ಬೇಕಾಗುವ ಪದಾರ್ಥಗಳು:

ಹಸಿ ತೊಗರಿಕಾಳು-೧ ಪಾವು

ಹುರುಳಿಕಾಯಿ/ಬೀನ್ಸ್-ಅರ್ಧ ಕೆಜಿ

ಈರುಳ್ಳಿ-೨ ಮಧ್ಯಮ ಗಾತ್ರದ್ದು

ಬೆಳ್ಳುಳ್ಳಿ-೧೬ ಎಸಳು

ಟೊಮ್ಯಾಟೊ-೧ ಮಧ್ಯಮ ಗಾತ್ರದ್ದು

ಹುಳಿಪುಡಿ/ಸಾಂಬಾರು ಪುಡಿ-೨ ಟೀ ಸ್ಪೂನ್

ಧನಿಯಾ ಪುಡಿ-೧ ಸ್ಪೂನ್

ಮೆಣಸಿನಕಾಯಿ ಪುಡಿ-೧ ಸ್ಪೂನ್

ಕಾಯಿತುರಿ-೧/೨ ಹೋಳು

ಕೊತ್ತಂಬರಿ ಸೊಪ್ಪು-೧/೪ ಕಟ್ಟು (೮-೧೦ ಕಡ್ಡಿ)

ಹುಣಸೆಹಣ್ಣು-೧ ಸಣ್ಣ ನಿಂಬೆ ಹಣ್ಣಿನ ಗಾತ್ರ

ಸಾಸಿವೆ-೧/೨ ಸ್ಪೂನ್

ಒಣ ಮೆಣಸಿನಕಾಯಿ-೩

ಕರಿಬೇವು-೨ ಕಡ್ಡಿ

ಎಣ್ಣೆ-೧ ಕಪ್

ಉಪ್ಪು-ರುಚಿಗೆ ತಕ್ಕಷ್ಟು

 

 

 
 
 
 
 

 

ಬಗೆ-೧
ಹಸಿ ತೊಗರಿಕಾಳು, ಹುರುಳಿ ಕಾಯಿ (ಬೀನ್ಸ್) ಬಸ್ಸಾರು

ಶ್ರೀಮತಿ ಪೂರ್ಣಿಮಾ ಸತ್ಯ, ಬೆಂಗಳೂರು

 
ವಿಧಾನ:

ಹಸಿ ತೊಗರೆಕಾಳನ್ನು ಬಿಡಿಸಿಟ್ಟುಕೊಳ್ಳಿ. ಹುರುಳಿಕಾಯನ್ನು ಇಂಚಿನುದ್ದಕ್ಕೆ ಕತ್ತರಿಸಿಟ್ಟುಕೊಂಡು ನೀರು ಮತ್ತು ಸ್ವಲ್ಪ ಉಪ್ಪು ಹಾಕಿ ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ.
ಬೆಂದಕಾಳು-ಬೀನ್ಸ್ ಅನ್ನು ಬಸಿದು ನೀರನ್ನು ಪ್ರತ್ಯೇಕವಾಗಿ ತೆಗೆದಿಟ್ಟುಕೊಳ್ಳಿ.
 
ಬಸಿದ ನೀರಿನಲ್ಲಿ ಸಾರು ಮಾಡುವ ವಿಧಾನ:
 
  • ಈರುಳ್ಳಿಗಳನ್ನು ಹೆಚ್ಚಿಟ್ಟುಕೊಳ್ಳಿ. ಬೆಳ್ಳುಳ್ಳಿಗಳನ್ನು ಬಿಡಿಸಿಟ್ಟುಕೊಳ್ಳಿ. ಹೆಚ್ಚಿದ ಈರುಳ್ಳಿಗಳಲ್ಲಿ ಅರಧವನ್ನು, ಅರ್ಧ ಪಾಲು ಬೆಳ್ಳುಳ್ಳಿ ಜೊತೆ ಒಂದು ಬಾನಲಿಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಹುರಿದುಕೊಳ್ಳಿ.
  • ಹುರಿದ ಈರುಳ್ಳಿ-ಬೆಳ್ಳುಳ್ಳಿ, ಹಸಿ ಈರುಳ್ಳಿ-ಬೆಳ್ಳುಳ್ಳಿ, ಟೊಮ್ಯಾಟೋ, ಹುಳಿಪುಡಿ, ಧನಿಯಾ-ಮೆಣಸಿನಕಾಯಿಪುಡಿ, ಕಾಯಿತುರಿ, ಕೊತ್ತಂಬರಿಸೊಪ್ಪು, ಹುಣಸೆಹಣ್ಣು-ಇವಿಷ್ಟನ್ನೂ ಮಿಕ್ಸಿ ಅಥವಾ ಬ್ಲೆಂಡರ್ ಗೆ ಹಾಕಿ ಸಣ್ಣಗೆ ರುಬ್ಬಿಟ್ಟುಕೊಳ್ಳಿ.
  • ಸ್ಟವ್ ಮೇಲೆ ಗಟ್ಟಿ ತಳದ ಪಾತ್ರೆ ಇಟ್ಟು ಅದಕ್ಕೆ ೨ ಟೀ ಸ್ಪೂನ್ ಎಣ್ಣೆ ಹಾಕಿ ಕಾಯಲು ಬಿಡಿ.
  • ಎಣ್ಣೆ ಕಾದ ಮೇಲೆ, ಸಾಸಿವೆ, ಕರಿಬೇವು ಒಗ್ಗರಣೆ ಹಾಕಿ ಅದಕ್ಕೆ ರುಬ್ಬಿಟ್ಟುಕೊಂಡಿರುವ ಮಸಾಲೆಯನ್ನು ಹಾಕಿ ಚನ್ನಾಗಿ ಬೇಯಿಸಿ.
  • ಮಸಾಲೆ ಚನ್ನಾಗಿ ಬೆಂದ ಮೇಲೆ, ಹಸಿ ತೊಗರಿಕಾಳಿನ ಬಸಿದ ನೀರನ್ನು ಸೇರಿಸಿ ಕುದಿಸಿ, ಇದಕ್ಕೆ ಇನ್ನು ಸ್ವಲ್ಪ ನೀರು ಸೇರಿಸಿ ಸಾರಿನ ಹದಕ್ಕೆ ತಂದು ರುಚಿಗೆ ತಕ್ಕಷ್ಟು ಉಪ್ಪು ಹಾಕಿ (ಕಾಳು-ಬೀನ್ಸ್ ಅನ್ನು ಬೇಯಿಸುವಾಗಲೂ ಉಪ್ಪು ಹಾಕಿರುತ್ತೀರಿ) ಸಾರು ಹದ ಬರುವವರೆಗೂ ಕುದಿಸಿ.
  • ಈ ಸಾರನ್ನು ಮುದ್ದೆ, ಅನ್ನದ ಜೊತೆಯಲ್ಲಿ ತುಪ್ಪ ಬಡಿಸಿಕೊಂಡು ತಿಂದರೆ ಬಹಳ ರುಚಿಯಾಗಿರುತ್ತದೆ.
  • ಬಸ್ಸಾರನ್ನು ಪ್ರತಿದಿನವೂ ಸ್ಟವ್ ಮೇಲಿಟ್ಟು ಕುದಿಸುತ್ತಿದ್ದರೆ ೪-೫ ದಿನ ಬಳಸಬಹುದು. ದಿನ ಕಳೆದಂತೆ ಈ ಸಾರಿನ ರುಚಿ ಹೆಚ್ಚುತ್ತದೆ.
 
ಬಸಿದ ಕಾಳಿನಲ್ಲಿ ಪಲ್ಯ ಮಾಡುವ ವಿಧಾನ:
 
  • ಬಾಣಲಿಯೊಂದನ್ನು ಸ್ಟವ್ ಮೇಲಿಡಿ. ೨ ಸ್ಪೂನ್ ಎಣ್ಣೆ ಹಾಕಿ, ಸಾಸಿವೆ-ಕರಿಬೇವು-ಒಣ ಮೆಣಸಿನಕಾಯಿ ಒಗ್ಗರಣೆ ಕೊಡಿ (ಹಸಿಮೆಣಸಿನಕಾಯಿಯನ್ನೂ ಬಳಸಬಹುದು. ಆಗ ರುಚಿ ಸ್ವಲ್ಪ ಬೇರೆ ಬರುತ್ತದೆ).
  • ಇದಕ್ಕೆ ನೀರು ಬಸಿದು ತೆಗೆದಿಟ್ಟಿರುವ ಕಾಳು-ಬೀನ್ಸ್ ಅನ್ನು ಸೇರಿಸಿ ಮಿಕ್ಸ್ ಮಾಡಿ. ಕಾಳು-ತರಕಾರಿ ಈಗಾಗಲೇ ಬೆಂದಿರುವುದರಿಂದ ಈ ಪಲ್ಯವನ್ನು ಹೆಚ್ಚು ಬೇಯಿಸಬಾರದು. ಇದಕ್ಕೆ ಬೇಕೆನಿಸಿದರೆ ಒಂದು ಸ್ಪೂನ್ ಕಾಯಿ ತುರಿ ಉದುರಿಸಬಹುದು. 




ಬಗೆ ೨
ವಿಶ್ವದೆಲ್ಲೆಡೆಯ ಅಡುಗೆ-ತಿನಿಸುಗಳ ಹಾಗೂ ನಮ್ಮ ನಿಮ್ಮ ಪಾಕ ಪ್ರಯೋಗ ಶಾಲೆಗಳಲ್ಲಿ ಹುಟ್ಟುವ ಹೊಸ ರುಚಿಗಳ ವಿನಿಮಯ.
 
 ಬೇಕಾಗುವ ಪದಾರ್ಥಗಳು:
 
ದಪ್ಪ ಮೆಣಸಿನಕಾಯಿ-೨
 
ಜ಼ುಕಿನಿ-೧
 
ಈರುಳ್ಳಿ-೧ ಸಣ್ಣದು
 
ಹಳದಿ ಸ್ಕ್ವಾಶ್-೧
 
ಎಳೆಯ ಹಲ್ಲು ಜೋಳ-೧ ಟೇಬಲ್ ಸ್ಪೂನ್ (ಫ್ರೋಜ಼ನ್ ಬಳಸಬಹುದು)
 
ಟೊಮ್ಯಾಟೋ-(ಚೆರ್ರಿ ಟೊಮ್ಯಾಟೊ)-೮ ರಿಂದ ೧೦
 
ಬೆಣ್ಣೆ-೨ ಸ್ಪೂನ್
 
ಬೆಳ್ಳುಳ್ಳಿ-೧ ಮೊಗ್ಗು-ಸಣ್ಣಗೆ ಕತ್ತರಿಸಬೇಕು
 
ಕೊತ್ತಂಬರಿ ಸೊಪ್ಪು-೨ ಕಡ್ಡಿ (ಸಣ್ಣಗೆ ಕತ್ತರಿಸಿದ್ದು)
 
ಬ್ರೆಡ್ ಕ್ರಂಬ್ಸ್-೨ ಟೀ ಸ್ಪೂನ್
 
ಒಣ ದ್ರಾಕ್ಷಿ-೧ ಟೇಬಲ್ ಸ್ಪೂನ್ (ಬದಲಿಗೆ ಕ್ರ್ಯಾನ್ ಬೆರ್ರಿಗಳನ್ನೂ ಬಳಸಬಹುದು)
 
ಸೂರ್ಯಕಾಂತಿ ಬೀಜ-೧ ಟೇಬಲ್ ಸ್ಪೂನ್ (ಸ್ವಲ್ಪ ಫ್ರೈ ಮಾಡಿಕೊಳ್ಳಬೇಕು)
 
ಕಪ್ಪು (ಕಾಳು) ಮೆಣಸಿನ ಪುಡಿ-೧೪ ಟೀ ಸ್ಪೂನ್
 
ಕೆಂಪುಮೆಣಸಿನ ಪುಡಿ-೧/೪ ಟೀ ಸ್ಪೂನ್
 
ಉಪ್ಪು-ರುಚಿಗೆ ಬೇಕಾದಷ್ಟು
 
ಚೀಸ್-ತುರಿದ ಪರ್ಮಶಾನ್ ಅಥವಾ ಚೆಡ್ಡರ್ (ಇಲ್ಲಿ ಪರ್ಮಶಾನ್ ಬಳಸಿದೆ)
 
 
 
 

 

ಸ್ಟಫ್ ಮಾಡಿ ಗ್ರಿಲ್ ಮಾಡಿದ ದಪ್ಪ ಮೆಣಸಿನಕಾಯಿ (ಬೆಲ್ ಪೆಪ್ಪರ್) 

 
ವಿಧಾನ:
  • ಗ್ರಿಲ್ ಅನ್ನು ಸ್ವಚ್ಚ ಮಾಡಿ ಅದರ ಮೇಲೆ ಡಬಲ್ ಡ್ಯೂಟಿ ಅಲ್ಯುಮಿನಿಯಂ ಫಾಯಿಲ್ ಅನ್ನು (ಎರಡು ಲೇಯರ್ಸ್) ಹಾಸಬೇಕು. ಗ್ರಿಲ್ ಆನ್ ಮಾಡಬೇಕು.
  • ಗ್ರಿಲ್ ಬಿಸಿಯಾಗುವವರೆಗೆ (400°F),
  • ದೊಡ್ಡ ಮೆಣಸಿನಕಾಯಿಗಳನ್ನು (ಬೆಲ್ ಪೆಪ್ಪೆರ್) ಅರ್ಧಕ್ಕೆ ಅದರ ಕತ್ತರಿಸಿ ಬೀಜ ತೆಗೆಯಬೇಕು.
  • ಈರುಳ್ಳಿ, ಜ಼ುಕಿನಿ ಮತ್ತು ಹಳದಿ ಸ್ಕ್ವಾಶ್ ಅನ್ನು ಸಣ್ಣಗೆ ಕತ್ತರಿಸಿಕೊಳ್ಳಬೇಕು. ಚೆರ್ರಿ ಟೊಮ್ಯಾಟೋಗಳನ್ನು ಅರ್ಧಕ್ಕೆ ಕತ್ತರಿಸಿಕೊಳ್ಳಬೇಕು (ಚೆರ್ರಿ ಟೊಮ್ಯಾಟೊ ಸಿಗದಿದ್ದರೆ ಬೇರೆ ಟೊಮ್ಯಾಟೋಗಳನ್ನೂ ಬಳಸಬಹುದು)
  • ಒಂದು ಪ್ಯಾನ್ ಅನ್ನು ಕಡಿಮೆ ಫ್ಲೇಮ್ ನಲ್ಲಿ ಬಿಸಿಗಿಡಬೇಕು.
  • ಪ್ಯಾನ್ ಬಿಸಿಯಾದಾಗ ಅದಕ್ಕೆ ಬೆಣ್ಣೆ ಹಾಕಿ, ಬೆಣ್ಣೆ ಪೂರ್ತಿ ಕರಗುವ ಮೊದಲು ಸಣ್ಣಗೆ ಕತ್ತರಿಸಿರುವ ಬೆಳ್ಳುಳ್ಳಿ ಚೂರುಗಳನ್ನು ಹಾಕಬೇಕು. ಅದನ್ನು ಹೆಚ್ಚು ಕರಟಿ ಹೋಗಲು ಬಿಡಬಾರದು.
  • ಬೆಳ್ಳುಳ್ಳಿ ಸ್ವಲ್ಪ ಬಾಡಿದ ತಕ್ಷಣ ಕತ್ತರಿಸಿದ ಈರುಳ್ಳಿ, ಜ಼ುಕಿನಿ, ಸ್ಕ್ವಾಶ್, ಎಳೆ ಹಲ್ಲು ಜೋಳ ಇವನ್ನು ಹಾಕಿ ಸ್ವಲ್ಪ ಫ್ರೈ ಮಾಡಿಕೊಳ್ಳಬೇಕು. ನಂತರ ಟೊಮ್ಯಾಟೋ ಚೂರುಗಳನ್ನು ಸೇರಿಸಿ ಮಿಕ್ಸ್ ಮಾಡಬೇಕು.
  • ಅದಕ್ಕೆ ೧/೪ ಸ್ಪೂನ್ ಕಪ್ಪು ಮೆಣಸಿನ ಪುಡಿ, ೧/೪ ಸ್ಪೂನ್ ಕೆಂಪು ಮೆಣಸಿನಕಾಯಿ ಪುಡಿ, ಸ್ವಲ್ಪ ಉಪ್ಪನ್ನು ಉದುರಿಸಿ ಸರಿಯಾಗಿ ಮಿಕ್ಸ್ ಮಾಡಬೇಕು.
  • ನಂತರ ಇದಕ್ಕೆ ಹುರಿದಿರುವ ಸೂರ್ಯಕಾಂತಿ ಬೀಜ ಮತ್ತು ಒಣದ್ರಾಕ್ಷಿ ಸೇರಿಸಿ ಮತ್ತೆ ಮಿಕ್ಸ್ ಮಾಡಬೇಕು. (ಎಲ್ಲವನ್ನೂ ಪ್ಯಾನ್ ನಲ್ಲಿ ಬೇಗನೇ ಫ್ರೈ ಮಾಡಿಕೊಳ್ಳಬೇಕು. ತರಕಾರಿಗಳನ್ನು ಹೆಚ್ಚು ಬೇಯಿಸಬಾರದು)
  • ಇದಕ್ಕೆ ಬ್ರೆಡ್ ಕ್ರಂಬ್ಸ್ ಮತ್ತು ಕತ್ತರಿಸಿರುವ ಕೊತ್ತಂಬರಿ ಸೊಪ್ಪು ಸೇರಿಸಬೇಕು. ಇವಿಷ್ಟನ್ನೂ ೧/೨ ನಿಮಿಷ ಕಲೆಸಿ ಪ್ಯಾನ್ ಅನ್ನು ಬಿಸಿಯಿಂದ ತೆಗೆದಿಡಬೇಕು.
  • ಅರ್ಧಕ್ಕೆ ಕತ್ತರಿಸಿಟ್ಟಿರುವ ದಪ್ಪ ಮೆಣಸಿನಕಾಯಿಯ ಒಳಗೆ ಫ್ರೈ ಮಾಡಿಕೊಂಡಿರುವ ಮೇಲೆ ತಿಳಿಸಿರುವ ತರಕಾರಿಗಳ ಮಿಕ್ಸ್ ಅನ್ನು ತುಂಬಿಸಬೇಕು.
  • ಇಷ್ಟರಲ್ಲಿ ಗ್ರಿಲ್ ಬಿಸಿಯಾಗಿರುತ್ತದೆ. ಅಲ್ಯೂಮಿನಿಯಮ್ ಫಾಯಿಲ್ ಮೇಲೆ ತೆಳುವಾಗಿ ಎಣ್ಣೆ ಹಚ್ಚಬೇಕು. ಅದರ ಮೇಲೆ ತರಕಾರಿ ತುಂಬಿಸಿಟ್ಟಿರುವ ದಪ್ಪ ಮೆಣಸಿನಕಾಯಿಗಳನ್ನು ಜೋಡಿಸಿ, ಗ್ರಿಲ್ ನ ಮೇಲೆ ಅದನ್ನು ೮-೧೦ ನಿಮಿಷ ಬೇಯಿಸಬೇಕು. (ಇದನ್ನು ಅತಿಯಾಗಿ ಬೇಯಲು ಬಿಡಬಾರದು).
  • ದಪ್ಪ ಮೆಣಸಿನಕಾಯಿಗಳನ್ನು ಹೊರ ತೆಗೆದು ಅದರ ಮೇಲೆ ತುರಿದ ಚೀಸ್ ಅನ್ನು ಉದುರಿಸಿ ತಿಂದರೆ ಬಹಳ ರುಚಿಯಾಗಿರುತ್ತದೆ. ಹೆಚ್ಚು ಖಾರ ಇಷ್ಟ ಪಡುವವರು ಇದನ್ನು ನಿಮಗಿಷ್ಟ ಬಂದ ಖಾರದ ಸಾಸ್ ಜೊತೆ ತಿನ್ನಬಹುದು.

 





 
 
 
 
 
Copyright © 2011 Neemgrove Media
All Rights Reserved