ಸೋಮಾಲಿಯಾದ ಬರ ವಿಶ್ವ ಕಂಡಿರುವ ಅತ್ಯಂತ ದಾರುಣ ಬರ ಪರಿಸ್ಥಿತಿ ಎಂದು ಕಡೆಗೂ ಯು ಎನ್ ಘೋಷಿಸಿದೆ!! ಸೋಮಾಲಿಯಾದ ಬರ ಈ ಎರಡು ತಿಂಗಳಿಂದ ಮಾತ್ರ ಆಯಿತಾ? ಇಲ್ಲ. ವರ್ಷಗಳಿಂದ ಜನಾಂಗೀಯ ಯುದ್ಧ, ಧರ್ಮಾಂಧರ ಅಟ್ಟಹಾಸ ನಡೆಯುತ್ತಲೇ ಇದೆ. ಆದರೆ ಯುಧ್ಧಗಳು,
ಪೆಟ್ರೋಲ್ ವ್ಯಾಪಾರ, ಲಿಬಿಯಾದ ಗಡಾಫಿ, ಮಧ್ಯ ಪ್ರಾಚ್ಯ ದೇಶಗಳ ಕ್ರಾಂತಿ ಇತ್ಯಾದಿಗಳನ್ನು ಗಮನಿಸುವುದರಲ್ಲೇ ಕಳೆದು ಹೋಗಿದ್ದ ಅಂತರರಾಷ್ಟ್ರೀಯ ಸಂಘ ಸಂಸ್ಥೆಗಳು ಈಗಲಾದರೂ ಸೋಮಾಲಿಯಾ ಮೇಲೆ ತಮ್ಮ ತುರ್ತು ಗಮನ ಹರಿಸಿವೆ.
ಹಲವಾರು ವರ್ಷಗಳಿಂದಲೂ ಸೋಮಾಲಿಯ ಬರದ ಬಿಸಿಯಲ್ಲಿ ಬೇಯುತ್ತಿತ್ತು. ಮುನಿಸಿಕೊಂಡಿರುವ ಮಳೆಯಿಂದ ಸೋಮಾಲಿಯಾದ ರೈತರು ಕಂಗೆಟ್ಟಿದ್ದರು. ತಮ್ಮನ್ನು ಸಾಕಿದವರನ್ನು ಸಲಹುತಿದ್ದ ಸೋಮಾಲಿಯಾದ ಜಾನುವಾರಗಳು
ಸತ್ತು ಬಿದ್ದಿದ್ದವು. ಕುಡಿಯುವ ನೀರಿಲ್ಲದೆ, ಆಹಾರವಿಲ್ಲದೆ ಜನ ಪ್ರತಿ ದಿನವೂ ಹೋರಾಡುತ್ತಿದ್ದರು. ಆದರೆ ಈಗ ಪರಿಸ್ಥಿತಿ ನಿಯಂತ್ರಣ, ಊಹೆಯನ್ನೂ ಮೀರಿದೆ. ಒಂದು ಮುಷ್ಠಿ ಆಹಾರಕ್ಕಾಗಿ ತಿಂಗಳುಗಟ್ಟಲೆ ಕಾಲುನಡಿಗೆಯಲ್ಲಿ ಇಥಿಯೋಪಿಯಾ ಇನ್ನಿತರ ದೇಶಗಳಿಗೆ ಗುಳೆ ಎದ್ದಿರುವ ಸಾವಿರಾರೂ ನಿರ್ಗತಿಕ ಬಟ್ಟ ಬಡ ಸೋಮಾಲಿಯನ್ನರು ಹಸಿವೆ ಕಾಯಿಲೆಗಳಿಂದ ತರಗೆಲೆಗಳಂತೆ ಉದುರುತ್ತಿದ್ದಾರೆ. ಸಾಯುತ್ತಿರುವ ಮಕ್ಕಳು ಮರಿಗಳಿಗೆ ಲೆಕ್ಕವೇ ಇಲ್ಲ.
ಕೆನ್ಯಾ, ಇಥಿಯೋಪಿಯಾದ ಗಡಿಗಳಲ್ಲಿ ನಿರ್ಮಾಣವಾಗುತ್ತಿರುವ ತುರ್ತು ಕ್ಯಾಂಪ್ ಗಳಿಗೆ ಆಹಾರ-ಔಷಧಿ ಸಂಪನ್ಮೂಲಗಳನ್ನು ಸ್ವಲ್ಪ ಸ್ವಲ್ಪವಾದರೂ ತಲುಪಿಸುವ ಕೆಲಸ ಮಾಡುತ್ತಿದೆ. ಸೀರೆಗಳಿಂದ ಕಟ್ಟಲಾಗಿರುವ ಈ ಮರುಭೂಮಿಯಲ್ಲಿ ಸೀರೆ, ಇತರೆ ವಸ್ತ್ರಗಳಿಂದ ಕಟ್ಟಲಾಗಿರುವ ಈ
’ಕ್ಯಾಂಪು’ಗಳನ್ನು ದಿನಕ್ಕೆ ಎರಡು ಸಾವಿರದಷ್ಟು ಜನ ತಲುಪುತ್ತಿದ್ದಾರೆ. ೧೦-೧೫ ಮಿಲಿಯನ್ ಜನರಿಗೆ ನೆಲೆ ಬೇಕಿದೆ. ಆಹಾರ ಔಷಧಿ ಎಲ್ಲರಿಗೂ ಸಾಕಾಗುವಷ್ಟಿಲ್ಲ. ತೀವ್ರವಾಗಿ ನಿತ್ರಾಣಗೊಂಡವರನ್ನು, ಖಾಯಿಲೆ ಬಿದ್ದವರನ್ನು ಉಳಿಸಿಕೊಳ್ಳಲಾಗುತ್ತಿಲ್ಲ. ಸತ್ತವರನ್ನು ಅಲ್ಲೇ ಕ್ಯಾಂಪಿನ ಪಕ್ಕದಲ್ಲಿ ಸಾಲು ಸಾಲಾಗಿ ಮಣ್ಣಿಗಿಡಲಾಗುತ್ತಿದೆ. ಬದುಕಿಗೆ ಅಂಟಿಕೊಂಡವರಿಗೆ ಭರವಸೆ ಸಾಲುತ್ತಿಲ್ಲ. ಬಡತನವನ್ನು ತಮ್ಮ ಮೈಯ್ಯ ಚರ್ಮದಷ್ಟು ಸ್ವಾಭಾವಿಕವಾಗಿ ತೆಗೆದುಕೊಂಡಿರುವ ಈ ಮಣ್ಣ ಮಕ್ಕಳಿಗೆ ಸಾವೇ ನಿತ್ಯ ಸತ್ಯ. ಬದುಕು, ಸಾವಿಗಾಗಿ ನಿಲ್ಲುವ ಸರದಿ ಸಾಲು ಮಾತ್ರ.
ಲಕ್ಷಾಂತರ ಜನರು ಗುಳೆ ಎದ್ದು ಬರುತ್ತಿರುವುದು ಕೆನ್ಯಾ ಇಥಿಯೋಪಿಯಾದಂತ ಸಣ್ಣ ದೇಶಗಳ ಮೇಲೂ ಹೊರೆಯಾಗುತ್ತಿವೆ. ಬರ ಆಫ್ರಿಕಾದ ಇತರ ಭಾಗಗಳಿಗೂ ಹರಡುತ್ತಿದೆ. ಈಗ ತುರ್ತಾಗಿ ಸಹಾಯ ಬರಬೇಕಿರುವುದು ಅಭಿವೃಧ್ಧಿ ಹೊಂದಿರುವ, ಅಭಿವೃಧ್ಧಿಯ ರೇಸಿನಲ್ಲಿರುವ, ತಿಂದು ತೇಗಿ ಕುಳಿತಿರುವ ರಾಷ್ಟ್ರಗಳಿಂದ ಮತ್ತು ಜೀವವನ್ನು ಪ್ರೀತಿಸುವ ಪ್ರೀತಿಯ ಮನಸ್ಸುಗಳಿಂದ. ನಿಮಗೇನಾದರೂ ಸಹಾಯ ಮಾಡಲು ಸಾಧ್ಯವಾದರೆ ದಯವಿಟ್ಟು ಮಾಡಿ. ಕೇರ್, ವರ್ಲ್ಡ್ ಫುಡ್ ಪ್ರೋಗ್ರಾಂ, ಡಾಕ್ಟರ್ಸ್ ವಿತೌಟ್ ಬಾರ್ಡರ್ಸ್ ಇತ್ಯಾದಿ ಸಂಘಗಳು ಅಲ್ಲಿಯ ಜನರನ್ನು ತಲುಪಿ ಸಹಾಯ ಮಾಡಲು ಪ್ರಯತ್ನಿಸುತ್ತಿವೆ. ನಿಮ್ಮ ನಮ್ಮ ಸಹಾಯ ಒಂದು ಹನಿಯಷ್ಟಾದರೂ ಆಗಲಿ. ಬದುಕಿದಷ್ಟು ದಿನ ಬದುಕನ್ನು ಸಂಭ್ರಮಿಸಿ, ಪ್ರೀತಿಸಿ, ಪೋಷಿಸುವ ತೃಪ್ತಿ ನಮಗೂ ಸಿಗಲಿ.
http://www.care.org/
https://doctorswithoutborders.org/