡಿಗೆ ಕೊಟ್ಟಿದ್ದರು. ಅವರ ಮನೆಯ ಕಕ್ಕಸ್ಸು ಆ ಸೈಟಿನ ಮೂಲೆಯಲ್ಲಿತ್ತು, ಸ್ಪೆಷಲ್ ಜಾಗದಂತೆ. ಅವರ ಮನೆಯಲ್ಲಿ ಯಾರೇ ಕಕ್ಕಸ್ಸಿಗೆ ಹೋದರೂ, ಸಾಲಿನಲ್ಲಿ ನಿಂತರೂ ಅಕ್ಕಪಕ್ಕದ ಮನೆಯವರಿಗೆಲ್ಲಾ ಗೊತ್ತಾಗುತ್ತಿತ್ತು. ಅವರ ಮನೆ ಪಕ್ಕದ ಗಂಗಾಧರ್ ಅಂಕಲ್ ಯಾವಾಗ ಟೈಮ್ ಸಿಕ್ಕರೂ ಲಲಿತಮ್ಮ ಆಂಟಿಯನ್ನೋ ಅವರ ದೊಡ್ಡ ಮಗನನ್ನೋ ನಿಲ್ಲಿಸಿಕೊಂಡು ಮನೆಯಲ್ಲಿ ವಯಸ್ಸಿಗೆ ಬಂದಿರುವ ಮಗಳಿದ್ದಾಳೆ...ಕಕ್ಕಸ್ಸು ಮನೆಯನ್ನು ನಿಮ್ಮ ಮನೆಗೆ ಅಟ್ಯಾಚ್ ಆಗಿ ಕಟ್ಟಿಸಿಕೊಳ್ಳಬಾರದೇ ಎಂದು ತಗಾದೆ ಮಾತು ಶುರು ಮಾಡಿಕೊಳ್ಳುತ್ತಿದ್ದರು. ಲಲಿತಮ್ಮ ಆಂಟಿ ಅವರ ಅತ್ಯಂತ ದಯ ಹುಟ್ಟುವ ಮುಖ ಮಾಡಿಕೊಂಡು ಈ ಸಾರಿ ಏನಾದರೂ ಮಾಡಿಸೋಣಾ ಬಿಡೀಪ್ಪಾ...’ಎನ್ನುವಂತೆ ಸಮಾಧಾನ ಪಡಿಸುವ ಮಾತನಾಡುತ್ತಿದ್ದರು.
 
ಗಂಗಾಧರ್ ಅಂಕಲ್ ಗೆ ಲಲಿತಮ್ಮ ಆಂಟಿಯ ಮಗಳ ಮೇಲೆ ಕನ್ಸರ್ನ್ ಇದೆ ಅಂತೇನೂ ಅಲ್ಲ. ಆ ಕಕ್ಕಸ್ಸು ಮನೆಗಿದ್ದ ಒಂದೇ ಒಂದು ಕಿಂಡಿ ಕಿಟಕಿ ಗಂಗಾಧರ್ ಅಂಕಲ್ ಬೆಡ್ ರೂಮಿನ ಕಡೆ ತೆರೆದಿತ್ತು. ಪಾಪ, ಅವರಿಗೆಷ್ಟು ಕಷ್ಟ ಆಗುತ್ತಿತ್ತೋ...ಆದರೂ ಅವರು ಲಲಿತಮ್ಮ ಆಂಟಿ ಅಥವಾ ಅವರ ಮಕ್ಕಳ ಜೊತೆ ಎಷ್ಟು ಮಾತಾಡಲಾಗುತ್ತೋ ಆಡಿ ಸುಮ್ಮನಾಗುತ್ತಿದ್ದರು. ಲಲಿತಮ್ಮ ಆಂಟಿಯವರ ಪರಿಸ್ಥಿತಿಯಿಂದಲೇನೋ ಅವರೂ ರೋಸಿ ಸುಮ್ಮನಾಗುತ್ತಿದ್ದರು. ಲಲಿತಮ್ಮ ಆಂಟಿಗೊಬ್ಬರು ಗಂಡ ಇದ್ದರು. ಅಪರೂಪದ ಗಂಡ ಬಿಡಿ. ವೆಂಕಟಗಿರಿ ಅಂತ. ಈತ ಭದ್ರಾವತಿಯ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ವರ್ಷಕ್ಕೆ ಮೂರು ನಾಲ್ಕು ಬಾರಿ ಎರಡು ಮೂರು ದಿನಕ್ಕೆ ಬಂದು ಹೋಗಿಬಿಡುತ್ತಿದ್ದರು. ಅದು ಬಿಟ್ಟರೆ ಲಲಿತಮ್ಮ ಆಂಟಿ ಒಂಟಿಯಾಗೇ ತಮ್ಮ ಮನೆ ಮಕ್ಕಳ ಜವಾಬ್ದಾರಿ ವಹಿಸಿಕೊಂಡಿದ್ದರು. ಅವರ ಕುಟುಂಬವನ್ನು ನಾವ್ಯಾರೂ ಒಟ್ಟಾಗಿ ನೋಡಲಾಗುತ್ತಿರಲಿಲ್ಲ. ವೆಂಕಟಗಿರಿ ಊರಿಗೆ ಬಂದಾಗ ಆತ ಒಂಟಿಯಾಗೋ ಅಥವಾ ಮನೆಯವರೊಟ್ಟಿಗೂ ತಮ್ಮ ಹಳ್ಳಿಗೆ ಹೋಗಿ ಬರುತ್ತಿದ್ದುದರಿಂದ ನಮ್ಮ ಕಾಲೋನಿಯವರು ಅವರ ಜೊತೆ ಹೆಚ್ಚು ಒಡನಾಡಿಯೇ ಇರಲಿಲ್ಲ. ಅವರ ಮಕ್ಕಳಿಗೂ ಅಪ್ಪ ಎಂದರೆ ಅಚ್ಚರಿಯ ಅಪರಿಚಿತ. ಆತ ಯಾರ ಜೊತೆಯೂ ಕೂತು ಮಾತಾಡುತ್ತಿರಲಿಲ್ಲವಂತೆ. ಸ್ಕೂಲು ಕಾಲೇಜುಗಳ ವಿಷಯದಲ್ಲಿ ಯಾವ ಸಲಹೆಯನ್ನೂ ಕೊಡುತ್ತಿರಲಿಲ್ಲವಂತೆ. ಕೆಲವೊಮ್ಮೆ ಅವರ ಹೆಸರನ್ನೂ ಮರೆತು ’ಲೋ ಇವನೇ, ಇವಳೇ’ ಅಂತ ಮಾತಾಡಿಸುತ್ತಿದ್ದರಂತೆ! ಲಲಿತಮ್ಮ ಆಂಟಿ ಅಮ್ಮನ ಮಿತ್ರೆ. ಆಗಾಗ ನಮ್ಮ ಮನೆಗೆ ಬಂದು ಕಷ್ಟ ಸುಖ ತೊಡಿಕೊಳ್ಳುತ್ತಿದ್ದರು. ಮಕ್ಕಳ ರಿಸಲ್ಟ್ ನಂತಹ ಚಿಕ್ಕ ಪುಟ್ಟ ವಿಷಯಗಳ ಸುಖ ಬಿಟ್ಟರೆ ಆಂಟಿ ಅಗಾಧ ದುಃಖ ಸಾಗರದಲ್ಲಿ ಮುಳುಗಿರುತ್ತಿದ್ದರು.
 
ಲಲಿತಮ್ಮ ಆಂಟಿಯಾಗಲೀ ಅವರ ಮಕ್ಕಳಾಗಲೀ ಯಾವಾಗಲೂ ಏನೋ ಮೋಡ ಕವಿದಂತಿರುತ್ತಿದ್ದರು. ತನ್ನ ಗಂಡನಿಗೆ ಬೇರೊಂದು ಸಂಬಂಧ ಇದೆ ಎಂದು ಆಕೆ ಬಲವಾಗಿ ನಂಬಿದ್ದರೆನ್ನಿಸುತ್ತದೆ. ನಮ್ಮಮ್ಮನ ಜೊತೆ ಮಾತಾಡುವಾಗ ಇನ್ನೊಂದು ಹೆಂಗಸಿನ ಪ್ರಸ್ತಾಪ ಆಗುತ್ತಿದ್ದುದ್ದನ್ನು ನಾವೂ ಕದ್ದು ಕೇಳಿಸಿಕೊಂಡಿದ್ದೆವು. ಆಂಟಿ ನಮ್ಮ ಕಾಲೋನಿಯವರ ಬ್ಲೌಸು, ಲಂಗ, ಮಕ್ಕಳ ಫ್ರಾಕು ಹೊಲೆಯುವುದು, ಹೆಮ್ಮು, ಫಾಲ್ ಹಾಕುವುದು ಎಲ್ಲಾ ಕೆಲಸ ಮಾಡಿಕೊಡುತ್ತಿದ್ದರು. ಅದು ಅವರ ಉದ್ಯೋಗ. ’ನನಗೇನ್ರೀ ಆಗಿದೆ? ಚಿನ್ನದಂತಾ ಮೂರು ಮಕ್ಕಳಿದ್ದಾರೆ, ಇಲ್ಲಿ ಸ್ವಂತ ಮನೆಯಿದೆ, ಇಲ್ಲೇ ಬಂದು ಕೆಲಸ ಗಿಟ್ಟಿಸಿಕೊಳ್ಳಿ ಅಂತ ಕೇಳಿ ಕೇಳೀ ನನ್ನ ಹೆಣ ಬಿದ್ದುಹೋಗಿದೆ ಕಣ್ರ‍ೀ...ಒಂದ್ಚೂರಾದ್ರೂ ನನ್ ಮಾತು ಕಿವಿಗೆ ಹಾಕೋತಾರಾ ಅಂತೀನಿ...’ ಆಂಟಿ ಎಷ್ಟೋ ಸಾರಿ ಹೇಳಿದ್ದನ್ನು ನಾನು ಕೇಳಿದ್ದೀನಿ. ಲಲಿತಮ್ಮ ಆಂಟಿ ನೋಡಲು ಸಣ್ಣಗೆ ಬೆಳ್ಳಗಿದ್ದರು. ಅವರ ದೇಹವನ್ನು ನೋಡಿದಾಗ ಆಕೆಗೆ ದೊಡ್ಡ ಮೂರು ಮಕ್ಕಳಿದ್ದಾರೆ ಅಂತ ಹೇಳಲಾಗುತ್ತಿರಲಿಲ್ಲ. ತಲೆಯಲ್ಲಿದ್ದ ೫೦-೬೦ ಕೂದಲುಗಳನ್ನು ತುದಿಯವರೆಗೂ ಹೆಣೆದುಕೊಳ್ಳುತ್ತಿದ್ದರು. ಅವರ ಕಪ್ಪು ಇಲಿಬಾಲ ಅವರು ನಡೆಯುವಾಗ ಅವರ ಬಮ್ ಗೆ ತಾಕುತ್ತಾ ಆಕಡೆ ಈ ಕಡೆ ವಾಲಾಡುತ್ತಿರುತ್ತಿತ್ತು. ಆದರೆ ಅವರ ಮುಖ ಮಾತ್ರ ಸುಂಡಿಹೋದಂತಿತ್ತು, ಚಿಂತೆಯ ಬಿಸಿಗೋ ಏನೋ... ಮಗಳು ದೊಡ್ಡವಳಾದಾಗ ಆಂಟಿ ಇನ್ನೂ ಕುಗ್ಗಿಹೋಗಿದ್ದರು. ಅಮ್ಮ-ಅಪ್ಪನ ಹತ್ತಿರ ಬಂದು ಇನ್ನೊಂದೆರಡು ದಿನದಲ್ಲಿ ಊರಿಗೆ ಬರುತ್ತಿರುವ ಅವರ
 
ಗಂಡನನ್ನು ಕಂಡು ಸ್ವಲ್ಪ ಕೂರಿಸಿ ಮಾತಾಡಬಹುದೇ ಅಂತ ಕೇಳಲು ಮನೆಗೆ ಬಂದಿದ್ದರು. ಅಮ್ಮ ಫುಲ್ ಆಂಟಿ ಸಪೋರ್ಟ್. ಆದರೆ ಅಪ್ಪ ಹಿಂದೆ ಮುಂದೆ ನೋಡಿದ್ದರು. ಅಪ್ಪನಿಗೆ ಆತ ಹೇಗೆ, ಸ್ವಭಾವ ಎಂಥದು ಒಂದೂ ಗೊತ್ತಿರಲಿಲ್ಲ. ಅಮ್ಮನ ಮೂಲಕ ಅವರ ಫ್ಯಾಮಿಲಿ ಬಗ್ಗೆ ಸ್ವಲ್ಪ ತಿಳಿದುಕೊಂಡಿದ್ದರು ಅಷ್ಟೇ. ಅವರ ಮಗ ಸುಂದರಣ್ಣ ಆಗಾಗ ಅಪ್ಪನಿಗೆ ಎಲೆಕ್ರ್ಟಿಸಿಟಿ ಬಿಲ್ ಕಟ್ಟಿ ಕೊಡುವುದು ಇತ್ಯಾದಿ ಸಹಾಯ ಮಾಡುತ್ತಿದ್ದ. ನಾವಾಗಿ ನಾವು ಮಾತನಾಡಿಸಹೋಗಿ ಆ ವೆಂಕಟಗಿರಿ ಏನಾದರೂ ನಮ್ಮ ಮೇಲೇ ಎಗರಾಡಿದರೆ ಸುಮ್ಮನೆ ಮರ್ಯಾದೆ ಕಳೆದುಕೊಂಡಂತೆ ಅಂತ ಅಪ್ಪ ಹಿಂಜರಿದಿದ್ದರು. ’ಪರವಾಗಿಲ್ಲ ರೀ ಯಾರ ಮುಂದೆ ಮರ್ಯಾದೆ ಹೋಗುತ್ತೆ? . ’ನೀವು ದೊಡ್ಡ ಮನಸ್ ಮಾಡಿ ರ್ಯಾದೆ ಜವಾಬ್ದಾರಿ ಇಲ್ಲದವರು ಆತ. ಹೇಳೋರು ಕೇಳೋರು ಯಾರೂ ಇಲ್ಲದ ಥರ ನಡೆದುಕೊಳ್ತಿರೋದು ಆತ...ಒಳ್ಳೆ ಕೆಲಸ ಮಾಡ್ತಿರೋ ನಿಮಗ್ಯಾಕೆ ಮರ್ಯಾದೆ ಹೋಗುತ್ತೆ?’ ಅಮ್ಮ ಜೋರು ಮಾಡಿದ್ದರು. ’ನೀವು ದೊಡ್ ಮನಸು ಮಾಡಿ ಒಂದು ಸರಿ ಮಾತಾಡಿ ಏನಾದರೂ ಒಳ್ಳೆಯದಾದರೆ ನಿಮ್ಮ ಮಕ್ಕಳಿಗೇ ಪುಣ್ಯ ಬರುತ್ತೆ...ಒಂದು ಪ್ರಯತ್ನ ಮಾಡಿ ನೋಡಿ’ ಅಂತ ಆಂಟಿಯೂ ಗೋಗರೆದಿದ್ದರು. ನಾವು ಮೂವರು ಮಕ್ಕಳೂ ಮುಂಬರಲಿರುವ ಎಪಿಸೋಡಿಗೆ ಕುತೂಹಲದಿಂದ ಕಾದಿದ್ದೆವು.
ಒಂದು ದಿನ ಅಪ್ಪ ಅಮ್ಮ ಇಬ್ಬರಿಗೂ ಲಲಿತಮ್ಮ ಆಂಟಿ ಬಂದು ಕರೆದು ಹೋದರು. ಅಮ್ಮ ರವೆ ಉಂಡೆ ಮಾಡಿಟ್ಟುಕೊಂಡರು. ಅಪ್ಪ ಇಡೀ ಮನೆಯನ್ನು ಇಪ್ಪತ್ತು ಮೂವತ್ತು ಬಾರಿ ತಿರುಗಿ ಮನಸ್ಸು-ಡೈಲಾಗು ಗಟ್ಟಿ ಮಾಡಿಕೊಂಡರು. ಆಂಟಿಯ ಮಗಳು ಲಕ್ಷ್ಮಿ ಅವತ್ತು ಸಂಜೆ ನಮ್ಮ ಜೊತೆ ಕಾಲ ಕಳೆಯಲು ಮನೆಗೆ ಬಂದಳು. ಹಿಡಿದು ಅಲ್ಲಾಡಿಸಿದರೂ ಐದು ವಾಕ್ಯ ಬಾಯಿಬಿಡದ ಲಕ್ಷ್ಮಿ ಜೊತೆ ನಾವೂ ಏಗಾಡಿದೆವು. ಹೋದ ಒಂದೆ ಗಂಟೆಯಲ್ಲಿ ಅಪ್ಪ ಅಮ್ಮ ವಾಪಸ್ ಬಂದರು. ಅಪ್ಪನಿಗೆ ಕೋಪ ಬಂದಿತ್ತು. ಅಮ್ಮ ಅವರನ್ನು ಸಮಾಧಾನಮಾಡುತ್ತಿದ್ದರು. ಲಕ್ಷ್ಮಿ ಮನೆಗೆ ಹಿಂತಿರುಗಿದಳು. ಇದೇನೋ ಎಡವಟ್ಟಾಗಿದೆ ಅಂತ ಗೊತ್ತಾಗಿ ನಾವು ಮೂವರೂ ಸೈಲೆಂಟಾಗಿ ರೂಮಿನ ಲೈಟು ಆರಿಸಿಕೊಂಡು ಮಲಗಿದೆವು. ನಿದ್ದೆ ಮಾತ್ರ ಮಾಡಲಿಲ್ಲ. ನಮ್ಮ ಕಿವಿಗಳನ್ನು ಹಾಲಿನಲ್ಲಿ ಫಿಕ್ಸ್ ಮಾಡಿ ಬಂದಿದ್ದೆವು! ’ಅದ್ಯಾವ ಸೀಮೇ ಗಂಡಸೇ ಅವನು? ಜವಾಬ್ದಾರಿ ತೆಗೆದುಕೋ ಅಂದರೆ ಯಾರ ಜವಾಬ್ದಾರಿ ಅಂತಾನೆ? ಮನೆಯೊಳಗೆ ಒಂದು ಕಕ್ಕಸ್ಸು ಕಟ್ಟಿಸುವುದಕ್ಕೂ ಯೋಗ್ಯತೆ ಇಲ್ಲದವನು...ಬರುವ ಮನಸ್ಸು ಮಾಡಿದ್ರೆ ನಾನು ನನಗೆ ಗೊತ್ತಿರುವವರಿಗೆ ಹೇಳಿ ಒಂದು ನೌಕರಿಗೆ ವ್ಯವಸ್ತೆ ಮಾಡಬಹುದು ಅಂದರೆ ನೌಕರೀನ ನೀವೇ ಇಟ್ಟುಕೊಳ್ಳಿ ಅಂತಾನೆ...ಅವನಿಗೇ ಹೆಂಡತಿ ಮಕ್ಕಳು ಸಂಸಾರದ ಬಗ್ಗೆ ಆಸಕ್ತಿ ಇಲ್ಲ ಅಂದರೆ ಯಾರು ಏನು ಮಾಡೊಕಾಗುತ್ಯೇ...ನೀನು ಆ ಲಲಿತಮ್ಮನಿಗೆ ಹೇಳು. ಸುಮ್ಮನೆ ಈಗ ಹೇಗಿದೆಯೋ ಹಾಗೇ ಸಂಭಾಳಿಸಿಕೋ ಅಂತ. ತಲೆ ಕೆಟ್ಟರೆ ಆ ಮನುಷ್ಯ ಇವರಿಗೆ ದುಡ್ಡು ಕಳಿಸುವುದನ್ನೂ ನಿಲ್ಲಿಸಿಬಿಟ್ಟಾನು...’ ಅಂತ ಅಮ್ಮನಿಗೆ ಕ್ಲಾಸು ತೆಗೆದುಕೊಂಡಿದ್ದರು.

ಗಂಡ ಹಿಂತಿರುಗುದ ಮೇಲೆ ಆಂಟಿ ಬಂದು ಅಪ್ಪನಲ್ಲಿ ಕ್ಷಮೆ ಕೇಳಿದ್ದರು. ಪ್ರತೀ ತಿಂಗಳೂ ಇನ್ನಷ್ಟು ಹೆಚ್ಚು ದುಡ್ಡು ಕಳಿಸುವುದಾಗೂ ವಾಪಸ್ ಬಾ ಅಂತ ತನ್ನ ತಲೆ ತಿನ್ನಬಾರದೆಂದೂ ವೆಂಕಟಗಿರಿ ಅವರಿಗೆ ಕಟ್ಟುನಿಟ್ಟಾಗಿ ಆರ್ಡರ್ ಮಾಡಿದ್ದರು. ಆಂಟಿಯ ಒಟ್ಟಿಗೆ, ಒಂದು ಸಂಸಾರವಾಗಿ ಬಾಳುವ ಕನಸು ಪುಡಿಯಾಗಿತ್ತು. ಅವರ ಗೋಳನ್ನು ಅಮ್ಮ ಸಂತೈಸಿದ್ದರು. ಇಲ್ಲಿ ಏನೋ ನಡೀತಿದೆ ಎಂದು ಗಮನಿಸಿದ್ದ ಗಂಗಾಧರ್ ಅಂಕಲ್ ಅಪ್ಪನ ಜೊತೆ ಮಾತಾಡಿ ಲಲಿತಮ್ಮ-ಅವರ ಗಂಡನ ವಿಷಯ ತಿಳಿದುಕೊಂಡು ಕಕ್ಕಸ್ ವಾಸನೆ ರಹಿತ ದಿನ-ರಾತ್ರಿಗಳು ಇನ್ನು ಕನಸಿನಲ್ಲಿ ಮಾತ್ರ ಎಂದು ಅತ್ಯಂತ ನಿರಾಶರಾಗಿ, ಅಪ್ಪನೆದುರು ಕೂತು ವೆಂಕಟಗಿರಿಯನ್ನು ಮನಸೋ ಇಚ್ಛೆ ಬೈದಾಡುವುದರ ಮೂಲಕ ನಿರಾಶೆ ಕಡಿಮೆ ಮಾಡಿಕೊಂಡಿದ್ದರು. ಆ ವ್ಯಕ್ತಿ ತನ್ನ ಮಾತನ್ನು ಪರಿಗಣಿಸದೇ ಒರಟಾಗಿ ವರ್ತಿಸಿದ್ದಕ್ಕೆ ಅಪ್ಪನಿಗೂ ಅವಮಾನವಾದಂತಾಗಿತ್ತೇನೋ. ಗಂಗಾಧರ್ ಅಂಕಲ್ ಹುಚ್ಚಾಪಟ್ಟೆ ಬೈಯ್ಯುತ್ತಿದ್ದಾಗ ನನ್ನ ಪರವಾಗೂ ಒಂದು ಚೂರು ಬೈದುಕೊಳ್ಳಿ ಎಂಬಂತೆ ಒಪ್ಪಿಗೆಯಿಂದ ತಲೆ ತೂಗಿಸಿದ್ದರು.
 
ಇದು ನಾನು ನಮ್ಮೂರಲ್ಲಿ ಕಂಡಿದ್ದ ನನ್ನ ಹಿಂದಿನ ಜನರೇಷನ್ನಿನ ಒಂದು ’ಲಾಂಗ್ ಡಿಸ್ಟನ್ಸ್’ ಸಂಬಂಧ. ಅಲ್ಲಿ ಮನಸ್ಸುಗಳ ನಡುವಿನ, ದೇಹಗಳ ನಡುವಿನ ಅಗಾಧವಾದ ಲಾಂಗ್ ಡಿಸ್ಟನ್ಸ್ ಇತ್ತು. ಅಂಡಾಣು-ಬೀಜಗಳ ಕ್ಯಾಶುಅಲ್ ಕೂಡುವಿಕೆಯಿಂದ ಹುಟ್ಟಿದ್ದ (ಯಾಕೆ ಹುಟ್ಟಿದೆವಪ್ಪಾ ಎಂದು ಸದಾ ಕೇಳಿಕೊಳ್ಳುತ್ತಿದ್ದ, ಕನ್ಫ್ಯೂಸ್ ಆಗಿದ್ದ) ಮೂರು ಮಕ್ಕಳನ್ನು ಬಿಟ್ಟರೆ ಬೇರ್ಯಾವ ’ಸಂಬಂಧ’ ಇರಲಿಲ್ಲ. ಆಗ ಅಂಥ ಪರಿಸ್ಥಿತಿಗೆ ಈಗಿನ ಹೆಸರೂ ಇರಲಿಲ್ಲ. ಬಹುಷಃ ಆಗ ಈ ’ಲಾಂಗ್ ಡಿಸ್ಟನ್ಸ್ ಸಂಬಂಧಗಳು’ ಕೆಲಸದ, ಹಣಕಾಸಿನ ಅನಿವಾರ್ಯತೆಯಿಂದ ಶುರು ಆಗಿತ್ತೆನಿಸುತ್ತದೆ. ಮದುವೆಯಾದ ತಕ್ಷಣ ಸಾಲಾಗಿ ಹುಟ್ಟಿಸಿದ ಮೂರು ಮಕ್ಕಳು, ಅವುಗಳ ಊಟ ಬಟ್ಟೆಗಳ ಅಗತ್ಯಕ್ಕೆ ಎಲ್ಲೋ ಸಿಕ್ಕಿದ ಕೆಲಸ ಹಿಡಿದು ಹೊರಟ, ಸಂಸಾರ ಸಾಕುವ ’ಅಪ್ಪ’ ಎನ್ನುವವ ಅಲ್ಲಿ ದಿನಾ ದುಡಿದು ಹೆಂಡತಿ ಮಕ್ಕಳಿಗೆ ಹಣ ಕಳಿಸುತ್ತಾನೆ. ಅವರಿಗಾಗೇ ಎಲ್ಲವನ್ನೂ ಮಾಡುತ್ತಿದ್ದೇನೆ ಎಂದುಕೊಳ್ಳುತ್ತಾನೆ. ತಾನು ಮಾಡುತ್ತಿರುವುದು ಮಹಾನ್ ತ್ಯಾಗದ ಕೆಲಸ ಎನ್ನಿಸಲೂಬಹುದು. ದುಡಿಯುವ ಅವನ ದೇಹ ಊಟವನ್ನು ಮಾತ್ರ ಕೇಳಿ ಸುಮ್ಮನಿರದೆ ಇತರೆ ಅಗತ್ಯಗಳನ್ನೂ ಪೂರೈಸು ಎಂದು ಪೀಡಿಸುತ್ತದೆ. ಆಗ ಅವನು ಮತ್ತೆ ತನ್ನ ಕುಟುಂಬದ ಹತ್ತಿರಕ್ಕೆ ಅಥವಾ ಸಂಗಾತಿಯ ಹತ್ತಿರಕ್ಕೆ ಬರದೆ ಹತ್ತಿರದಲ್ಲೇ ಹೇಗೋ ಹಸಿವೆಯನ್ನು ಪೂರೈಸುವ ಮಾರ್ಗ ಹುಡುಕಿಕೊಳ್ಳುತ್ತಾನೆ. (ಆಗ ಹೆಂಡತಿಯೊಂದಿಗಿನ ಸಂಬಂಧ ಅಕ್ಷರಶಃ ತುಂಡಾಗುತ್ತದೆ). ತಕ್ಷಣಕ್ಕೆ ಸಿಗುವ, ದೇಹದ ಹತ್ತಿರದಲ್ಲಿರುವ, ಚಟವಾಗಿ ಶುರುವಾದ ಯಾವುದೋ ಒಂದು ಸಂಬಂಧ ಪರ್ಮನೆಂಟ್ ಆಗುತ್ತದೆ. ಹೆಂಡತಿ ಮಕ್ಕಳೆಂಬ ಅನವಶ್ಯಕ ಕೊಕ್ಕೆಗಳು ಎಲ್ಲಿವೆಯೋ ಅಲ್ಲೇ ಇದ್ದರೆ ಒಳ್ಳೆಯದು ಎಂಬ ತೀರ್ಮಾನಕ್ಕೆ ಮನಸ್ಸು ಬರುತ್ತದೆ. ಕೆಲವೊಮ್ಮೆ ಗಂಡ ಹೆಂಡತಿಗಳು ಬೇರೆ ಬೇರೆಯಾಗಿ ತಮ್ಮ ಮಾರ್ಗ-ಸಂಗಾತಿ ಹಿಡುಕಿಕೊಂಡು ’ಲಾಂಗ್ ಡಿಸ್ಟನ್ಸ್’ ಅಲ್ಲದ ಸಂಬಂಧ ಕಟ್ಟಿಕೊಳ್ಳಲು ಪ್ರಯತ್ನಿಸುತ್ತಾರೆ. ಸುಲಭವಾಗಿ ಹಾಗೆ ಮಾಡಲಾಗದ ಸಮಾಜದಲ್ಲಿರುವವರು ’ಲಾಂಗ್’ ಅನ್ನು ಎಷ್ಟು ಹಿಗ್ಗಾಡಿ ಎಳೆಯಲಾಗುತ್ತದೋ ಎಳೆದು ಅದೇ ತುಂಡಾಗುವವರೆಗೂ ಆಟವಾಡಿ ಸುಮ್ಮನಾಗುತ್ತಾರೆ. ಇಲ್ಲವೇ ಆ ಮಧ್ಯದ ’ಅಂತರ’ ಬೇಡವೇ ಬೇಡವೆಂದು ಎಲ್ಲ ಅಂತರವನ್ನೂ ಬಿಟ್ಟು ಒಟ್ಟಾಗಿಯೇ ಬದುಕು ಸೆಣೆಸುವ ಪ್ರಯತ್ನ ಮಾಡುತ್ತಾರೆ.  
 
 
(ಮುಂದುವರಿಯುವುದು)  
 
 
 
 
 
 
Copyright © 2011 Neemgrove Media
All Rights Reserved