ಮುಂದಿನಬಾರಿ ಬ್ರೆಡ್ ಅಥವಾ ಬನ್ ಗಳನ್ನು ಕೊಳ್ಳಲು ಸೂಪರ್ ಮಾರ್ಕೆಟ್ ಗಳಿಗೆ ಹೋದಾಗ ಅದರ ಲೇಬಲ್ ಓದಿ. ಅರ್ಥವಾಗುವ ಐದು ಸಾಮಗ್ರಿಗಳ ಜೊತೆ ಅರ್ಥವಾಗದಿರುವ ಹತ್ತು ಸಾಮಗ್ರಿಗಳ ಪಟ್ಟಿ ಇರುತ್ತದೆ. ಅಲ್ಲಿ ಎಲ್-ಸಿಸ್ಟೈನ್ ಎಂಬ ಪುಟ್ಟ ಸಾಮಗ್ರಿಯೊಂದಿರುತ್ತದೆ. ಬ್ರೆಡ್ ಮಾಡುವ ಹಿಟ್ಟನ್ನು ಮೃದುಗೊಳಿಸಲು ಅದಕ್ಕೆ ಸೇರಿಸುವ ಒಂದು ಬಗೆಯ ಅಮೈನೋ ಆಮ್ಲ ಇದು. ಇದನ್ನು ಸೇರಿಸುವುದರಿಂದ ಬ್ರೆಡ್ ಬೇಗ ಮೃದುವಾಗಿ ಬೇಯುವುದರ ಜೊತೆಗೆ ಸಾರಾ ಸಗಟಾಗಿ ಬ್ರೆಡ್ ಉತ್ಪಾದನೆ ಮಾಡುವ ಕಾರ್ಖಾನೆಗಳ ಕೆಲಸವೂ ತ್ವರಿತವಾಗಿ ನಡೆಯುತ್ತದೆ.
ಈ ಎಲ್-ಸಿಸ್ಟೈನ್ ಅನ್ನು ಪ್ರಯೋಗ ಶಾಲೆಗಳಲ್ಲಿ ತಯಾರು ಮಾಡಬಹುದು. ಹಾಗೆ ಮಾಡಲು ಖರ್ಚು ಜಾಸ್ತಿ. ಆದರೆ ಈ ಆಮ್ಲ ಸುಲಭವಾಗಿ ಅತ್ಯಂತ ಕಡಿಮೆ ದರದಲ್ಲಿ ಸಿಗುವುದು ಮನುಷ್ಯರ ಕೂದಲಲ್ಲಿ! ಮನುಷ್ಯರ ಕೂದಲನ್ನು ಆಮ್ಲದಲ್ಲಿ ಕರಗಿಸಿ ಆಗ ಉತ್ಪತ್ತಿಯಾಗುವ ಹಲವಾರು ಇತರೆ ಆಮ್ಲಗಳಲ್ಲಿ ಎಲ್-ಸಿಸ್ಟೈನ್ ಅನ್ನು ರಾಸಾಯನಿಕವಾಗಿ ಪ್ರತ್ಯೇಕಿಸುವುದು ಬಹಳ ಸುಲಭವಂತೆ. ಅಮೆರಿಕಾಗೆ ಕೂದಲಿನ ಮೂಲದಿಂದ ಬರುವ ಎಲ್-ಸಿಸ್ಟೈನ್ ಹೆಚ್ಚು ಪಾಲು ಚೈನಾ ಮತ್ತು ಭಾರತದ ಜನರ ಕೂದಲಿನಿಂದ ತಯಾರಾಗುವಂಥದ್ದಂತೆ!
ಧಾರ್ಮಿಕ ಕಾರಣಗಳಿಗಾಗಿ ದೇವಾಲಯಗಳಲ್ಲಿ ಕೂದಲು ತೆಗೆಸುವ ಭಾರತೀಯ ಕೂದಲುಗಳಿಂದ ಪಡೆಯುವ ಎಲ್-ಸಿಸ್ಟೈನ್ ಬಗ್ಗೆ ಯಹೂದಿಗಳು ವಿರೋಧ ವ್ಯಕ್ತಪಡಿಸಿದ್ದಾರಂತೆ. ಹಾಗಾಗಿ ಭಾರತೀಯರ ತಲೆಕೂದಲನ್ನು (ಕರಗಿಸಿ) ತಿನ್ನುವುದಕ್ಕಿಂತ ಚೈನೀ ಕೂದಲು ಬೆಟರ್ ಎನ್ನುತ್ತಾರಾ? ಇಲ್ಲ. ಚೈನಾ ದೇಶದವರು ಮೃತರ ಕೂದಲನ್ನೂ ತೆಗೆದು ಎಲ್-ಸಿಸ್ಟೈನ್ ತಯಾರಿಕೆಗೆ ಬಳಸಿಕೊಳ್ಳುವುದರ ಬಗ್ಗೆ ಈಗ ಗುಮಾನಿಗಳೆದ್ದಿವೆ!
ಪ್ಲೀಸ್ ಬ್ರೆಡ್ ಕೊಳ್ಳುವ ಮುಂಚೆ ಒಮ್ಮೆ ಲೇಬಲ್ ನೋಡಿಬಿಡಿ...